ಮೈಸೂರಿನಲ್ಲಿ ಪ್ರವಾಸಕ್ಕೆ ಪತಿ ಅನುಮತಿ ನಿರಾಕರಿಸಿದ್ದಕ್ಕೆ ಗೃಹಿಣಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮ*ಹತ್ಯೆಯಲ್ಲ, ಕೊಲೆ ಎಂದು ಮಗಳು ಆರೋಪಿಸಿದರೆ, ಮಗ ತಂದೆಯ ಪರ l. ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು (ಫೆ.20): ಸಾಂಸ್ಕೃತಿಕ ನಗರಿ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದ ಗೃಹಿಣಿಯೊಬ್ಬರ ಆತ್ಮ*ಹತ್ಯೆ ಪ್ರಕರಣವು ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ಪ್ರವಾಸಕ್ಕೆ ತೆರಳಲು ಪತಿ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದು 46 ವರ್ಷದ ಸಂಧ್ಯಾ ಎಂಬುವವರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಆದರೆ, ಈ ಸಾವಿನ ಸುತ್ತ ಇದೀಗ ಕುಟುಂಬದ ಸದಸ್ಯರ ನಡುವೆಯೇ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.
ಘಟನೆಯ ಹಿನ್ನೆಲೆ:
ಮೂಲತಃ ಬೆಂಗಳೂರಿನವರಾದ ಸಂಧ್ಯಾ ಅವರು 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಸೃಷ್ಟಿ ಎಂಬ ಪುತ್ರಿ ಹಾಗೂ ಕೌಶಿಕ್ ಎಂಬ ಪುತ್ರನಿದ್ದಾನೆ. ಸೃಷ್ಟಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಕೌಶಿಕ್ ತಂದೆ-ತಾಯಿಯೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾನೆ.
ಕಳೆದ ಬುಧವಾರ ಸಂಜೆ ಪ್ರವಾಸಕ್ಕೆ (ಫಾರಿನ್ ಟ್ರಿಪ್) ಹೋಗುವ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಗಲಾಟೆಯ ನಂತರ ರಂಗನಾಥ್ ಮನೆಯಿಂದ ಹೊರಹೋಗಿದ್ದ ಸಮಯದಲ್ಲಿ ಸಂಧ್ಯಾ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.
ನನ್ನ ತಾಯಿ ಸಂಧ್ಯಾಳ ಸಾವು ಕೇವಲ ಆತ್ಮ*ಹತ್ಯೆಯಲ್ಲ, ಇದೊಂದು ಕೊಲೆ ಎಂದು ಮೃತ ಸಂಧ್ಯಾ ಅವರ ಪುತ್ರಿ ಸೃಷ್ಟಿ ಗಂಭೀರ ಆರೋಪ ಮಾಡಿದ್ದಾರೆ. ‘ನನ್ನ ತಂದೆ ಮತ್ತು ಸಹೋದರ ಸೇರಿಕೊಂಡು ತಾಯಿಗೆ ಕಿರುಕುಳ ನೀಡುತ್ತಿದ್ದರು. ತಂದೆ ಯಾವಾಗಲೂ ತಾಯಿಯನ್ನು ಅನುಮಾನದಿಂದ ನೋಡುತ್ತಿದ್ದರು ಹಾಗೂ ಹಣದ ವಿಷಯಕ್ಕೆ ಗಲಾಟೆ ಮಾಡುತ್ತಿದ್ದರು.
ನನ್ನ ತಾಯಿಯ ಸಾವಿಗೆ ಇವರಿಬ್ಬರೇ ಕಾರಣ, ಅವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ತಾಯಿಯ ಅಂತ್ಯಸಂಸ್ಕಾರವನ್ನು ಇವರು ಮಾಡಬಾರದು, ಬದಲಿಗೆ ನನ್ನ ಮಾವ ಮಾಡಬೇಕು’ ಎಂದು ಸೃಷ್ಟಿ ಆಕ್ರೋಶ ಹೊರಹಾಕಿದ್ದಾರೆ.
ತಂದೆಯ ಪರ ನಿಂತ ಮಗ: ‘ಅಕ್ಕ ಸುಳ್ಳು ಹೇಳುತ್ತಿದ್ದಾಳೆ’
ಇನ್ನೊಂದೆಡೆ, ಮೃತ ಸಂಧ್ಯಾ ಅವರ 17 ವರ್ಷದ ಮಗ ಕೌಶಿಕ್ ತನ್ನ ತಂದೆಯ ಪರವಾಗಿ ಹೇಳಿಕೆ ನೀಡಿದ್ದಾನೆ. ‘ನಮ್ಮ ಕುಟುಂಬದಲ್ಲಿ ಯಾವುದೇ ಜಗಳವಿರಲಿಲ್ಲ. ತಾಯಿ ಪ್ರವಾಸಕ್ಕೆ ಹೋಗುತ್ತೇನೆ ಎಂದಾಗ, ನನಗೆ ಪರೀಕ್ಷೆ ಇರುವ ಕಾರಣ ತಂದೆ ‘ಈಗ ಬೇಡ’ ಎಂದಿದ್ದರು. ಇಷ್ಟಕ್ಕೇ ಮನನೊಂದು ತಾಯಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
ಅಮ್ಮ ಸಾವಿಗೆ ಶರಣಾಗಿದ್ದನ ನಂತರ ಶವವನ್ನು ನಾನೇ ಮೊದಲು ನೋಡಿದ್ದೇನೆ. ನಂತರ ಅಪ್ಪ ಬಂದು ನೋಡಿದ್ದಾರೆ. ಆದರೆ, ಅಕ್ಕ ವಿದೇಶದಲ್ಲಿದ್ದುಕೊಂಡು ಅಪ್ಪನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ’ ಎಂದು ಕೌಶಿಕ್ ತಿಳಿಸಿದ್ದಾನೆ.
ಪತಿ ರಂಗನಾಥ್ ಸ್ಪಷ್ಟನೆ:
ಪತ್ನಿಯ ಸಾವಿನ ಬಗ್ಗೆ ಮಾತನಾಡಿದ ರಂಗನಾಥ್, ‘ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳ ಹೆಸರಿಗೇ 90% ಆಸ್ತಿ ಮಾಡಿದ್ದೇನೆ. ಈ ಹಿಂದೆ ಡೆನ್ಮಾರ್ಕ್ ಸೇರಿದಂತೆ ಹಲವು ದೇಶಗಳಿಗೆ ಅವಳನ್ನು ನಾನೇ ಪ್ರವಾಸಕ್ಕೆ ಕಳುಹಿಸಿಕೊಟ್ಟಿದ್ದೆ. ಈ ಬಾರಿ ಮಗನ ಎಕ್ಸಾಮ್ ಇದೆ ಎಂಬ ಕಾರಣಕ್ಕೆ ಬೇಡ ಎಂದಿದ್ದೆ. ಫೋನಿನಲ್ಲಿ ಯಾರೋ ಮಾತನಾಡುತ್ತಾರೆ ಎಂಬ ವಿಷಯಕ್ಕೆ ಹಿಂದೆ ಒಮ್ಮೆ ಗಲಾಟೆಯಾಗಿದ್ದು ನಿಜ. ಆದರೆ, ನಾನು ಅವಳನ್ನು ಕೊಂದಿಲ್ಲ. ಎಫ್‌ಎಸ್‌ಎಲ್ (FSL) ವರದಿ ಬರಲಿ, ಸತ್ಯ ತಿಳಿಯಲಿದೆ’ ಎಂದಿದ್ದಾರೆ.
ಸದ್ಯ ಮೃತ ಸಂಧ್ಯಾ ಅವರ ಸಹೋದರ ಗುರುಮೂರ್ತಿ ಅವರು ನೀಡಿದ ದೂರಿನ ಮೇರೆಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಟುಂಬದ ಆಂತರಿಕ ಕಲಹ ಹಾಗೂ ಪ್ರವಾಸದ ಹಠವೊಂದು ಒಂದು ಸುಂದರ ಕುಟುಂಬವನ್ನು ಬೀದಿಪಾಲು ಮಾಡಿದೆ.
ಗಂಡ ಫಾರಿನ್ ಟ್ರಿಪ್ ಕಳಿಸಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ.! ಕೊಲೆ ಎಂದು ಆರೋಪಿಸಿದ ಮಗಳು!
WhatsApp Group
Join Now