ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್

Spread the love

ಇನ್ಸ್ಟಾಗ್ರಾಮ್ ಸಿಕ್ಕ ಯುವಕನೊಬ್ಬ ಪ್ರೀತಿ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru)ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿ.ಜಿ ಬಳಿ ಕಾರಿನಲ್ಲಿ ಬಂದ ಯುವಕ, ಯುವತಿಗೆ ಹಲವು ಬಾರಿ ಥಳಿಸಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ

ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಯುವತಿಯೊಂದಿಗೆ 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು ಎನ್ನಲಾಗಿದೆ. ಪರಿಚಯದ ಬಳಿಕ ಇಬ್ಬರ ನಡುವೆ ಫೋನ್ ಕರೆ ಮತ್ತು ಮೆಸೇಜ್ ಮೂಲಕ ಸಂಪರ್ಕ ಮುಂದುವರಿದಿತ್ತು. ಆದರೆ ನವೀನ್ ಕುಮಾರ್ ಯುವತಿಯನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಪರಾರಿಯಾಗಿದ್ದ ಆರೋಪಿಯ ಬಂಧನ

ಸೋಮವಾರ ಜ್ಞಾನಭಾರತಿಯಲ್ಲಿರುವ ಯುವತಿಯ ಪಿ.ಜಿ ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಯುವತಿಯನ್ನು ಕರೆಯಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ್ದು, ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದ್ದಾಳೆ. ಆದರೆ ನವೀನ್ ಆಕೆಯ ವ್ಯಾನಿಟಿ ಬ್ಯಾಗ್ ಕಸಿದು ಅದರೊಳಗೆ ಹುಡುಕಾಟ ನಡೆಸಿ, ಯುವತಿಯ ಹಿಂದೆ ಓಡಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಎರಡು ಬಾರಿಗೂ ಹೆಚ್ಚು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

WhatsApp Group Join Now

Spread the love

Leave a Reply