ಮದುವೆಯಾಗಿ ಗಂಡನಿಂದ ದೂರವಿದ್ದ ಮಹಿಳೆಯೊಬ್ಬಳ ವಿಚಾರವಾಗಿ ಇಬ್ಬರು ಪುರುಷರ ನಡುವೆ ನಡೆದ ಗಲಾಟೆ (Crime) ವಿಕೋಪಕ್ಕೆ ತಿರುಗಿ, ಒಬ್ಬನ ಕೈ ಹಸ್ತ ಸಂಪೂರ್ಣವಾಗಿ ಕಟ್ ಆಗಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಅರುಣ್ (35) ಎಂದು ಗುರುತಿಸಲಾಗಿದೆ. ಈತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಶೇಷಗಿರಿ (40) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ
ಅಡಿಗೆಬೈಲು ಗ್ರಾಮದ ನಿವಾಸಿಯಾದ ನಾಗರತ್ನ ಎಂಬ ಮಹಿಳೆ ಮದುವೆಯಾಗಿದ್ದರೂ ಕೆಲವು ಕಾರಣಗಳಿಂದ ತನ್ನ ಗಂಡನಿಂದ ದೂರವಾಗಿದ್ದರು. ಈಕೆಯ ವಿಚಾರವಾಗಿ ಗ್ರಾಮದ ಶೇಷಗಿರಿ ಹಾಗೂ ಅರುಣ್ ನಡುವೆ ಕಳೆದ ಕೆಲವು ದಿನಗಳಿಂದ ಸಣ್ಣದಾಗಿ ಶುರುವಾಗಿದ್ದ ಗಲಾಟೆ, ಕ್ರಮೇಣ ದೊಡ್ಡ ಜಗಳಕ್ಕೆ ಕಾರಣವಾಗಿತ್ತು. ಇಬ್ಬರೂ ಅದೇ ಮಹಿಳೆಗಾಗಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಲಾಂಗ್ ಬೀಸಿದಾಗ ತುಂಡಾದ ಹಸ್ತ
ಇದೇ ವಿಚಾರವಾಗಿ ಇತ್ತೀಚೆಗೆ ಶೇಷಗಿರಿ ಮತ್ತು ಅರುಣ್ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಶೇಷಗಿರಿ, ಅರುಣ್ನನ್ನು ಮುಗಿಸುವ ಉದ್ದೇಶದಿಂದ ಆತನ ಮೇಲೆ ಏಕಾಏಕಿ ಲಾಂಗ್ ಬೀಸಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಅರುಣ್ ತನ್ನ ಕೈಯನ್ನು ಅಡ್ಡ ಕೊಟ್ಟಿದ್ದಾನೆ. ಶೇಷಗಿರಿ ಬಲವಾಗಿ ಬೀಸಿದ ಲಾಂಗ್ ಏಟಿಗೆ ಅರುಣ್ನ ಕೈ ಹಸ್ತ ಸಂಪೂರ್ಣವಾಗಿ ಕತ್ತರಿಸಿ ಸ್ಥಳದಲ್ಲೇ ಬಿದ್ದಿದೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅರುಣ್ನನ್ನು ತಕ್ಷಣವೇ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಗಾಯ ಅತ್ಯಂತ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಭೀಕರ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಯುವತಿಗಾಗಿ ಪತಿ, ಪ್ರಿಯಕರನ ನಡುವೆ ಫೈಟ್ – ಯುವಕನ ಹಸ್ತವೇ ಕಟ್!
WhatsApp Group
Join Now