ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಚಿವ ಕೃಷ್ಣಬೈರೇಗೌಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸಮೀಕ್ಷೆ ಬಹಿಷ್ಕಾರ ವಿಚಾರ ಸಂಬಂಧ ಇಂದು ಖರ್ಗೆ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಕೆಲವು ಭಾಗಗಳಲ್ಲಿ ಸಮೀಕ್ಷೆ 70% ಮುಗಿದಿದ್ದು, ಕೆಲವು ಕಡೆ 100% ಪೂರ್ಣಗೊಂಡಿದೆ ಎಂದರು.
ಸಮೀಕ್ಷೆಗೆ ವಿರೋಧಿಸುವುದು ಸಂವಿಧಾನ ವಿರೋಧಿ:
ಸಮೀಕ್ಷೆಯಲ್ಲಿ ಭಾಗವಹಿಸದಿರುವುದು ಕೆಲವರ ಸ್ವ ಇಚ್ಛೆ. ಆದರೆ, ಇದು ಸೆನ್ಸಸ್ ಅಲ್ಲ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು ನಡೆಸುವ ಸರ್ವೇ. ಈ ಸಮೀಕ್ಷೆ ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಮೀಸಲಾತಿಗೆ ಸಮೀಕ್ಷೆ ಆಧಾರ ಅಗತ್ಯ. ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಮೀಸಲಾತಿ ಕೋಟಾದಲ್ಲಿರುವವರಿಗೆ ಇದರಿಂದ ಲಾಭವಿದೆ. ಸಮೀಕ್ಷೆಗೆ ವಿರೋಧಿಸುವವರು ಸಂವಿಧಾನ ಮತ್ತು ಮೀಸಲಾತಿಗೆ ವಿರೋಧ ಮಾಡುತ್ತಿದ್ದಾರೆ ಎಂದೇ ಅರ್ಥ ಎಂದರು.
ಆರ್ ಅಶೋಕ್ ಹೇಳಿಕೆಗೆ ತಿರುಗೇಟು:
ಸಮೀಕ್ಷೆಯಿಂದ ಮೀಸಲಾತಿ ಸಿಗುತ್ತೆ ಅನ್ನೋ ಕೃಷ್ಣಬೈರೇಗೌಡ ಹೇಳಿಕೆಗೆ ಆರ್.ಅಶೋಕ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಬಡವರಿಗೆ, ಹಿಂದುಳಿದವರಿಗೆ ಮೀಸಲಾತಿ ಸಿಗಬಾರದು ಎಂಬುದು ಅವರ ಗುರಿ. ಸಂವಿಧಾನಕ್ಕೆ ಗೌರವವಿರುವ ನಾವು, 1, 2A, 2B, 3A, 3B ವರ್ಗಗಳಿಗೆ ಮೀಸಲಾತಿ ಖಾತ್ರಿಪಡಿಸಲು ಈ ಸಮೀಕ್ಷೆ ನಡೆಸುತ್ತಿದ್ದೇವೆ. ಕಾನೂನು ತಿಳಿಯದವರಿಗೆ ನಾವು ಪಾಠ ಮಾಡಲಾಗದು ಎಂದು ತಿರುಗೇಟು ನೀಡಿದರು.
ಡಿಸಿಎಂ ಆಕ್ಷೇಪಕ್ಕೆ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?
ಖಾಸಗಿ ವಿಷಯಗಳ ಬಗ್ಗೆ ಪ್ರಶ್ನೆಗಳಿರೋದಕ್ಕೆ ಡಿಸಿಎಂ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು. ಯಾರಾರು ವಿರೋಧ ಮಾಡ್ತಾರೆ. ಏನಾದ್ರೂ ಲೀಗಲ್ ಇದ್ರೆ ಪ್ರಶ್ನೆ ಮಾಡಬಹುದು. ಇದು ಸೆನ್ಸಸ್ ಅಲ್ಲ, ಸರ್ವೇ. ಸರ್ವೇ ಅಂದ್ರೆ ಸಮೀಕ್ಷೆ. ಜನರ ಆರ್ಥಿಕ ಸಾಮಾಜಿಕ ಸ್ಥಿತಿಗತಿ ತಿಳಿದುಕೊಳ್ಳುವುದು ಇದರ ಉದ್ದೇಶ. ಇವುಗಳನ್ನು ತಿಳಿದುಕೊಳ್ಳೋಕೆ ಪ್ರಶ್ನೆಗಳನ್ನು ಕೇಳಬೇಕಾಗುತ್ತೆ. ಈ ಸಮೀಕ್ಷೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇದೆ. ಬಡವರಿಗೋಸ್ಕರ ಈ ಸಮೀಕ್ಷೆ ಅವಶ್ಯಕತೆ ಇದೆ ಎಂದರು.
ಖರ್ಗೆಯವರು ಆರೋಗ್ಯವಾಗಿದ್ದಾರೆ:
ಖರ್ಗೆ ಆರೋಗ್ಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ಖರ್ಗೆಯವರಿಗೆ ಸಣ್ಣ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, ಅವರು ಈಗ ಆರೋಗ್ಯವಾಗಿದ್ದಾರೆ. ನಾಳೆಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಸಿಎಂ ಬದಲಾವಣೆ ಚರ್ಚೆ ಕುರಿತು ಪ್ರತಿಕ್ರಿಯಿಸಿ, ಎಲ್ಲಿ ಚರ್ಚೆ ನಡೆಯುತ್ತಿದೆ? ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ ಎಂದು ಸಚಿವರು ಚರ್ಚೆಯನ್ನು ತಿರಸ್ಕರಿಸಿದರು. ರಾಜ್ಯ ಸರ್ಕಾರದ ಈ ಸಮೀಕ್ಷೆಯು ಬಡವರ ಹಿತದೃಷ್ಟಿಯಿಂದ ಅವಶ್ಯಕವೆಂದು ಪುನರುಚ್ಚರಿಸಿದ ಕೃಷ್ಣಬೈರೇಗೌಡರು, ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಸಮೀಕ್ಷೆಗೆ ವಿರೋಧ ಮಾಡಿದ್ರೆ ಅದು ಸಂವಿಧಾನಕ್ಕೆ ವಿರೋಧ : ಸಚಿವ ಕೃಷ್ಣಬೈರೇಗೌಡ – ಆರ್ ಅಶೋಕ್ ಗೆ ತಿರುಗೇಟು
WhatsApp Group
Join Now