ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಮಾತಿನ ಸಮರ ಮುಂದುವರಿದಿದೆ. ಗುರುವಾರ ಡಿಕೆ ಶಿವಕುಮಾರ್ ಅವರು ಬಿಜೆಪಿ-ಜೆಡಿಎಸ್ ವಿಲೀನದ ಬಗ್ಗೆ ಮಾತನಾಡಿದ್ದು, ಅದಕ್ಕೆ ಎಚ್ ಡಿಕೆ ಅವರು ಇದೀಗ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಡಿಕೆ ಶಿವಕುಮಾರ್ ಅವರ ಅಡಳಿತಾನುಭವದ ಬಗ್ಗೆ ಮಾತನಾಡಿದ್ದಾರೆ. ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ಡಿಸಿಎಂ ಡಿಕೆಶಿ ಅವರ ಅನುಭವ ಎಂದು ಜರಿದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರೇ.. ನಮ್ಮ ವಿಲೀನದ ಚಿಂತೆ ಪಕ್ಕಕ್ಕೆ ಇಡಿ. ನನ್ನ ಮತ್ತು ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ. ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪ ಅವಧಿಗೆ ಪ್ರತಿಪಕ್ಷ ನಾಯಕ. ಈಗ ಕೇಂದ್ರ ಮಂತ್ರಿ. ನೀವೂ ಸುದೀರ್ಘ ಅವಧಿಗೆ ಶಾಸಕ, ಅನೇಕ ಬಾರಿ ಮಂತ್ರಿ. ಈಗ ಮಂತ್ರಿ, ಉಪ ಮುಖ್ಯಮಂತ್ರಿ! ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳುವುದಲ್ಲ, ಜನರನ್ನೇ ಕೇಳಬೇಕು.
ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್ ಪೀರಿಯನ್ಸ್ ಅಲ್ಲಾ ಡಿಕೆಶಿರವರೇ.. ಏನೋ.. ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕಿದ ಅವಕಾಶದಲ್ಲಿ ಜನರಿಗೆ ಕೈಲಾದ ಸಹಾಯ ಮಾಡುವ ಹುಲು ರಾಜಕಾರಣಿ ನಾನಷ್ಟೇ. ನಿಮಗೆ ಸಿದ್ಧಿಸಿರುವ ಅಂತಹ ಭಾರೀ ಅನುಭವ ನನಗಿಲ್ಲ, ವಿನಮ್ರವಾಗಿ ಒಪ್ಪಿಕೊಳ್ಳುವೆ. ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು. ಅದನ್ನಷ್ಟೇ ನಾನು ಹೇಳಿದ್ದು ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.
ಎಕ್ಸ್’ಟ್ರಾ ಕೊಂಬು, ಕೋಡು ಇರಲ್ಲ
ತಾವು ಡಿಸಿಎಂ ಆಗಿರಬಹುದು. ಆದರೆ ಮಂತ್ರಿ ಪದವಿಗೆ ಇರುವಷ್ಟೇ ಶಿಷ್ಟಾಚಾರ, ಅಧಿಕಾರ ವ್ಯಾಪ್ತಿ ಆ ಹುದ್ದೆಗಿದೆ ಎನ್ನುವುದು ಗೊತ್ತಿಲ್ಲವೇ? ಅದಕ್ಕೇನು ಎಕ್ಸ್’ಟ್ರಾ ಕೊಂಬು, ಕೋಡು ಇರಲ್ಲ. ಇರಲಿ ಎಂದು ತಾವು ಸಿಕ್ಕಿಸಿಕೊಳ್ಳುವುದಕ್ಕೂ ಬರಲ್ಲ. ನಿಮ್ಮ ಎಕ್ಸ್ಪೀರಿಯನ್ಸ್ ಗೆ ಈ ಸಣ್ಣ ವಿಷಯವೂ ತಟ್ಟಲಿಲ್ಲವೇ ಮಿಸ್ಟರ್ ಡಿಕೆಶಿ ಅವರೇ ಎಂದು ಕುಮಾರಸ್ವಾಮಿ ತಿವಿದಿದ್ದಾರೆ.
ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ಗೃಹ ಸಚಿವರೇ ನಡೆಸಬೇಕಿತ್ತು. ಅದು ಅವರ ಅಧಿಕಾರ ವ್ಯಾಪ್ತಿ. ಅವರು ಬಿಟ್ಟರೆ ಮುಖ್ಯಮಂತ್ರಿಗಳು ಅಂಥ ಸಭೆ ನಡೆಸಬಹುದು. ನೀವು ಸಭೆ ನಡೆಸಿದ್ದು ಶಿಷ್ಟಾಚಾರ, ಅಧಿಕಾರದ ಸ್ಪಷ್ಟ ಉಲ್ಲಂಘನೆ. ಇದನ್ನು ಆಡಳಿತಾನುಭವ, ಸೀನಿಯಾರಿಟಿ ಎಂದು ಬೆನ್ನು ತಟ್ಟಿಕೊಳ್ಳುತ್ತೀರಾ? ಹೋಗಲಿ, ನೀವು ಮೀಟಿಂಗ್ ಮಾಡಿ ಎಂದು ಗೃಹ ಸಚಿವರು, ಸಿಎಂ ಅವರು ಹೇಳಿದ್ದರಾ? ಇಲ್ಲವಲ್ಲ. ಅದಕ್ಕೆ ನಾನು ಹೇಳಿದ್ದು; ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ? ಅಥವಾ ರಬ್ಬರ್ ಸ್ಟ್ಯಾಂಪ್ ಗೃಹ ಮಂತ್ರಿಗಳಾ ಎಂದು. ಒಬ್ಬ ಹಿರಿಯ ಮಂತ್ರಿಯ ಖಾತೆಯನ್ನು ನೀವು ಹೀಗೆ ಅಕ್ರಮವಾಗಿ ಒತ್ತುವರಿ ಮಾಡುವುದಕ್ಕೆ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನನ್ನಾದರೂ ಮಾಡಿಸಿದ್ದೀರ? ನಿಮ್ಮದು ಭಾರೀ ಅನುಭವ, ಸಿಕ್ಕಾಪಟ್ಟೆ ಸೀನಿಯಾರಿಟಿ! ಇಂಥ ಸಣ್ಣ ವಿಷಯ ನಿಮಗೇಕೆ ತಿಳಿಯಲಿಲ್ಲ ಮಿಸ್ಟರ್ ಡಿಕೆಶಿ ಅವರೇ ಎಂದು ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ.
ಡಿಸಿಎಂ ಹುದ್ದೆಗೆ ಎಕ್ಸ್ಟ್ರಾ ಕೊಂಬು, ಕೋಡು ಇರಲ್ಲ.. : ಎಚ್ಡಿ ಕುಮಾರಸ್ವಾಮಿ ವಾಗ್ದಾಳಿ
WhatsApp Group
Join Now