ಫ್ಯಾಟಿ ಲಿವರ್, ಅಧಿಕ ರಕ್ತದೊತ್ತಡ, ಬಾಲ್ಯದ ಬೊಜ್ಜು ಮತ್ತು ಇನ್ಸುಲಿನ್ ರೆಸಿಸ್ಟೆನ್ಸ್ನಂತಹ ಸಮಸ್ಯೆಗಳು ಮಕ್ಕಳಲ್ಲೂ ಹೆಚ್ಚಾಗಿ ಕಾಣಿಸುತ್ತಿವೆ. ಜಂಕ್ ಫುಡ್, ಅತಿಯಾದ ಸ್ಕ್ರೀನ್ ಟೈಮ್, ದೈಹಿಕ ಚಟುವಟಿಕೆಯ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಬಹುದು.
ಫ್ಯಾಟಿ ಲಿವರ್, ಬೊಜ್ಜು, ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಈಗ ಹದಿಹರೆಯದವರಲ್ಲೂ ಕಾಣಿಸಿಕೊಳ್ಳುತ್ತಿವೆ.
ಅತಿಯಾದ ಸ್ಕ್ರೀನ್ ಟೈಮ್, ದೈಹಿಕ ಚಟುವಟಿಕೆಯ ಕೊರತೆ, ಜಂಕ್ ಫುಡ್ ಮತ್ತು ಸಕ್ಕರೆಯುಕ್ತ ಪಾನೀಯಗಳ ಹೆಚ್ಚಿದ ಸೇವನೆ ಆರೋಗ್ಯದ ಅಪಾಯವನ್ನು ಹೆಚ್ಚಿಸಬಹುದು.
ತೂಕ ಹೆಚ್ಚಳ ಅಥವಾ ಕುಟುಂಬದಲ್ಲಿ ಮಧುಮೇಹ, ಬಿಪಿಯ ಇತಿಹಾಸವಿದ್ದರೆ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಆರೋಗ್ಯಕರ ಆಹಾರ-ಜೀವನಶೈಲಿಗೆ ಆದ್ಯತೆ ನೀಡುವುದು ಮುಖ್ಯ.
ಹಿಂದೊಮ್ಮೆ, ಕೊಬ್ಬಿದ ಯಕೃತ್ ಅಥವಾ ಯಕೃತ್ನಲ್ಲಿ ಕೊಬ್ಬಿನಂಶ (ಫ್ಯಾಟಿ ಲಿವರ್), ಅಧಿಕ ರಕ್ತೋದೊತ್ತಡ (ಬ್ಲಡ್ ಪ್ರೆಷರ್) ನಂತಹ ಕೆಲವು ಕಾಯಿಲೆಗಳನ್ನು ಕೇವಲ ನಲವತ್ತು ಅಥವಾ ಐವತ್ತು ವರ್ಷದ ಆಸುಪಾಸಿನ ವಯಸ್ಕರಲ್ಲಿ ಮತ್ತು ಹಿರಿಯವಯಸ್ಕರಲ್ಲಿ ಸಾಮಾನ್ಯ ಹಾಗೂ ಮಕ್ಕಳಲ್ಲಿ ಇವು ಕಾಣಿಸಿಕೊಳ್ಳುವುದು ಅತಿ ವಿರಳ ಎಂದು ಪರಿಗಣಿಸಲಾಗುತ್ತಿತ್ತು.
ಆದರೆ ಇತ್ತೀಚಿನ ದಶಕಗಳಲ್ಲಿ, ತಮ್ಮ ದಿನನಿತ್ಯದ ಔಟ್ ಪೇಷಂಟ್ ವಿಭಾಗದಲ್ಲಿ, ವೈದ್ಯರು ಈ ಕಾಯಿಲೆಗಳನ್ನು ಹದಿಹರೆಯರು ಮತ್ತು ಮಕಳಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸುತ್ತಿರುವುದು ಗಮನಾರ್ಹವಾಗಿದೆ. ಇಂದು ಮಕ್ಕಳ ವೈದ್ಯಕೀಯ ವಿಭಾಗಗಳಲ್ಲಿ (ಪಿಡಿಯಾಟ್ರಿಕ್ ಓಪಿಡಿ) ಹತ್ತರಿಂದ ಹದಿನೈದು ವರ್ಷದ ಮಕ್ಕಳು ಫ್ಯಾಟಿ ಲಿವರ್, ಇನ್ಸುಲಿನ್ ರೆಸಿಸ್ಟೆನ್ಸ್ (ಮಧುಮೇಹದ ಮುನ್ಸೂಚನೆ), ಬಾಲ್ಯದ ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ನಮ್ಮ ಬದಲಾದ ದೈನಂದಿನ ಶೈಲಿ ಮತ್ತು ಆಹಾರ ಸಂಸ್ಕೃತಿ. ಇಂದಿನ ಮಕ್ಕಳು ಮೈದಾನಕ್ಕೆ ಹೋಗಿ ಹೊರಗೆ ಓಡಾಡಿ ಆಟವಾಡುವುದಕ್ಕಿಂತ ಹೆಚ್ಚಾಗಿ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಸ್ಕ್ರೀನ್ ಮುಂದೆ ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸಂಸ್ಕರಿಸಿದ ಜಂಕ್ ಫುಡ್, ಬೇಕರಿ ಉತ್ಪನ್ನಗಳು, ಹೆಚ್ಚು ಉಪ್ಪಿರುವ ಪ್ಯಾಕ್ ಮಾಡಿದ ತಿಂಡಿಗಳು ಮತ್ತು ಸಕ್ಕರೆಯಂಶ ಅತಿಯಾಗಿರುವ ತಂಪಾದ ಪಾನೀಯಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೌಷ್ಟಿಕಾಂಶವಿಲ್ಲದ ಈ ಆಹಾರಗಳು ಮಗುವಿನ ದೇಹದಲ್ಲಿ ಅನಗತ್ಯ ಕೊಬ್ಬನ್ನು ಶೇಖರಿಸಿ, ಯಕೃತ್ (ಲಿವರ್) ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಮತ್ತು ರಕ್ತನಾಳಗಳ ಮೇಲೆ ತೀವ್ರ ಒತ್ತಡವನ್ನುಂಟುಮಾಡುತ್ತವೆ. ಇದರಿಂದ ದೇಹದ ಜೀವಕೋಶಗಳು ಇನ್ಸುಲಿನ್ಗೆ ಸರಿಯಾಗಿ ಸ್ಪಂದಿಸದೆ, ರಕ್ತದಲ್ಲಿ ಸಕ್ಕರೆ ಮತ್ತು ಕೊಬ್ಬಿನಂಶ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಹೇಳುತ್ತಾರೆ ಯಲಹಂಕ ಮಣಿಪಾಲ್ ಆಸ್ಪತ್ರೆ ಪಿಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಕನ್ಸಲ್ಟೆಂಟ್ ಡಾ. ಜಯಲಕ್ಷ್ಮಿ ಕೆ ಅವರು.
ಫ್ಯಾಟಿ ಲಿವರ್ನಿಂದ ಬಿಪಿವರೆಗೆ: ಮಕ್ಕಳನ್ನೇ ಕಾಡುತ್ತಿರುವ ‘ದೊಡ್ಡವರ ಕಾಯಿಲೆಗಳು’!
WhatsApp Group
Join Now