ಇಬ್ಬರು ವಯಸ್ಕರು ಪರಸ್ಪರ ಒಪ್ಪಿಗೆಯಿಂದ ಸಹಜೀವನ ನಡೆಸುತ್ತಿದ್ದರೆ, ಅವರ ಸಂಬಂಧದಲ್ಲಿ ಪೋಷಕರು ಅಥವಾ ಕುಟುಂಬದ ಸದಸ್ಯರು ಮಧ್ಯಪ್ರವೇಶಿಸುವ ಹಕ್ಕು ಹೊಂದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಲಿವ್-ಇನ್ ಸಂಬಂಧದಲ್ಲಿರುವ ಜೋಡಿಗೆ ಪೊಲೀಸ್ ರಕ್ಷಣೆ ನೀಡಬಹುದಾಗಿದ್ದು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವು ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಹಜೀವನಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಬ್ಬರು ವಯಸ್ಕರು ಪರಸ್ಪರ ಒಪ್ಪಿಗೆಯಿಂದ ಸಹಜೀವನ ನಡೆಸುತ್ತಿದ್ದರೆ, ಅವರ ಜೀವನದಲ್ಲಿ ಪೋಷಕರು ಅಥವಾ ಕುಟುಂಬದ ಸದಸ್ಯರು ಮಧ್ಯಪ್ರವೇಶಿಸುವ ಹಕ್ಕು ಹೊಂದಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಲಿವ್-ಇನ್ ಸಂಬಂಧದಲ್ಲಿರುವ ಜೋಡಿಗೆ ಪೊಲೀಸ್ ರಕ್ಷಣೆಯೂ ದೊರೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವು ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಎಂದು ದೆಹಲಿ ಹೈಕೋರ್ಟ್ ನೆನಪಿಸಿದೆ.
ಪರಸ್ಪರ ಒಪ್ಪಿಗೆಯಿಂದ ಸಹಜೀವನ ನಡೆಸುವುದು ವಿವಾಹಕ್ಕೆ ಸಮಾನವಾಗಿದೆ. ಈ ವಿಚಾರದಲ್ಲಿ ಪೋಷಕರು ಅಥವಾ ಸ್ನೇಹಿತರು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಯುವತಿಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ಸಂಬಂಧಪಟ್ಟ ಜೋಡಿಗೆ ನ್ಯಾಯಾಲಯ ಪೊಲೀಸ್ ರಕ್ಷಣೆಯನ್ನೂ ಒದಗಿಸಿದೆ.
ಸಾಮಾಜಿಕ ನೈತಿಕ ಮೌಲ್ಯಗಳ ಹೆಸರಿನಲ್ಲಿ, ಜಾತಿ, ಧರ್ಮ, ಸಮುದಾಯ ಅಥವಾ ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡು ವಿವಾಹಗಳನ್ನು ನಿರ್ಬಂಧಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಸಾಮಾಜಿಕ ನೈತಿಕ ಮೌಲ್ಯಗಳಿಗೆ ಸೀಮಿತಗೊಳಿಸುವುದು ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ