ಬಿಎಂಟಿಸಿ ಬಸ್‌ ನಲ್ಲಿ ಸಚಿವ ಬೈರತಿ ಸುರೇಶ್ ದಿಢೀರ್ ರಿಯಾಲಿಟಿ ಚೆಕ್ : ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್

Spread the love

ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಸಾರ್ವಜನಿಕರಂತೆ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣ ಕೈಗೊಳ್ಳುವ ಮೂಲಕ ಬಿಗ್ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಮಾಸ್ಕ್ ಧರಿಸಿ ಯಾರಿಗೂ ಗುರುತು ಸಿಗದಂತೆ ಸಂಚರಿಸಿದ ಸಚಿವರಿಗೆ ಬಿಎಂಟಿಸಿ ಸಿಬ್ಬಂದಿಯ ಅಸಲಿ ದರ್ಶನವಾಗಿದ್ದು, ನಿಯಮ ಉಲ್ಲಂಘಿಸಿದ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ತಕ್ಷಣದ ಕ್ರಮಕ್ಕೆ ಸೂಚಿಸಿದ್ದಾರೆ.

ರಾತ್ರಿ 7.10 ರಿಂದ 9.10 ರವರೆಗೆ ಕೇವಲ 2 ಗಂಟೆಗಳ ಅವಧಿಯಲ್ಲಿ ಜಯಮಹಲ್, ಆರ್.ಟಿ. ನಗರ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಹೆಣ್ಣೂರು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಚಿವರು ಒಟ್ಟು 10 ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರಯಾಣಿಸಿ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಮಾಸ್ಕ್ ಧರಿಸಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲಿ, ಚಾಲಕ-ಕಂಡಕ್ಟರ್‌ಗಳಿಗಾಗಲಿ ಇವರು ಸಚಿವರು ಎಂಬುದು ಪತ್ತೆಯಾಗಲಿಲ್ಲ.

100 ರೂ. ನೋಟು ನೀಡಿದ್ದಕ್ಕೆ ಸಚಿವರನ್ನೇ ಬಸ್‌ನಿಂದ ಇಳಿಸಿದ ನಿರ್ವಾಹಕ!

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವರು ಎರಡು ಟಿಕೆಟ್ ಕೇಳಿ 100 ರೂಪಾಯಿ ನೋಟು ನೀಡಿದ್ದಾರೆ. ಈ ವೇಳೆ ಚಿಲ್ಲರೆ ನೀಡುವಂತೆ ಕಂಡಕ್ಟರ್ ಕೇಳಿದ್ದು, ಸಚಿವರು ಚಿಲ್ಲರೆ ಇಲ್ಲ ಎಂದಿದ್ದಾರೆ. ತಕ್ಷಣವೇ ತನ್ನ ಬ್ಯಾಗ್ ತೋರಿಸಿ ನನ್ನ ಬಳಿಯೂ ಚಿಲ್ಲರೆ ಇಲ್ಲ ಎಂದು ಹೇಳಿದ ಕಂಡಕ್ಟರ್, “ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದು ಸಚಿವರಿಗೇ ಕಟುವಾಗಿ ಹೇಳಿದ್ದಾರೆ. ಇದಕ್ಕೆ ಸಚಿವರು ಯಾವುದೇ ಮರುಮಾತನಾಡದೆ ಸುಮ್ಮನೆ ಬಸ್‌ನಿಂದ ಕೆಳಗಿಳಿದಿದ್ದಾರೆ.

ಕೈ ತೋರಿಸಿದರೂ ಬಸ್ ನಿಲ್ಲಿಸದ ಡ್ರೈವರ್, ಕಂಡಕ್ಟರ್ ಅಮಾನತು

ಜಯಮಹಲ್‌ನಿಂದ ಸಾಗುತ್ತಿದ್ದ ಬಿಎಂಟಿಸಿ ಬಸ್ (ಕೆಎ 57 ಎಫ್ 3372) ಫನ್ ವರ್ಲ್ಡ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲ್ಲಿಸದೆ ಮುನ್ನಡೆದಿದೆ. ಈ ಬಸ್‌ನ ಹಿಂದಿನ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದ ಸಚಿವರು ಇದನ್ನು ಕಣ್ಣಾರೆ ಕಂಡು, ಸಾರ್ವಜನಿಕರಿಗೆ ತೊಂದರೆ ನೀಡಿದ ಸದರಿ ಬಸ್‌ನ ನಿರ್ವಾಹಕ ದಯಾನಂದ್ ಮತ್ತು ಚಾಲಕ ಮುಸ್ತಾಕ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

WhatsApp Group Join Now

Spread the love

Leave a Reply