ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಮತ್ತು ತಮ್ಮನ್ನು ಕೊಲ್ಲುತ್ತಾನೆ ಎಂಬ ಭಯದಿಂದ ಪತ್ನಿಯೊಬ್ಬಳು ತನ್ನ ತಮ್ಮನೊಂದಿಗೆ ಸೇರಿ ಪತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶನಿವಾರ(ಜ.24) ವರದಿಯಾಗಿದೆ.
ಪ್ರಕಾಶಂ ಜಿಲ್ಲೆಯ ಪೆದ್ದರವಿಡು ಮಂಡಲದಲ್ಲಿ ಬುಧವಾರ ಈ ಘಟನೆ ನಡೆದಿದೆ. ಲಾಲು ಶ್ರೀನು (38) ಕೊಲೆಯಾದ ಪತಿ. ಝಾನ್ಸಿ ಗಂಡನ ಕೊಲೆಗೆ ಸುಪಾರಿ ನೀಡಿ, ಜೊತೆಗೆ ತಾನೇ ತಮ್ಮನೊಂದಿಗೆ ಸೇರಿ ಕೊಲೆ ಮಾಡಿದ ಆರೋಪಿ ಪತ್ನಿ. ಕೊಲೆ ಬಳಿಕ ಇಬ್ಬರು ಅಕ್ಕ-ತಮ್ಮ ಠಾಣೆಗೆ ಬಂದು ಶರಣಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಕಾಶಂ ಜಿಲ್ಲಾ ಡಿಎಸ್‌ಪಿ ನಾಗರಾಜು, ದೋರ್ನಾಳದ ಅಡಪಲ ಲಾಲು ಶ್ರೀನು(38) 17 ವರ್ಷಗಳ ಹಿಂದೆ ಸುನ್ನಿಪೆಂಟದ ಝಾನ್ಸಿಯನ್ನು ಮದುವೆಯಾಗಿದ್ದನು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಲಾರಿ ಚಾಲಕನಾಗಿದ್ದ ಶ್ರೀನು, ಕೆಲವು ಸಮಯದಿಂದ ಕೆಟ್ಟ ಚಟಗಳಿಗೆ ವ್ಯಸನಿಯಾಗಿದ್ದ, ಎರಡೂ ತಿಂಗಳ ಹಿಂದೆ ಗಾಂಜಾ ಮಾರಾಟ ಮಾಡಿ ಜೈಲು ಸೇರಿದ್ದ ಎಂದು ತಿಳಿಸಿದ್ದಾರೆ.
ಪತಿಯ ಈ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಝಾನ್ಸಿ, ತನ್ನ ಕಿರಿಯ ಸಹೋದರನ ಸ್ನೇಹಿತ ಸೂರ್ಯ ನಾರಾಯಣ ಎಂಬುವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದಿದ್ದ ಪತಿ ಶ್ರೀನು ಕೋಪಗೊಂಡಿದ್ದು, ಜೈಲಿಗೆ ಭೇಟಿ ಮಾಡಲು ಹೋಗಿದ್ದಾಗ ಪತ್ನಿಗೆ ಇಬ್ಬರನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.
ಪತಿ ಬೆದರಿಕೆಯಿಂದ ಭಯಭೀತರಾದ ಝಾನ್ಸಿ, ಶ್ರೀನು ಹೊರಗೆ ಬಂದ್ರೆ ತನ್ನನ್ನು ಕೊಲ್ಲುತ್ತಾನೆ ಎಂದು ಹೆದರಿ ಪ್ರಿಯಕರ ಮತ್ತು ತಮ್ಮನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ. ಅದಕ್ಕಾಗಿ ಗುಂಟೂರಿನ ಗ್ಯಾಂಗ್ಗೆ 2 ಲಕ್ಷ ರೂ. ಸುಪಾರಿ ನೀಡಿದ್ದರು. ಒಂಗೋಲ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪತಿಯನ್ನು ಚಿಮಕುರ್ತಿ ಮತ್ತು ಪೊಡಿಲಿ ನಡುವೆ ಕೊಲ್ಲಲು ಯೋಜನೆ ರೂಪಿಸಲಾಗಿತ್ತು. ಆದರೆ ಅಲ್ಲಿ ಕೆಲಸ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಪೆದ್ದರವೀಡು ಅಂಕಾರಮ್ಮ ದೇವಸ್ಥಾನದ ಬಳಿ ಕಾರನ್ನು ನಿಲ್ಲಿಸಿ, ಶ್ರೀನುವಿನ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಲಾಲು ಶ್ರೀನು ನೋವಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಹೇಗಾದರೂ ಸಿಕ್ಕಿ ಹಾಕಿಕೊಳ್ತೇವೆಂದು ಭಾವಿಸಿ ಝಾನ್ಸಿ ಮತ್ತು ಅವಳ ಸಹೋದರ ಇಬ್ಬರೂ ಠಾಣೆಗೆ ಬಂದು ಶರಣಾಗಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ.
ಅಕ್ರಮ ಸಂಬಂಧ – ಪ್ರಿಯಕರನಿಗಾಗಿ ತಮ್ಮನೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ : ಠಾಣೆಗೆ ಬಂದು ಶರಣು
WhatsApp Group
Join Now