ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಹಾವು ಕಚ್ಚಿತೆಂದ ಮಹಿಳೆಗೆ ಗಲ್ಲು ಶಿಕ್ಷೆ ; ಆ ಒಂದು ತಪ್ಪಿಂದ ಬಯಲಾಯ್ತು ರಹಸ್ಯ

Spread the love

ಪತಿಯನ್ನು ಕೊಲೆ ಮಾಡಿ, ನಂತರ ಆತನ ದೇಹಕ್ಕೆ ಹಾವಿನಿಂದ ಕಚ್ಚಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಮಹಿಳೆ ಹಾಗೂ ಆಕೆಯ ಪ್ರೇಮಿಗೆ ಮೀರತ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೀರತ್‌ನಲ್ಲಿ ಕೇವಲ 2 ದಿನಗಳಲ್ಲಿ ಪ್ರಕಟವಾದ ಎರಡನೇ ಪ್ರಮುಖ ಮರಣದಂಡನೆ ತೀರ್ಪು ಇದಾಗಿದೆ.

ರವಿತಾ ಮತ್ತು ಆಕೆಯ ಪ್ರೇಮಿ ಅಮರ್‌ದೀಪ್ ಸೇರಿ ರವಿತಾಳ ಪತಿ ಅಮಿತ್ ಕಶ್ಯಪ್ ಅವರ ಕೊಲೆ ಮಾಡಿದ್ದರು.

ಜೈಲಿನಲ್ಲಿದ್ದ ಅಪರಾಧಿಗಳಾದ ರವಿತಾ ಮತ್ತು ಅಮರ್‌ದೀಪ್ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ವೇಳೆ ನ್ಯಾಯಾಧೀಶರು ಶಿಕ್ಷೆಯ ಕುರಿತು ಅಭಿಪ್ರಾಯ ಕೇಳಿದಾಗ, “ನನಗೆ ಮರಣದಂಡನೆ ನೀಡಬೇಡಿ” ಎಂದು ಕೇಳದೆ, “ಸ್ವಾಮಿ, ನ್ಯಾಯಾಲಯ ನೀಡುವ ಯಾವುದೇ ಶಿಕ್ಷೆಯನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ” ಎಂದು ರವಿತಾ ಹಾಗೂ ಅಮರ್‌ದೀಪ್ ಹೇಳಿಕೆ ನೀಡಿದ್ದರು.

ಏನಿದು ಘಟನೆ?:

ಅಕ್ಬರ್‌ಪುರ ಸಾದತ್ ಗ್ರಾಮದಲ್ಲಿದ್ದ ತಮ್ಮ ಮನೆಯಲ್ಲಿ ಏಪ್ರಿಲ್ 12, 2025ರಂದು ಅಮಿತ್ ಕಶ್ಯಪ್ ಶವವಾಗಿ ಪತ್ತೆಯಾಗಿದ್ದರು. ಮೃತದೇಹದ ಅಡಿಯಲ್ಲಿ ಹಾವೊಂದು ಸಿಲುಕಿಕೊಂಡಿದ್ದರಿಂದ, ಆರಂಭದಲ್ಲಿ ಕುಟುಂಬಸ್ಥರು ಹಾವು ಕಚ್ಚಿ ಸಾವು ಸಂಭವಿಸಿದೆ ಎಂದು ಶಂಕಿಸಿದ್ದರು.

ಆದರೆ, ಅಮಿತ್ ಅವರ ಕುತ್ತಿಗೆಯ ಮೇಲಿದ್ದ ಗಾಯದ ಗುರುತುಗಳು ಮತ್ತು ಮೈಮೇಲಿನ ಗಾಯಗಳು ಅನುಮಾನ ಹುಟ್ಟುಹಾಕಿದ್ದವು. ನಂತರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿತ್ತು. ರವಿತಾ ಮತ್ತು ಅಮರ್‌ದೀಪ್ ನಡುವೆ ಅನೈತಿಕ ಸಂಬಂಧವಿದ್ದು, ಅಮಿತ್‌ನನ್ನು ಕೊಲೆ ಮಾಡಿ, ತನಿಖೆಯ ಹಾದಿ ತಪ್ಪಿಸಲು ಮೃತದೇಹದ ಮೇಲೆ ಹಾವನ್ನು ಹರಿದಾಡಿಸಿದ್ದರು ಎಂಬುದು ತಿಳಿದುಬಂದಿತ್ತು.

ತನಿಖೆಯ ವೇಳೆ ಪೊಲೀಸರು ಆ ಹಾವನ್ನು ಹಿಡಿದು ಡಬ್ಬಿಯಲ್ಲಿ ಬಂಧಿಸಿದ್ದರು. ಹಾವನ್ನು ಪರಿಶೀಲಿಸಿದ ಹಾವಾಡಿಗರು, ಅದರ ಹಲ್ಲು ಕಿತ್ತು, ವಿಷವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಹೀಗಾಗಿ ಈ ಹಾವು ಕಚ್ಚಿ ಸಾವು ಸಂಭವಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಇದು ಆ ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಾಯಿಸಿತು.

500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ:

ಪೋಲಿಸರು ಈ ಪ್ರಕರಣದಲ್ಲಿ 500ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಡಜನ್‌ಗೂ ಹೆಚ್ಚು ಸಾಕ್ಷಿಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮೊಬೈಲ್ ಕಾಲ್ ರೆಕಾರ್ಡ್‌ಗಳು ಪ್ರಮುಖ ಸಾಕ್ಷ್ಯಗಳಾಗಿದ್ದವು. ಅಮಿತ್ ಸಾವನ್ನಪ್ಪಿದ 4 ದಿನಗಳಲ್ಲಿ ರವಿತಾ ಮತ್ತು ಅಮರ್‌ದೀಪ್ 70ಕ್ಕೂ ಹೆಚ್ಚು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು. ತನಿಖಾಧಿಕಾರಿಗಳು ಇಬ್ಬರ ನಡುವೆ ಒಟ್ಟು 500ಕ್ಕೂ ಹೆಚ್ಚು ಕರೆಗಳನ್ನು ಪತ್ತೆಹಚ್ಚಿದ್ದರು.

ಅಮರ್‌ದೀಪ್ ಬಳಸುತ್ತಿದ್ದ ಸಿಮ್ ಕಾರ್ಡ್ ಸೋನು ಎಂಬುವವರ ಹೆಸರಿನಲ್ಲಿತ್ತು. ಆದರೆ ಆ ಸೋನು, ತನಗೆ ಆ ನಂಬರ್ ಹಾಗೂ ಆರೋಪಿಗಳಿಬ್ಬರೂ ತಿಳಿದಿಲ್ಲ ಎಂದು ಕೋರ್ಟ್‌ನಲ್ಲಿ ತಿಳಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ವಾದವನ್ನು ಆಲಿಸಿ ಇಬ್ಬರಿಗೂ ಗಲ್ಲಿಗೇರಿಸುವ ಶಿಕ್ಷೆ ವಿಧಿಸಿದೆ. ಮೃತ ಅಮಿತ್ ಕಶ್ಯಪ್ ಮತ್ತು ರವಿತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಮಕ್ಕಳ ಯೋಗಕ್ಷೇಮವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಒಂದೇ ವಾರದಲ್ಲಿ ಮೀರತ್‌ನಲ್ಲಿ ಇಂತಹ ಪ್ರಕರಣವೊಂದರಲ್ಲಿ ಪ್ರೇಮಿಗಳಿಗೆ ಮರಣದಂಡನೆ ಶಿಕ್ಷೆ ನೀಡಿರುವುದು ಇದು ಎರಡನೆಯದಾಗಿದೆ.

ಮತ್ತೊಂದು ಪ್ರಕರಣ ಯಾವುದು.?

ಇದಕ್ಕೂ ಮುನ್ನ ಈ ವಾರ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಎಂಬುವವರು ಮುಸ್ಕಾನ್ ಪತಿ ಸೌರಭ್ ರಾಜ್‌ಪೂತ್ ಅವರ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಮೀರತ್ ಸ್ಥಳೀಯ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. 126 ವಿಚಾರಣೆಗಳು ಮತ್ತು 22 ಸಾಕ್ಷಿಗಳ ಹೇಳಿಕೆಗಳ ನಂತರ, ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು, ಮುಸ್ಕಾನ್ ಹಾಗೂ ಸಾಹಿಲ್ ಸೇರಿ ಸೌರಭ್ ರಾಜ್‌ಪೂತ್ ಅವರನ್ನು ಕೊಲೆ ಮಾಡಿ, ನಂತರ ಅವರ ದೇಹದ ತುಂಡುಗಳನ್ನು ಕಾಂಕ್ರೀಟ್ ಮತ್ತು ಮರಳನ್ನು ಬಳಸಿ ನೀಲಿ ಬಣ್ಣದ ಡ್ರಮ್‌ನಲ್ಲಿ ಮುಚ್ಚಿಹಾಕಿದ್ದರು ಎಂದು ತೀರ್ಪಿನಲ್ಲಿ ತಿಳಿಸಿದ್ದರು. ಇಂತಹ ಅಪರಾಧಗಳು ಸಮಾಜದಲ್ಲಿ ಭೀತಿಯನ್ನು ಹುಟ್ಟುಹಾಕುತ್ತವೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದರು.

WhatsApp Group Join Now

Spread the love

Leave a Reply