ರಾಜ್ಯ ರಾಜಕೀಯದಲ್ಲಿ ತಮ್ಮ ಖಡಕ್ ಹೇಳಿಕೆಗಳಿಂದಲೇ ಸದಾ ಸಂಚಲನ ಸೃಷ್ಟಿಸುವ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ರಾಜಕೀಯ ಬಾಂಬ್ ಸಿಡಿಸಿದ್ದಾರೆ. ತಮ್ಮನ್ನು ಬಿಜೆಪಿಗೆ ವಾಪಸ್ ಸೇರಿಸಿಕೊಳ್ಳದಿದ್ದರೆ, ‘ಭಗವಾ ಝಂಡಾ’ ಎಂಬ ಹೊಸ ಪಕ್ಷ ಕಟ್ಟಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಾಗಿ ಅವರು ಗುಡುಗಿದ್ದಾರೆ.
ಕೇವಲ ಪಕ್ಷ ಸ್ಥಾಪನೆಯಷ್ಟೇ ಅಲ್ಲ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯ ‘ಬುಲ್ಡೋಜರ್ ಸರ್ಕಾರ’ ರಚಿಸಿ ಆಡಳಿತ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಮದಬಾವಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ‘ನನ್ನನ್ನು ಕಡೆಗಣಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಸಿದ್ದು ಅಣ್ಣ (ಸಿದ್ದರಾಮಯ್ಯ) ಮತ್ತು ಲಕ್ಷ್ಮಣ ಸವದಿ ಅವರು ನಮ್ಮನ್ನು ತೆಗೆದುಕೊಳ್ಳದಿದ್ದರೆ, ನಮ್ಮದೇ ಆದ ‘ಭಗವಾ ಝಂಡಾ’ ಪಕ್ಷ ಅಸ್ತಿತ್ವಕ್ಕೆ ಬರಲಿದೆ. ನಾನೇ ಸ್ವತಃ ಸರ್ಕಾರ ರಚಿಸುತ್ತೇನೆ,’ ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.
‘ನನ್ನ ಪ್ರಮಾಣವಚನವನ್ನು ಟಿವಿಯಲ್ಲಿ ನೋಡುವಿರಿ’
ತಮ್ಮ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ ಯತ್ನಾಳ್, ‘ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ಸಿದ್ದರಾಮಯ್ಯ ಮತ್ತು ಸವದಿ ಅವರು ಮನೆಯಲ್ಲಿ ಕುಳಿತು ಟಿವಿಯಲ್ಲಿ ನೋಡಲಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ಹಣದ ರಾಜಕಾರಣ ನಡೆಯುವುದಿಲ್ಲ. ಹಣ ಕೊಟ್ಟು ಗೆದ್ದವರು ರಾಜ್ಯಕ್ಕೆ ಏನೂ ಮಾಡಿಲ್ಲ ಎಂಬುದು ಜನರಿಗೆ ಅರಿವಾಗಿದೆ,’ ಎಂದು ಹೇಳಿದರು.
11 ಜೆಸಿಬಿಗಳ ಪೂಜೆಯೊಂದಿಗೆ ‘ಬುಲ್ಡೋಜರ್ ಸರ್ಕಾರ’
ತಮ್ಮ ಆಡಳಿತದ ನೀಲನಕ್ಷೆಯನ್ನು ವಿವರಿಸಿದ ಯತ್ನಾಳ್, ‘ನನ್ನ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನ, ಪ್ರಮಾಣವಚನ ಸಮಾರಂಭದಲ್ಲಿ 11 ಜೆಸಿಬಿಗಳಿಗೆ ಪೂಜೆ ಸಲ್ಲಿಸಲಾಗುವುದು. ಈ ಜೆಸಿಬಿಗಳು ಅಭಿವೃದ್ಧಿಯ ಸಂಕೇತವೂ ಹೌದು, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರಿಗೆ ಎಚ್ಚರಿಕೆಯ ಸಂಕೇತವೂ ಹೌದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಣ್ಣನವರು ಹೇಗೆ ಆಡಳಿತ ನಡೆಸುತ್ತಿದ್ದಾರೋ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಬುಲ್ಡೋಜರ್ ಸರ್ಕಾರ ಇರಲಿದೆ,’ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ನೀಡಿದ್ದ ಸಲಹೆ ಇದೀಗ ನಿಜವಾಗುವುದೇ?
ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ನಡೆದ ಸ್ವಾರಸ್ಯಕರ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಯತ್ನಾಳ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಿಮ್ಮನ್ನು ಬಿಜೆಪಿಯವರು ಉಚ್ಚಾಟಿಸಿದ್ದಾರೆ,’ ಎಂದು ಚುಚ್ಚಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಯತ್ನಾಳ್, ‘ನನ್ನನ್ನು ಬಿಜೆಪಿಯವರು ಉಚ್ಚಾಟಿಸಿದ್ದಾರೆ, ನಿಮ್ಮನ್ನು ದೇವೇಗೌಡರು ಉಚ್ಚಾಟಿಸಿದ್ದರು. ಉಚ್ಚಾಟನೆಗೊಂಡವರೇ ಮುಖ್ಯಮಂತ್ರಿ ಆಗುವುದು,’ ಎಂದು ತಿರುಗೇಟು ನೀಡಿದ್ದರು. ಆಗ ಸಿದ್ದರಾಮಯ್ಯ, ‘ಹಾಗಾದರೆ ನೀವೂ ಒಂದು ಪಕ್ಷ ಕಟ್ಟಿ ಮುಖ್ಯಮಂತ್ರಿಯಾಗಿ,’ ಎಂದು ಸಲಹೆ ನೀಡಿದ್ದರು. ಅಂದು ಹಾಸ್ಯಕ್ಕಾಗಿ ಹೇಳಿದ ಮಾತು, ಇಂದು ಯತ್ನಾಳ್ ಅವರ ಹೊಸ ಪಕ್ಷದ ಘೋಷಣೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ.
ಯತ್ನಾಳ್ ಅವರ ಈ ನಡೆ, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೇಸರಿ ಪಾಳಯಕ್ಕೆ ಯತ್ನಾಳ್ ಶಾಕ್! “ಭಗವಾ ಝಂಡಾ” ಪಕ್ಷದ ಮೂಲಕ ಬುಲ್ಡೋಜರ್ ಸರ್ಕಾರ ರಚನೆ ಖಚಿತ; ಸಿದ್ದು, ಸವದಿ ಟಿವಿಯಲ್ಲಿ ನೋಡ್ತಾರೆ! – ಯತ್ನಾಳ್
WhatsApp Group
Join Now