ಬ್ರೈನ್ ಟ್ಯೂಮರ್ ಒಂದು ಅಪಾಯಕಾರಿ ಸ್ಥಿತಿಯಾಗಿದೆ; ಇದರ ಲಕ್ಷಣಗಳು ಆರಂಭದಲ್ಲಿ ಗಮನಕ್ಕೆ ಬಾರದಿರಬಹುದು ಮತ್ತು ಅವು ಸ್ಪಷ್ಟವಾಗಿ ಗೋಚರಿಸುವಷ್ಟರಲ್ಲಿ, ರೋಗಿಯು ತೀವ್ರ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆ ಲಕ್ಷಣಗಳನ್ನು ತಿಳಿಯಿರಿ.
ಮೆದುಳಿನ ಗಡ್ಡೆ (Brain Tumor) ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಲಕ್ಷಣಗಳು ಆರಂಭದಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಂತೆ ಕಾಣಿಸಬಹುದು. ಹೀಗಾಗಿ ಹಲವರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಬ್ರೈನ್ ಟ್ಯೂಮರ್ ಲಕ್ಷಣಗಳೇನು? ಚಿಕಿತ್ಸೆ ಹೇಗೆ? ಎಲ್ಲವನ್ನೂ ತಿಳಿದುಕೊಳ್ಳೋಣ.
ಮೆದುಳು ಅಥವಾ ಅದರ ಸುತ್ತಲಿನ ಅಂಗಾಂಶಗಳಲ್ಲಿ ಅಸಹಜ ಕೋಶಗಳು ಬೆಳೆಯುವುದನ್ನು ಬ್ರೈನ್ ಟ್ಯೂಮರ್ ಎಂದು ಕರೆಯಲಾಗುತ್ತದೆ. ಇದು ಕ್ಯಾನ್ಸರ್ಯುಕ್ತ (Malignant) ಅಥವಾ ಕ್ಯಾನ್ಸರ್ಯುಕ್ತವಲ್ಲದ (Benign) ಗಡ್ಡೆಯಾಗಿರಬಹುದು. ಗಡ್ಡೆ ಬೆಳೆಯುತ್ತಾ ಹೋದಂತೆ ಮೆದುಳಿನ ಭಾಗಗಳ ಮೇಲೆ ಒತ್ತಡ ಉಂಟುಮಾಡಿ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ಕೆಲವು ಗಡ್ಡೆಗಳು ನಿಧಾನವಾಗಿ ಬೆಳೆದರೆ, ಇನ್ನು ಕೆಲವು ವೇಗವಾಗಿ ಬೆಳೆಯಬಹುದು.
• ಪದೇಪದೇ ತಲೆನೋವು (Headache): ಹೊಸದಾಗಿ ಕಾಣಿಸಿಕೊಳ್ಳುವ ಅಥವಾ ಕ್ರಮೇಣ ಹೆಚ್ಚಾಗುವ ತಲೆನೋವು.
• ಸೆಳೆತ (Seizures): ಹಿಂದೆ ಇಲ್ಲದಿದ್ದರೂ ಇದ್ದಕ್ಕಿದ್ದಂತೆ ಫಿಟ್ಸ್ ಕಾಣಿಸಿಕೊಳ್ಳುವುದು.
• ವಾಕರಿಕೆ ಮತ್ತು ವಾಂತಿ (Nausea and Vomiting): ನಿರಂತರ ವಾಕರಿಕೆ, ವಾಂತಿ ಅಥವಾ ಸುಸ್ತು.
• ನೆನಪಿನ ಶಕ್ತಿ ಕುಂದುವಿಕೆ (Memory Problems): ನೆನಪಿನ ಶಕ್ತಿ, ಆಲೋಚನೆ ಅಥವಾ ನಡವಳಿಕೆಯಲ್ಲಿ ಬದಲಾವಣೆ.
• ದೇಹದ ಒಂದು ಭಾಗದಲ್ಲಿ ದುರ್ಬಲತೆ (Weakness): ಕೈ ಅಥವಾ ಕಾಲಿನಲ್ಲಿ ಬಲ ಕಡಿಮೆಯಾಗುವುದು; ಕೆಲವೊಮ್ಮೆ ಪಾರ್ಶ್ವವಾಯುವಿನ ಲಕ್ಷಣಗಳು.
• ದೃಷ್ಟಿ ಮತ್ತು ಮಾತಿನ ಸಮಸ್ಯೆ (Vision and Speech Problems): ನೋಡಲು ಅಥವಾ ಮಾತನಾಡಲು ತೊಂದರೆಯಾಗುವುದು.
ಕೆಲವರಲ್ಲಿ ಆರಂಭದಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿರಬಹುದು. ಇವು ಗಡ್ಡೆಯಿರುವ ಮೆದುಳಿನ ಭಾಗ ಮತ್ತು ಅದರ ಬೆಳವಣಿಗೆಯನ್ನು ಅವಲಂಬಿಸಿರುತ್ತವೆ.
ಯಾವುದೇ ವಯಸ್ಸಿನಲ್ಲಿ ಬ್ರೈನ್ ಟ್ಯೂಮರ್ ಕಾಣಿಸಿಕೊಳ್ಳಬಹುದು. ವಯಸ್ಸಾದವರಲ್ಲಿ ಕೆಲವು ವಿಧಗಳು ಹೆಚ್ಚು ಸಾಮಾನ್ಯವಾಗಿದ್ದರೂ, ಮಕ್ಕಳಲ್ಲಿಯೂ ಕೆಲವು ವಿಧದ ಗಡ್ಡೆಗಳು ಕಂಡುಬರುತ್ತವೆ. ಹಿಂದಿನ ರೇಡಿಯೊಥೆರಪಿ (Radiotherapy), ವಿಕಿರಣಕ್ಕೆ ಒಡ್ಡಿಕೊಳ್ಳುವುದು, ಕುಟುಂಬದ ವೈದ್ಯಕೀಯ ಇತಿಹಾಸ ಮತ್ತು ನ್ಯೂರೋಫೈಬ್ರೊಮ್ಯಾಟೋಸಿಸ್ (Neurofibromatosis), ಟ್ಯೂಬರಸ್ ಸ್ಕ್ಲೆರೋಸಿಸ್ (Tuberous Sclerosis) ಮುಂತಾದ ಆನುವಂಶಿಕ ಸ್ಥಿತಿಗಳು ಅಪಾಯವನ್ನು ಹೆಚ್ಚಿಸಬಹುದು. ಆದರೆ ಅಪಾಯಕಾರಿ ಅಂಶಗಳಿರುವ ಪ್ರತಿಯೊಬ್ಬರಿಗೂ ಈ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಗಡ್ಡೆಯ ವಿಧ, ಗಾತ್ರ, ಸ್ಥಳ, ಕೋಶಗಳ ಸ್ವರೂಪ ಮತ್ತು ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಆಧರಿಸಿ ಚಿಕಿತ್ಸೆ ನಿರ್ಧರಿಸಲಾಗುತ್ತದೆ. ವೈದ್ಯರು ಸ್ಟೆರಾಯ್ಡ್ಗಳು, ಲಕ್ಷಣಗಳನ್ನು ಕಡಿಮೆ ಮಾಡುವ ಔಷಧಗಳು, ಶಸ್ತ್ರಚಿಕಿತ್ಸೆ , ರೇಡಿಯೊಥೆರಪಿ ಅಥವಾ ಕೀಮೋಥೆರಪಿ ಬಳಸಬಹುದು.
ತಲೆನೋವು ಅಥವಾ ವಾಂತಿ ಇದ್ದ ಮಾತ್ರಕ್ಕೆ ಬ್ರೈನ್ ಟ್ಯೂಮರ್ ಇದೆ ಎಂದರ್ಥವಲ್ಲ. ಆದರೆ ಲಕ್ಷಣಗಳು ನಿರಂತರವಾಗಿದ್ದರೆ ಅಥವಾ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಮೊದಲ ಬಾರಿಗೆ ಸೆಳೆತ ಕಾಣಿಸಿಕೊಂಡರೆ ಅಥವಾ ಹಠಾತ್ ಮಾತು, ದೃಷ್ಟಿ ಅಥವಾ ದೇಹದ ಚಲನವಲನದಲ್ಲಿ ತೊಂದರೆ ಉಂಟಾದರೆ ತುರ್ತು ವೈದ್ಯಕೀಯ ನೆರವು ಪಡೆಯಿರಿ.
ಈ ಲಕ್ಷಣ ಪದೇ ಪದೇ ಕಾಣಿಸಿಕೊಂಡರೆ ಇಗ್ನೋರ್ ಮಾಡ್ಬೇಡಿ. ಬ್ರೈನ್ ಟ್ಯೂಮರ್ ಇರಬಹುದು
WhatsApp Group
Join Now