‘ರೋಹಿತ್ – ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನದ್ದಲ್ಲ’ : ಹಿಟ್ ಮ್ಯಾನ್ ಬಗ್ಗೆ ಫಿಲ್ಟರ್ ಇಲ್ಲದೆ ಮಾತನಾಡಿದ ಗೌತಮ್ ಗಂಭೀರ್

Spread the love

ರೋಹಿತ್ ಶರ್ಮಾ ಮತ್ತು ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನ ನಡುವಿನದ್ದಲ್ಲ. ರೋಹಿತ್ ಅವರ ಆಟ, ಅವರ ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ನನಗೆ ಮೊದಲಿನಿಂದಲೂ ಚೆನ್ನಾಗಿ ತಿಳಿದಿದೆ’ ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರು ಹೇಳಿದ್ದಾರೆ.

ಅದೇ ರೀತಿ ಯುವ ನಾಯಕ ಶುಭ್‌ಮನ್ ಗಿಲ್ ಅವರಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರ ಮಾರ್ಗದರ್ಶನ ಸಿಗುತ್ತಿರುವುದು ದೊಡ್ಡ ಪ್ಲಸ್ ಪಾಯಿಂಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಭಾರತ ತಂಡವು 2027ರ ಏಕದಿನ ವಿಶ್ವಕಪ್‌ಗೆ ತನ್ನ ತರಬೇತಿ ಮತ್ತು ಸಿದ್ಧತೆಯನ್ನು ಆರಂಭಿಸುತ್ತಿದೆ. ಈ ಬೆನ್ನಲ್ಲೇ, ಮಾಜಿ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ತಮ್ಮ ಸಂಬಂಧ ಹಾಗೂ ನಾಯಕತ್ವದ ಕುರಿತು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಜಿಯೋಹಾಟ್ ಸ್ಟಾರ್ ಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಮುಂದಿನ ವರ್ಷ ಆಫ್ರಿಕಾ ಖಂಡದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ಅವರಿಗೆ 40 ವರ್ಷ ದಾಟಿರಲಿದೆ. ಜುಲೈನಲ್ಲಿ ನಡೆದ ಇಂಗ್ಲೆಂಡ್ ಸರಣಿಯ ವೇಳೆ ‘ರೋಹಿತ್‌ಗೆ ಇದುವೇ ಕೊನೆಯ ಏಕದಿನ ಸರಣಿ’ ಎಂದು ಹೇಳಲಾಗಿತ್ತು ಎಂಬ ವರದಿಗಳನ್ನು ಬಿಸಿಸಿಐ ಈಗಾಗಲೇ ತಳ್ಳಿಹಾಕಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರರು ಮತ್ತು ಹೊಸ ನಾಯಕರನ್ನು ಸರಿದೂಗಿಸುವ ಸವಾಲುಗಳ ಕುರಿತು ಕೇಳಲಾದ ಪ್ರಶ್ನೆಗೆ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

ನಾನೇನೂ ವಿದೇಶದ ಕೋಚ್ ಅಲ್ಲ

“ರೋಹಿತ್ ಮತ್ತು ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನ ನಡುವಿನದ್ದಲ್ಲ. ರೋಹಿತ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗ ನಾನು ಹಿರಿಯ ಆಟಗಾರನಾಗಿದ್ದೆ. ನಮ್ಮಿಬ್ಬರ ಬಾಂಧವ್ಯ ಅಲ್ಲಿಂದಲೇ ಬೆಳೆದು ಬಂದಿದೆ. ನಾನು ಯಾವುದೋ ವಿದೇಶದಿಂದ ಬಂದ ಕೋಚ್ ಅಲ್ಲ; ರೋಹಿತ್ ಅವರ ಆಟ, ಅವರ ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ನನಗೆ ಮೊದಲಿನಿಂದಲೂ ಚೆನ್ನಾಗಿ ತಿಳಿದಿದೆ,” ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.



ಆಟಗಾರರಾಗಿ ಒಟ್ಟಿಗೆ ಸಮಯ ಕಳೆದಾಗ ವಿಷಯಗಳು ಸುಲಭವಾಗುತ್ತವೆ ಎಂದ ಗಂಭೀರ್, “ಕೆಲವೊಮ್ಮೆ ನನ್ನ ಆಲೋಚನೆ ಮತ್ತು ನಾಯಕನ ಆಲೋಚನೆ ಭಿನ್ನವಾಗಿರಬಹುದು. ಆದರೆ, ಅಂತಿಮವಾಗಿ ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಯಾವುದು ಸೂಕ್ತವೋ ಅದೇ ಅಂತಿಮ ನಿರ್ಧಾರವಾಗಿರುತ್ತದೆ. ನಾನು ಕೆಲಸ ಮಾಡಿದ ನಾಲ್ಕೂ ನಾಯಕರ ಉದ್ದೇಶವೂ ಭಾರತೀಯ ಕ್ರಿಕೆಟ್‌ಗೆ ಉತ್ತಮ ಸೇವೆ ಸಲ್ಲಿಸುವುದೇ ಆಗಿತ್ತು,” ಎಂದು ಹೇಳಿದರು.
ಭಾರತ Vs ವೆಸ್ಟ್ ಇಂಡೀಸ್ ODI ಸರಣಿ ವೇಳಾಪಟ್ಟಿ

ಪಂದ್ಯ ದಿನಾಂಕ ಸ್ಥಳ :-

• ಮೊದಲ ಏಕದಿನ ಸೆಪ್ಟೆಂಬರ್ 27, ಭಾನುವಾರ ತಿರುವನಂತಪುರಂ
• ಎರಡನೇ ಏಕದಿನ ಸೆಪ್ಟೆಂಬರ್ 30, ಬುಧವಾರ ಗುವಾಹಟಿ
• ಮೂರನೇ ಏಕದಿನ ಅಕ್ಟೋಬರ್ 3, ಶನಿವಾರ ನ್ಯೂ ಚಂಡೀಗಢ

ಶುಭಮನ್ ಗಿಲ್ ನಾಯಕತ್ವಕ್ಕೆ ಬೆಂಬಲ

ಇದೇ ವೇಳೆ, ಏಕದಿನ ಮಾದರಿಯಲ್ಲಿ ಹೊಸ ನಾಯಕ ಶುಭಮನ್ ಗಿಲ್ ಅವರ ಆರಂಭಿಕ ಹಿನ್ನಡೆಯ ಹೊರತಾಗಿಯೂ, ಅವರು ನಾಯಕರಾಗಿ ಯಶಸ್ವಿಯಾಗಲಿದ್ದಾರೆ ಎಂದು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗಿಲ್ ನಾಯಕತ್ವದಲ್ಲಿ ಭಾರತ ಆಡಿದ 12 ಏಕದಿನ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಸೆಪ್ಟೆಂಬರ್ 27ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ತಂಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರ ಮಾರ್ಗದರ್ಶನ ಗಿಲ್‌ಗೆ ನೆರವಾಗಲಿದೆ ಎಂದು ಗಂಭೀರ್ ಹೇಳಿದ್ದಾರೆ.

“ಏಕದಿನ ಕ್ರಿಕೆಟ್‌ ನಲ್ಲಿ ಗಿಲ್ ಅತ್ಯಂತ ಅದೃಷ್ಟಶಾಲಿ. ಮೈದಾನದ ಒಳಗೆ ಹಾಗೂ ಹೊರಗೆ ಅವರಿಗೆ ಮಾರ್ಗದರ್ಶನ ನೀಡಲು ರೋಹಿತ್ ಮತ್ತು ವಿರಾಟ್ ಅವರಂತಹ ಅನುಭವಿ ಆಟಗಾರರಿದ್ದಾರೆ. ಕಿರಿಯ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಂಡಾಗ ಭಾವನೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಶುಭಮನ್ ಗಿಲ್ ತಮ್ಮ ಪ್ರಶಾಂತತೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ” ಎಂದು ಶ್ಲಾಘಿಸಿದರು.

“ಅವರು ನಾಯಕತ್ವದ ಪ್ರತಿಯೊಂದು ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದಾರೆ. ಪ್ರಶಾಂತತೆ, ಸ್ವಾರ್ಥರಹಿತ ಆಟ ಹಾಗೂ ಅಗತ್ಯವಿದ್ದಾಗ ಆಕ್ರಮಣಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ಕೇವಲ ರನ್ ಗಳಿಸುವುದಷ್ಟೇ ಅಲ್ಲದೆ ಸ್ವತಃ ಮಾದರಿಯಾಗಿ ನಿಂತು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಕೊಂಚ ಸವಾಲಿನ ಸಮಯ ಎದುರಾಗಿದ್ದರೂ, ಅವರು ಸರಿಯಾದ ಹಾದಿಯಲ್ಲೇ ಸಾಗುತ್ತಿದ್ದು ಶೀಘ್ರದಲ್ಲೇ ಉತ್ತಮ ಫಲಿತಾಂಶ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

WhatsApp Group Join Now

Spread the love

Leave a Reply