ತುಮಕೂರು : ಗಂಡನ ಸಾವು ಹೃದಯಾಘಾತ ಎಂದು ಪತ್ನಿ ಕಣ್ಣೀರು ಹಾಕಿದ್ದಳು. ಗಂಡನ ಸಾವಿನ ಬಗ್ಗೆ ಕಿಂಚಿತ್ತು ಕೊರಗಿಲ್ಲದ ಪತ್ನಿ, ಪತಿ ಮೃತಪಟ್ಟ 20 ದಿನಕ್ಕೆ ಮತ್ತೊಬ್ಬನ ಮದುವೆಯಾಗಿದ್ದಳು. ಆಕೆಯ ನಡೆಯಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಅಂತ್ಯಕ್ರಿಯೆ ಮಾಡಿ ಹೂತಿಟ್ಟ ಶವ ಸಹ ಹೊರ ತೆಗೆದು ಪರಿಕ್ಷೆ ನಡೆಸಲಾಗಿತ್ತು. ಈ ನಡುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಎಂಬಂತೆ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಯಲಾಗಿದ್ದು, ಪತ್ನಿ ಹಾಗೂ ಆಕೆಯ ಹೊಸ ಗಂಡ ತಾವೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಹೃದಯಾಘಾತದಿಂದ ಪತಿ ಸಾವು ಕೇಸ್ಗೆ ಸ್ಫೋಟಕ ಟ್ವಿಸ್ಟ್
ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎನ್ನಲಾಗಿದ್ದ ತುಮಕೂರು ತಾಲ್ಲೂಕಿನ ಹೆಬ್ಬೂರು ಹೊಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವು ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪರಮೇಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನಲೆ ಮೃತನ ಸಹೋದರಿ ಹೆಬ್ಬೂರು ಠಾಣೆಗೆ ದೂರು ನೀಡಿದ್ದರು. ಆ ಬಳಿಕ ಫೆಬ್ರವರಿ 26ರಂದು ದಾಸರಹಳ್ಳಿಯ ತೋಟದ ಮನೆ ಬಳಿ ಹೂತಿಟ್ಟಿದ್ದ ಪರಮೇಶ್ ಮೃತದೇಹ ಹೊರ ತೆಗೆದು ಪರೀಕ್ಷೆ ಸಹ ನಡೆಸಲಾಗಿತ್ತು. ಮತ್ತೊಂದೆಡೆ ಘಟನೆ ಬಗ್ಗೆ ಹೆಬ್ಬೂರು ಪೊಲೀಸರು ವಿಚಾರಣೆ ನಡೆಸುವಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಪರಮೇಶ್ ಮೃತಪಟ್ಟು ಇನ್ನು ತಿಂಗಳ ಕಾರ್ಯವೂ ಸಹ ನಡೆದಿರಲಿಲ್ಲ. ಆತನ ಸಾವು ಸಂಭವಿಸಿದ 20 ದಿನಕ್ಕೆ ಪತ್ನಿ ಆಶಾ, ಚಂದ್ರಪ್ಪ ಎಂಬಾತನ ವಿವಾಹವಾಗಿದ್ದಳು. ಇದು ಪರಮೇಶ್ ಸಹೋದರಿಯರಿಗೆ ಅನುಮಾನ ಮೂಡಿಸಿತ್ತು. ಈ ಹಿನ್ನಲೆ ಕೊಟ್ಟ ದೂರಿನ ಅಡಿ ತನಿಖೆ ವೇಳೆ ಆಶಾ ಹಾಗೂ ಆಕೆಯನ್ನ ವಿವಾಹವಾಗಿದ್ದ ಚಂದ್ರಪ್ಪನ ಬಗ್ಗೆ ಅನುಮಾನ ಮೂಡಿತ್ತು. ಅದೇ ಆಯಾಮದಲ್ಲಿ ವಿಚಾರಣೆ ನಡೆಸಲಾಗಿ ತಾವೇ ಪರಮೇಶ್ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಇದು ಸಂಬಂಧಿಕರಲ್ಲಿ ಕಣ್ಣೀರು ತರಿಸಿದೆ.
ಚಂದ್ರಪ್ಪಗೆ ಆಶಾ ಪರಿಚಯವಾಗಿದ್ದೇಗೆ.?
ಇನ್ನು ಆರೋಪಿಗಳನ್ನು ಬಂಧಿಸಿದ ಹೆಬ್ಬೂರು ಪೊಲೀಸರು ಘಟನೆಯ ಅಸಲಿ ಕಾರಣ ಹುಡುಕಲು ಮುಂದಾಗಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಕ್ಯಾಟರಿಂಗ್ ಕೆಲಸಕ್ಕೆ ಸೇರಿದ್ದ ಆಶಾಗೆ ಚಂದ್ರಪ್ಪನ ಪರಿಚಯವಾಗಿತ್ತು. ಆ ಬಳಿಕ ಇಬ್ಬರು ಆತ್ಮೀಯ ಗೆಳೆಯರಾಗಿದ್ದರು. ಇದರ ನಡುವೆ ಮನೆಯಲ್ಲಿ ಸಹ ಪರಮೇಶ್ಗೆ ಆಶಾ ಕಿರುಕುಳ ಕೊಡುತಿದ್ದಳು ಎನ್ನಲಾಗಿತ್ತು. ಮೇಲಾಗಿ ಪರಮೇಶ್ ಸಹ ಆಶಾಗೆ ಎರಡನೇ ಗಂಡನಾಗಿದ್ದ. ಆದರೇ ಆತನ ಕೊಲೆ ಮಾಡಿ ಚಂದ್ರಪ್ಪನ ಮದುವೆಯಾದ ಆಶಾಳ ಉದ್ದೇಶ ಏನಾಗಿತ್ತು ಎನ್ನುವುದರ ಬಗ್ಗೆ ವಿಚಾರಣೆ ಮುಂದುವರೆದಿದೆ. ಆದರೆ ಈ ಘಟನೆ ಇಡಿ ಊರಿನ ಜನರನ್ನೇ ಬೆಚ್ಚಿ ಬೀಳಿಸಿದೆ.
ಸದ್ಯ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಹೆಬ್ಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪತಿಯನ್ನೇ ಕೊಂದ ಪತ್ನಿಯ ನಾಟಕ ಪೊಲೀಸರ ತನಿಖೆ ವೇಳೆ ಬಯಲಾಗಿದ್ದು, ಕೊಲೆಯ ಹಿಂದಿನ ಅಸಲಿ ಕಾರಣ ಪೊಲೀಸರ ತನಿಖೆ ಹಿಂದಷ್ಟೇ ತಿಳಿದು ಬರಬೇಕಿದೆ.
ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು
WhatsApp Group
Join Now