ಸಿಲಿಕಾನ್ ಸಿಟಿ ಬೆಂಗಳೂರಿನ ಥಣಿಸಂದ್ರದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಶಾಲಾ ಬಸ್ ಹಾಗೂ ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ಇಬ್ಬರು ಎಳೆ ವಯಸ್ಸಿನ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿಯೇ ಈ ದುರ್ಘಟನೆ ನಡೆದಿದ್ದು, ಪೊಲೀಸ್ ಸಿಬ್ಬಂದಿಯ ಕುಟುಂಬದಲ್ಲಿ ಮೌನ ಆವರಿಸಿದೆ.
ಘಟನೆಯ ವಿವರ
ನಗರದ ಸಿಎಆರ್ (CAR) ವಿಭಾಗದಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗನಗೌಡ ಎಂಬುವವರು ಇಂದು ಬೆಳಿಗ್ಗೆ ತಮ್ಮ ಬೈಕ್ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು. ಥಣಿಸಂದ್ರದ ಮುಖ್ಯರಸ್ತೆಯ ಬಳಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಅಜ್ ಮೋನಿ (Ajmoni School) ಶಾಲೆಗೆ ಸೇರಿದ ಬಸ್ ಅಚಾನಕ್ಕಾಗಿ ಟರ್ನ್ ಪಡೆದುಕೊಂಡಿದೆ. ಈ ವೇಳೆ ಬೈಕ್ಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ.
ಕಣ್ಣೆದುರೇ ಹರಿದ ಬಸ್ ಚಕ್ರ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ನಾಗನಗೌಡ ಮತ್ತು ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಮಕ್ಕಳಿಬ್ಬರು ನೇರವಾಗಿ ಬಸ್ಸಿನ ಚಕ್ರದ ಕೆಳಗೆ ಬಿದ್ದಿದ್ದು, ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಬಸ್ ಮಕ್ಕಳ ಮೇಲೆ ಹರಿದಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಎರಡು ಮತ್ತು ನಾಲ್ಕು ವರ್ಷದ ಇಬ್ಬರು ಪುಟಾಣಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಣ್ಣೆದುರೇ ಮಕ್ಕಳನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಪಟ್ಟವರು ಯಾರು.?
ಅಪಘಾತದಲ್ಲಿ ಮೃತಪಟ್ಟವರನ್ನು ಕಾನ್ಸ್ಟೇಬಲ್ ನಾಗನಗೌಡ ಅವರ ಮಗಳು ವರ್ಷ (2 ವರ್ಷ) ಹಾಗೂ ಅವರ ಅಣ್ಣನ ಮಗಳು ಭಾನು (4 ವರ್ಷ) ಎಂದು ಗುರುತಿಸಲಾಗಿದೆ. ಮೃತಪಟ್ಟ ಇಬ್ಬರೂ ಮಕ್ಕಳು ಪೊಲೀಸ್ ಸಿಬ್ಬಂದಿಯವರ ಕುಟುಂಬಕ್ಕೆ ಸೇರಿದವರಾಗಿದ್ದು, ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಿದ್ದರು. ನೆಮ್ಮದಿಯಿಂದ ಹಾಲು ತರಲು ಹೋದ ಮಕ್ಕಳು ಶವವಾಗಿ ಮನೆಗೆ ಮರಳುತ್ತಿರುವುದನ್ನು ಕಂಡು ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ.
ಸ್ಥಳಕ್ಕೆ ಡಿಸಿಪಿ ಭೇಟಿ :
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದು, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಶಾಲೆಗೆ ಮಕ್ಕಳನ್ನು ಕರೆದೊಯ್ಯಬೇಕಾದ ಬಸ್, ಅಮಾಯಕ ಮಕ್ಕಳ ಜೀವವನ್ನೇ ಬಲಿಪಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಶಾಲಾ ವಾಹನಗಳ ಅತಿವೇಗ ಮತ್ತು ಅಜಾಗರೂಕ ಚಾಲನೆಗೆ ಇದು ಮತ್ತೊಂದು ಬಲಿಯಾಗಿದೆ.
ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!
WhatsApp Group
Join Now