ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!

Spread the love

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಪ್ರೌಢಶಾಲೆಯ ಪ್ರಾಂಶುಪಾಲ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೋಷಕರು ಮತ್ತು ಸ್ಥಳೀಯರಿಂದ ಧರ್ಮದೇಟು ತಿಂದಿದ್ದಾನೆ. ಘಟನೆಯ ನಂತರ, ಪೊಲೀಸರು ಆರೋಪಿ ಪ್ರಾಂಶುಪಾಲನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಶಾಲಾ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪ್ರೌಢ ಶಾಲೆಯ ಪ್ರಾಂಶುಪಾಲನಿಗೆ ಸ್ಥಳೀಯರು ಮತ್ತು ಪೋಷಕರು ಧರ್ಮದೇಟು ನೀಡಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಹೆಣ್ಣು ಮಕ್ಕಳ ಹೈಸ್ಕೂಲ್‌ನಲ್ಲಿ ನಡೆದಿದೆ. ಈ ಘಟನೆ ಗ್ರಾಮದಲ್ಲಿ ತೀವ್ರ ಆಕ್ರೋಶ ಮತ್ತು ಸಂಚಲನ ಮೂಡಿಸಿದೆ.

ಬೆಳಗುಂದಿ ಹೆಣ್ಣು ಮಕ್ಕಳ ಹೈಸ್ಕೂಲ್‌ನ (Belagundi Girls High School) ಪ್ರಾಂಶುಪಾಲನಾಗಿರುವ ಕಲ್ಲಪ್ಪ ಬೆಳಗಾಂವಕರ್ ಎಂಬಾತನ ಮೇಲೆ ಶಾಲೆಯ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪ ಕೇಳಿ ಬಂದಿದೆ. ಕಳೆದ ಕೆಲವು ದಿನಗಳಿಂದ ಪ್ರಾಂಶುಪಾಲನ ವರ್ತನೆ ಅಸಹಜವಾಗಿದ್ದು, ಆತ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

ಪ್ರಾಂಶುಪಾಲನ ಈ ದುರ್ವರ್ತನೆ ಕುರಿತು ವಿದ್ಯಾರ್ಥಿನಿಯರು ತಮ್ಮ ಪೋಷಕರು ಮತ್ತು ಗ್ರಾಮದ ಮುಖಂಡರ ಗಮನಕ್ಕೆ ತಂದಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಪೋಷಕರು ತಕ್ಷಣವೇ ಶಾಲೆಯತ್ತ ಧಾವಿಸಿದ್ದಾರೆ.

ಶುಕ್ರವಾರ (ಡಿ.12) ಶಾಲೆಯ ಒಳಗೆ ನುಗ್ಗಿದ ಪೋಷಕರು ಮತ್ತು ಸ್ಥಳೀಯರು, ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್‌ನನ್ನು ಹೊರಗೆ ಎಳೆತಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆತನಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಪ್ರಾಂಶುಪಾಲನ ವಿರುದ್ಧ ವಿದ್ಯಾರ್ಥಿನಿಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪ್ರಾಂಶುಪಾಲನಿಗೆ ಜನರು ಥಳಿಸುತ್ತಿರುವ ಮಾಹಿತಿ ತಿಳಿದ ಕೂಡಲೇ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರೊಚ್ಚಿಗೆದ್ದಿದ್ದ ಜನಸಮೂಹದಿಂದ ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್‌ನನ್ನು ರಕ್ಷಿಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.

ಪ್ರಾಂಶುಪಾಲನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಶಾಲೆಯಿಂದ ಆತನನ್ನು ವಜಾಗೊಳಿಸಬೇಕು ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿನಿಯರ ಪೋಷಕರು ಪೊಲೀಸರ ಬಳಿ ತೀವ್ರವಾಗಿ ಒತ್ತಾಯಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿದ್ಯಾರ್ಥಿನಿಯರು ಮತ್ತು ಪೋಷಕರಿಂದ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದಲೇ ಇಂತಹ ದುಷ್ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.

WhatsApp Group Join Now

Spread the love

Leave a Reply