ಹಾಲು ತರಲು ಹೋದ ಮಹಿಳೆಯ ಕಿವಿಯೋಲೆ ಎಳೆದ ರಭಸಕ್ಕೆ ಮಹಿಳೆಯ ಕಿವಿ ಕಟ್ ಕೇಸ್, ಸರಗಳ್ಳರು ಅರೆಸ್ಟ್!

Spread the love

ವಿಜಯಪುರ : ನಗರದಲ್ಲಿ ಮಾನವೀಯತೆಯನ್ನು ನಾಚಿಕೆಪಡಿಸುವಂತಹ ಭೀಕರ ಘಟನೆ ಬೆಳಕಿಗೆ ಬಂದಿದೆ. ನಗರದ ದಿವಟಗೇರಿ ಗಲ್ಲಿಯಲ್ಲಿ ಡಿಸೆಂಬರ್ 26ರಂದು ಸಂಜೆ, ಹಾಲು ತರಲೆಂದು ಅಂಗಡಿಗೆ ಹೊರಟಿದ್ದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ, ಕಿವಿಯನ್ನು ಕತ್ತರಿಸಿ ಕಿವಿಯೋಲೆ ಹಾಗೂ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಕಲಾವತಿ ಗಾಯ್ಕವಾಡ್ (45) ಎಂದು ಗುರುತಿಸಲಾಗಿದ್ದು, ಮನೆ ಸಮೀಪದಲ್ಲೇ ಈ ದಾರುಣ ಘಟನೆ ನಡೆದಿದೆ. ಆರೋಪಿಗಳು ಮುಸುಕುಧಾರಿಗಳಾಗಿ ಬಂದಿದ್ದು, ಮೊದಲು ಮಹಿಳೆಗೆ ಪರಿಚಿತರಂತೆ ಮಾತನಾಡಿ, ನಂತರ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳೆಯ ಮಗನ ಸ್ನೇಹಿತರೆಂದು ಹೇಳಿಕೊಂಡು ಹತ್ತಿರವಾದ ದುಷ್ಕರ್ಮಿಗಳು, ಆಕೆಯ ಮೇಲೆ ಅಮಾನುಷವಾಗಿ ದಾಳಿ ಮಾಡಿ ಸುಮಾರು 10 ಗ್ರಾಂ ಮಾಂಗಲ್ಯ ಸರ ಹಾಗೂ 1 ಗ್ರಾಂ ಕಿವಿಯೋಲೆ ಕದ್ದುಕೊಂಡು ಪರಾರಿಯಾಗಿದ್ದಾರೆ.

ಕಿವಿ ಕತ್ತರಿಸಿ ವಿಕೃತಿ

ಹಲ್ಲೆಯ ವೇಳೆ ಮಹಿಳೆಯ ಒಂದು ಕಿವಿಯನ್ನು ಕತ್ತರಿಸಿರುವುದರಿಂದ ಭಾರೀ ರಕ್ತಸ್ರಾವವಾಗಿದ್ದು, ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಗಾಯಗೊಂಡ ಕಿವಿಗೆ ಮೂರು ಸ್ಟಿಚ್ ಹಾಕಿದ್ದು, ಬಾಯಿಗೆ ಗುದ್ದಿದ ಪರಿಣಾಮ ಹಲ್ಲು ನೋವು ಕೂಡ ಉಂಟಾಗಿದೆ ಎಂದು ಕಲಾವತಿ ಗಾಯ್ಕವಾಡ್ ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಈ ಕೃತ್ಯವನ್ನು ಅದೇ ಏರಿಯಾದ ಇಬ್ಬರು ಯುವಕರು ನಡೆಸಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಮಹಿಳೆಯ ಮಗನಿಗೆ ಆರೋಪಿಗಳು ಪರಿಚಿತರಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಎಂದು ಗುರುತಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ನಗರದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಸಾರ್ವಜನಿಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ, ವಿಜಯಪುರ ನಗರದಲ್ಲಿ ನಡೆದ ಈ ಕೃತ್ಯ ನಾಗರಿಕರಲ್ಲಿ ಆತಂಕ ಮೂಡಿಸಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ.

WhatsApp Group Join Now

Spread the love

Leave a Reply