ಬಂಟ್ವಾಳ ಘಟನೆ ಮಾಸುವ ಮುನ್ನ ಮತ್ತೊಬ್ಬ 16ರ ಹುಡಗಿ ಬಲಿ ; ಪ್ರೇಯಸಿ ಕೊಂದು ತೋಟದಲ್ಲಿ ಹೂತುಹಾಕಿದ ಪ್ರೇಮಿ.!

Spread the love

ಮಂಗಳೂರಿನ ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಪ್ರೀತಿಯನ್ನೊಪ್ಪಿಕೊಳ್ಳದ 22ರ ಯುವತಿಯನ್ನು ಕೊಚ್ಚಿ ಕೊಲೆ ಮಾಡಿರುವ ಗಂಭೀರ ಘಟನೆ ಮಾಸುವ ಮುನ್ನವೇ, ಕನಕಪುರದಲ್ಲಿ 16ರ ಹುಡುಗಿಯನ್ನು ಗುಂಡಿಕ್ಕಿ ಕೊಂದು ತೋಟದಲ್ಲಿ ಹೂತು ಹಾಕಿರುವ ಘಟನೆ ಹೊರಬಿದ್ದಿದೆ.

ಈ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಂಪಲನಾಥ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿದ ಅಪ್ರಾಪ್ತ ಯುವತಿಯ ಮೇಲೆ ಸಂಶಯಗೊಂಡ ಯುವಕನೊಬ್ಬ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿರುವ ಬರ್ಬರ ಕೃತ್ಯ ಬಯಲಾಗಿದೆ. ಸಾತನೂರು ಹೋಬಳಿಯ ಕುರುಬಳ್ಳಿ ಗ್ರಾಮದ ನಿವಾಸಿಯಾದ 16 ವರ್ಷದ ಅಪ್ರಾಪ್ತೆ ಪ್ರಾರ್ಥನ ಮೃತ ದುರ್ದೈವಿ. ಅದೇ ಗ್ರಾಮದ ಸುರೇಶ್ ಎಂಬಾತನ ಜೊತೆ ಪ್ರಾರ್ಥನ ಪ್ರೀತಿಯಲ್ಲಿದ್ದಳು ಎನ್ನಲಾಗಿದೆ. ಕಳೆದ ಒಂದು ವಾರದ ಹಿಂದೆ ಸುರೇಶ್, ಪ್ರಾರ್ಥನಾಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದನು.

ಕೊಲೆಗೆ ಕಾರಣವೇನು.? :

ಆರೋಪಿ ಸುರೇಶ್ ಮತ್ತು ಪ್ರಾರ್ಥನ ಕೆಂಪಲನಾಥ ಗ್ರಾಮದ ತೋಟವೊಂದರಲ್ಲಿದ್ದರು. ಈ ಸಂದರ್ಭದಲ್ಲಿ ಪ್ರಾರ್ಥನ ಬೇರೊಬ್ಬ ಯುವಕನಿಗೆ ಮೊಬೈಲ್‌ನಲ್ಲಿ ಮೆಸೇಜ್ ಮಾಡುತ್ತಿದ್ದಳು ಎಂಬ ಅನುಮಾನ ಸುರೇಶ್‌ಗೆ ಬಂದಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಸುರೇಶ್, ಮನೆಯಲ್ಲಿದ್ದ ನಾಡಬಂದೂಕನ್ನು ತೆಗೆದು ಅಪ್ರಾಪ್ತ ಪ್ರಾರ್ಥನಾಳಿಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿ ಪ್ರಾರ್ಥನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಶವ ಹೂತುಹಾಕಿ ನಾಪತ್ತೆ :

ಹತ್ಯೆಯ ನಂತರ ಗಾಬರಿಗೊಂಡ ಆರೋಪಿ ಸುರೇಶ್, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪ್ರಾರ್ಥನಾಳ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತುಹಾಕಿದ್ದಾನೆ. ಯುವತಿ ನಾಪತ್ತೆಯಾದ ಬಗ್ಗೆ ದೂರು ದಾಖಲಾದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಕೋಡಿಹಳ್ಳಿ ಪೊಲೀಸರು, ಆರೋಪಿ ಸುರೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಭೀಕರ ಸತ್ಯ ಹೊರಬಂದಿದೆ.

ಪೊಲೀಸ್ ಕ್ರಮ :

ಸದ್ಯ ಆರೋಪಿ ಸುರೇಶ್ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಡಿದ್ದು (ಸೋಮವಾರ) ಮೃತದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆಯಿಂದ ಜಿಲ್ಲೆಯಾದ್ಯಂತ ಭೀತಿ ಮತ್ತು ಆಕ್ರೋಶ ವ್ಯಕ್ತವಾಗಿದೆ.

WhatsApp Group Join Now

Spread the love

Leave a Reply