ಮಾಗಡಿ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ನಮಗೆ ಪರಿಹಾರ ನೀಡದಿದ್ದರೂ ಸರಿಯೇ, ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡಲಿ ಎಂದು ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ರಾಜೇಶ್ ಕುಟುಂಬ ಮಾಧ್ಯಮದವರ ಎದುರು ಅಳಲು ತೋಡಿಕೊಂಡಿದೆ.
ತಾಲೂಕಿನ ಗುಡೇಮಾರನಹಳ್ಳಿಯ ಸಿಡಗನಹಳ್ಳಿ ಬಳಿ ಡಿ.12 ರಂದು ಎಚ್.ಎಂ.ರೇವಣ್ಣ ಪುತ್ರ ಶಶಾಂಕ್ ಮಾಲೀಕತ್ವದ ಕಾರು ಓವರ್ ಟೇಕ್ ಮಾಡುವ ವೇಳೆ ಬೈಕ್ಗೆ ಡಿಕ್ಕಿಯೊಡೆದು ನಿಲ್ಲಿಸದೇ ತೆರಳಿತ್ತು. ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ನನ್ನ ಸಹೋದರ ರಾಜೇಶ್ ಮೃತಪಟ್ಟಿದ್ದ. ಈ ವೇಳೆ ಮಾನವೀಯತೆಗಾಗಿಯಾದರೂ ರೇವಣ್ಣ ಪುತ್ರ ಶಶಾಂಕ್ ಕಾರು ನಿಲ್ಲಿಸಿ ಬದುಕಿದ್ದಾನೆಯೇ ಅಥವಾ ಇಲ್ಲವೆ ಎಂದೂ ನೋಡದೇ ಸ್ಥಳದಿಂದ ಪರಾರಿ ಆಗಿದ್ದರು. ನಂತರ ಸ್ಥಳಿಯರು ಸನ್ಪ್ಯೂರ್ ಕಾರ್ಖಾನೆ ಬಳಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಅವರಿಗೆ ನಾನು ಎಚ್.ಎಂ.ರೇವಣ್ಣ ಪುತ್ರ ಎಂದು ಧಮ್ಕಿ ಹಾಕಿದ್ದಾರೆ.
ನಂತರ ಅವರ ತಂದೆ ಎಚ್.ಎಂ.ರೇವಣ್ಣ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಆಂಬುಲೆಬನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದ್ದು ಬಿಟ್ಟರೆ ಮೃತಪಟ್ಟವರು ಯಾರು ಎಂದೂ ವಿಚಾರಿಸಿಲ್ಲ ಎಂದು ಮೃತನ ಸಹೋದರಿ ನಂದಿನಿ ಆರೋಪಿಸಿದರು.ರಾಜೇಶ್ ಕಾರನ್ನು ಓವರ್ ಟೇಕ್ ಮಾಡಲು ಮುಂದಾಗಿ ಎರಡು ಬೈಕ್ನಲ್ಲಿ ಬಂದು ಗುದ್ದಿಕೊಂಡಿದ್ದಾರೆಂದು ಎಚ್.ಎಂ.ರೇವಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಇನ್ನೊಂದು ಬೈಕ್ ಸವಾರ ಎಲ್ಲಿದ್ದಾನೆ? ಇಷ್ಟು ದಿನ ಕಳೆದರೂ ಸೌಜನ್ಯಕ್ಕಾದರೂ ಮನೆಯ ಬಳಿ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ನಾವು ಅಷ್ಟು ಹಣ ನೀಡಿದ್ದೇವೆ ಎಂದು ಮಾತನಾಡುತ್ತಿದ್ದಾರೆ, ನಾವು ಸಹೋದರನನ್ನು ಕಳೆದುಕೊಂಡು ಇನ್ನೂ ದುಃಖದಲ್ಲೆ ಮುಳುಗಿದ್ದೇವೆ. ಈ ಮಧ್ಯೆ ಹಣ ನೀಡಿದ್ದೇವೆ ಎಂದು ಸುಳ್ಳು ಹೇಳುವುದು ಎಷ್ಟು ಸರಿ ಎಂದು ನಂದಿನಿ ಪ್ರಶ್ನಿಸಿದರು.
ಸಾಯಲು ನಮ್ಮ ಕಾರೇ ಬೇಕಿತ್ತಾ?
ಎಚ್.ಎಂ.ರೇವಣ್ಣ ಅವರ ಮನೆಯ ಬಳಿಗೆ ಬೆಳಗುಂಬ ಗ್ರಾಮದ ಹಿರಿಯ ಮುಖಂಡರು ಇಡೀ ಕುಟುಂಬದವರನ್ನು ಕರೆದೊಯ್ದು ಸಂಜೆಯವರೆಗೂ ಕೂರಿಸಿಕೊಂಡು ಪ್ರತಿಭಟಿಸಿದಾಗ 2 ಲಕ್ಷ ಮಾತ್ರ ನೀಡುತ್ತೇನೆ. ಬೇಕಾದರೆ ತೆಗೆದುಕೊಂಡು ಹೋಗಿ ಎಂದರಲ್ಲದೆ, ಸಾಯಲು ನಮ್ಮ ಕಾರೇ ಬೇಕಿತ್ತಾ, ಎಲ್ಲೆಲ್ಲೋ ಸಾಯುತ್ತಾರೆ, ಅದಕ್ಕೆಲ್ಲಾ ನಾವು ಜವಾಬ್ದಾರರಾಗಲು ಆಗುತ್ತದೆಯೇ? ನಾನು ಮೃತದೇಹವನ್ನು ಆಂಬುಲೆನ್ಸ್ನಲ್ಲಿ ಕಳುಹಿಸಲಿಲ್ಲವಾ ಎಂದು ಹೇಳಿ ಬರಿಗೈಲಿ ವಾಪಸ್ ಕಳುಹಿಸಿದ್ದಾರೆ ಹೊರತು ನಯಾ ಪೈಸೆ ನೀಡಿಲ್ಲ.
ನಮ್ಮ ಅಪ್ಪ, ಅಮ್ಮನಿಗೆ ದಿಕ್ಕು ಯಾರು ಎಂದು ಪ್ರಶ್ನಿಸಿದ್ದಕ್ಕೆ ನಾನೇನು ಮಾಡಲಿ, ಅವರನ್ನು ನಾನು ನೋಡಿಕೊಳ್ಳಬೇಕಾ? ಎಂದರು. ನಮ್ಮ ಕಾರಿಗೆ ಇನ್ಷುರೆನ್ಸ್ ಇದೆ. ನ್ಯಾಯಾಲಯದಲ್ಲಿ ಮಾತನಾಡೋಣ ಹೋಗಿ, ಮಾಧ್ಯಮಕ್ಕೆ ಹೋಗಿದ್ದಕ್ಕೆ ನಮ್ಮ ಮರ್ಯಾದೆ ಹಾಳಾಗಿದೆ ಎನ್ನುವ ಅವರು ನನ್ನ ಸಹೋದರನನ್ನು ಕಳೆದುಕೊಂಡು ನಮಗೆಷ್ಟು ಬೇಸರವಾಗಿದೆ, ಒಂದು ಮನೆಯ ದೀಪ ಆರಿದೆ ಎಂಬ ಪಶ್ಚಾತ್ತಾಪ ಅವರಿಗಿಲ್ಲ ಎಂದು ಅಳಲು ತೋಡಿಕೊಂಡರು.
ಕಾರು ಚಾಲಕನ ಬಂಧಿಸಿಲ್ಲ
ಕಾರು ಯಾರು ಚಲಾಯಿಸುತ್ತಿದ್ದರೆಂಬುದು ಗೊತ್ತಿಲ್ಲ. ನನ್ನ ಸಹೋದರನನ್ನು ಸಾಯಿಸಿದ ಕಾರಿನ ಚಾಲಕನನ್ನು ಬಂಧಿಸಿಲ್ಲ. ಪೊಲೀಸರು ಸಹಕಾರ ನೀಡುತ್ತಿಲ್ಲ. ನಾವೇನಾದರೂ ಅಪಘಾತ ಮಾಡಿದ್ರೆ ತನಿಖೆ ನಡೆಸುತ್ತಿರಲಿಲ್ಲವೇ? ವಂಶಕ್ಕಿದ್ದ ಒಬ್ಬ ಸಹೋದರ ಮೃತಪಟ್ಟಿದ್ದಾನೆ, ಇದಕ್ಕೆ ಹೊಣೆಗಾರರು ಯಾರು ಎಂದು ಪ್ರಶ್ನಿಸಿದರು.ನನ್ನ ಮದುವೆಗೆ 20 ಲ ರೂ ಸಾಲ ಮಾಡಲಾಗಿತ್ತು, ಹಗಲಿರುಳು ದುಡಿದು ಸ್ವಲ್ಪ ಸಾಲ ತೀರಿಸಿದ್ದಾನೆ. ಉಳಿದ ಸಾಲ ತೀರಿಸುವರು ಯಾರು? ಕುಟುಂಬಕ್ಕೆ ಇದ್ದ ಒಬ್ಬನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ ಎಂದು ನಂದಿನಿ ಬೇಸರ ವ್ಯಕ್ತಪಡಿಸಿದರು.
ಮೃತನ ತಂದೆ ಗುಡ್ಡೇಗೌಡ ಮಾತನಾಡಿ, ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ನೋವಾಗಿದೆ, ಮೃತಪಟ್ಟ ವೇಳೆ ನನ್ನ ಎರಡನೇ ಮಗಳ ಮದುವೆಗೆ ಹಣ ನೀಡುವುದಾಗಿ ತಿಳಿಸಿದ್ದರು. ಈಗ ಒಂದು ನಯಾ ಪೈಸೆ ನೀಡಿಲ್ಲ, ನಮಗೆ ವೋಟು ಹಾಕಿದ್ದಾರೆ ನೋಡೋಣ ಬಿಡಿ ಎನ್ನುತ್ತಾರೆ. ನೋವಿನ ಮೇಲೆ ನೋವು ನೀಡುತ್ತಿದ್ದಾರೆ, ಅವರು ಹಣ ನೀಡುವುದು ಬೇಡ, ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ. ನಾವು ನೋವಿನಲ್ಲಿ ಇದ್ದೇವೆ, ಯಾವ ಪಕ್ಷದವರೂ ನಮ್ಮ ನೆರವಿಗೆ ಧಾವಿಸಿಲ್ಲ ಎಂದರು. ರಾಜೇಶ್ ಕುಟುಂಬದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಚ್.ಎಂ. ರೇವಣ್ಣ, ಗುರುವಾರ ಈ ಸಂಬಂಧ ಮಾಗಡಿಯಲ್ಲಿಯೇ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಹಣ ನೀಡದಿದ್ದರೂ ಸರಿ, ಅಪಪ್ರಚಾರ ನಿಲ್ಲಿಸಿ – ಕಾರು ಅಪಘಾತದಲ್ಲಿ ಮೃತಪಟ್ಟ ರಾಜೇಶ್ ಸಹೋದರಿ ನಂದಿನಿ ಅಳಲು
WhatsApp Group
Join Now