ಬಿಜೆಪಿ ಹೆಗಲೇರಿ 20 ಸೀಟು ಗೆಲ್ಲೋದು ಸಾಧನೆಯಲ್ಲ : ಹೆಚ್ಡಿಕೆಗೆ ಚಲುವರಾಯಸ್ವಾಮಿ ಟಾಂಗ್

Spread the love

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ (Chaluvarayaswamy) ನೇರ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ತಕ್ಷಣವೇ ಬಿಜೆಪಿ ಮೈತ್ರಿಯಿಂದ ಹೊರಬಂದು, ಮುಂಬರುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ 120 ಕ್ಷೇತ್ರಗಳಲ್ಲಿ ಗೆದ್ದು ತೋರಿಸಲಿ ಎಂದು ಪಂಥಾಹ್ವಾನ ನೀಡಿದ್ದಾರೆ.

ಅವರು ಗೆದ್ದರೆ ಸರೆಂಡರ್ ಆಗಲಿದ್ದೇವೆ

ವಿಧಾನಸೌಧದ ಮುಂಭಾಗ ನಿಂತು ಒಂಟಿಯಾಗಿ ಬಹುಮತ ಸಾಧಿಸುವ ಧೈರ್ಯ ಕುಮಾರಸ್ವಾಮಿ ಅವರಿಗಿದೆಯೇ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ಒಂದು ವೇಳೆ ಅವರು ಸ್ವಂತ ಬಲದ ಮೇಲೆ 120 ಸ್ಥಾನಗಳನ್ನು ಗೆದ್ದರೆ ನಾವು ಅವರಿಗೆ ಗೌರವ ಸಲ್ಲಿಸಿ ಸರೆಂಡರ್ ಆಗಲಿದ್ದೇವೆ ಎಂದರು. ಅದನ್ನು ಬಿಟ್ಟು ಮತ್ತೊಂದು ಪಕ್ಷದ ನೆರವು ಪಡೆದು ಕೇವಲ 20 ಸೀಟುಗಳನ್ನು ಗೆಲ್ಲುವುದರಲ್ಲಿ ಯಾವುದೇ ಮಹತ್ತರ ಸಾಧನೆಯಿಲ್ಲ ಎಂದು ಟೀಕಿಸಿದರು. ಇದೇ ವೇಳೆ ತಮಿಳುನಾಡಿನ ಎಂ.ಕೆ. ಸ್ಟಾಲಿನ್ ಅವರನ್ನು ನೋಡಿ ರಾಜಕೀಯ ಪಾಠ ಕಲಿಯುವಂತೆ ಕಿವಿಮಾತು ಹೇಳಿದ ಅವರು, ಎಚ್.ಡಿ. ದೇವೇಗೌಡರ ಪುತ್ರರಾಗಿ ನಿಮ್ಮ ಸಾಧನೆ ಶೂನ್ಯ, ನಿಮ್ಮ ಅಣ್ಣ ರೇವಣ್ಣ ಅವರಿಗಿರುವ ದೊಡ್ಡ ಮನಸ್ಸು ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರ ಮೆಚ್ಚುಗೆಯಾಗಲಿ ಅಥವಾ ಪ್ರಮಾಣಪತ್ರವಾಗಲಿ ತಮಗೆ ಬೇಕಾಗಿಲ್ಲ ಎಂದ ಚಲುವರಾಯಸ್ವಾಮಿ, ತಾವು ಎಂದಿಗೂ ಯಾರ ಗುಲಾಮಗಿರಿಯನ್ನೂ ಮಾಡಿದವರಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದೆ ಆರ್‌ಎಸ್‌ಎಸ್ ಸಂಘಟನೆಯನ್ನು ಕಟುವಾಗಿ ಟೀಕಿಸುತ್ತಿದ್ದ ಕುಮಾರಸ್ವಾಮಿ, ಈಗ ಕೇವಲ ಅಧಿಕಾರ ಹಿಡಿಯುವ ಹಪಾಹಪಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘ ಪರಿವಾರವನ್ನು ಹೊಗಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಶಾಸಕ ಬಾಲಕೃಷ್ಣ ಅವರ ವಿರುದ್ಧ ಹಗುರವಾದ ಹೇಳಿಕೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಇದು ಮಾಜಿ ಸಿಎಂ ಹುದ್ದೆಯಲ್ಲಿದ್ದವರಿಗೆ ಶೋಭೆ ತರುವುದಿಲ್ಲ ಎಂದರು.

ಆಪರೇಷನ್ ಕಮಲಕ್ಕೆ ನಾಂದಿ ಹಾಡಿದ್ದೇ ಕುಮಾರಸ್ವಾಮಿ

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರ ಖರೀದಿಯ ‘ಆಪರೇಷನ್ ಕಮಲ’ ರಾಜಕಾರಣಕ್ಕೆ ನಾಂದಿ ಹಾಡಿದ್ದೇ ಕುಮಾರಸ್ವಾಮಿ ಎಂದು ನೆನಪಿಸಿದ ಅವರು, ಈ ಹಿಂದೆ ಯಾವ ಅಡ್ಡದಾರಿಯಲ್ಲಿ ಸಿಎಂ ಗದ್ದುಗೆ ಏರಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಜೆಡಿಎಸ್ ಪಕ್ಷವು ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಕೇವಲ 37 ಸ್ಥಾನಗಳಿಗಿಂತ ಎಂದೂ ಹೆಚ್ಚು ಗೆದ್ದಿಲ್ಲ. ಜನಾದೇಶ ಪಡೆದು ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಅವರಿಗೆ ತೀವ್ರ ಹೊಟ್ಟೆಕಿಚ್ಚಿದೆ. ಒಕ್ಕಲಿಗ ಸಮುದಾಯದ ಮತ್ತೊಬ್ಬ ಪ್ರಬಲ ನಾಯಕ ಸಿಎಂ ಸ್ಥಾನದಲ್ಲಿರುವುದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಹಿಂದೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೂ ಅಡ್ಡಿಪಡಿಸಿದ್ದ ಇವರು, ಈಗ ಡಿ.ಕೆ. ಶಿವಕುಮಾರ್ ಅವರನ್ನು ಹೇಗೆ ತಾನೇ ಒಪ್ಪಿಕೊಂಡಾರು ಎಂದು ಚಲುವರಾಯಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

WhatsApp Group Join Now

Spread the love

Leave a Reply