ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಪ್ರತಿ ವರ್ಷವೂ ದೇಶದಲ್ಲಿ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ. ಕೆಲವರು ಇದರ ವಿರುದ್ಧ ಹೋರಾಡಿ ಗೆದ್ದು ಬಂದರೆ ಮತ್ತೆ ಕೆಲವರು ನೆನಪಾಗಿ ಉಳಿಯುತ್ತಾರೆ. ಎಳೆಯ ಮಕ್ಕಲಿಮದ ಹಿಡಿದು ಯುವಕರು ಮಧ್ಯವಯಸ್ಕರು ವೃದ್ಧರವರವೆಗೆ ಕ್ಯಾನ್ಸರ್ ಬಹುತೇಕ ಇಡೀ ಸಮುದಾಯ ಅನೇಕರನ್ನು ಕಾಡಿದೆ.
ಈ ಮಾರಕ ಕಾಯಿಲೆಯ ನೋವು ಒಂದು ಕಡೆಯಾದರೆ ಈ ಕಾಯಿಲೆ ಬಂತಲ್ಲ ಎಂಬ ಮಾನಸಿಕ ದುಃಖ ಕುಗ್ಗುವಿಕೆ ಮನುಷ್ಯನನ್ನು ಮತ್ತಷ್ಟು ನರಳುವಂತೆ ಮಾಡುತ್ತದೆ. ಅದರಲ್ಲೂ ಇನ್ನಷ್ಟೇ ಜೀವನ ನೋಡಬೇಕಾದ ಮಕ್ಕಳು ಯುವ ತರುಣರು ಈ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗುವುದನ್ನು ಅರಗಿಸಿಕೊಳ್ಳುವುದು ಅವರ ಕುಟಂಬದವರು ಬಂಧುಗಳು ಆತ್ಮೀಯರಿಗೆ ಬಹಳ ಕಷ್ಟವಾಗುತ್ತದೆ. ಬಹುತೇಕರು ಹಲವು ಹೋರಾಟದ ನಂತರವೂ ಸೋಲುವ ಸ್ಥಿತಿ ಬಂದಿರುತ್ತದೆ. ವೈದ್ಯರು ಇನ್ನೂ ಏನೂ ಮಾಡಲಾಗದು ಎಂದು ಕೈಚೆಲ್ಲಿ ಬಿಡುತ್ತಾರೆ. ನೀವು ಹೆಚ್ಚೆಂದರೆ ಇಷ್ಟುದಿನ ಬದುಕಬಹುದು ಎಂದು ಅವರಿಗೆ ನಿರ್ಭಾವುಕರಾಗಿಯೇ ಹೇಳಬೇಕಾದಂತಹ ಸ್ಥಿತಿ ಬಂದು ಬಿಡುತ್ತದೆ. ವೈದ್ಯರ ಮಾತಿನಿಂದಾಗಿ ಪೀಡಿತರು ಸಾವನ್ನು ಎದುರು ನೋಡುತ್ತಾ ಇರುವ ದಿನಗಳನ್ನು ಕಳೆಯಲು ಶುರು ಮಾಡುತ್ತಾರೆ. ಕುಟುಂಬದವರು, ಪ್ರೀತಿಪಾತ್ರರು, ಅವರಿನ್ನು ಹೆಚ್ಚು ಕಾಲ ಇರುವುದಿಲ್ಲ ಎಂಬ ವಾಸ್ತವವನ್ನು ಅರಿತುಕೊಂಡು ಅವರ ಕೊನೆಯ ಕ್ಷಣಗಳಲ್ಲಿ ಅವರ ಆಸೆ ಈಡೇರಿಸುವ ಅಥವಾ ಅವರ ಖುಷಿಯಾಗಿಡುವ ಪ್ರಯತ್ನ ಮಾಡುತ್ತಾರೆ.
4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವಕನ ಭಾವುಕ ಪೋಸ್ಟ್
ಹಾಗೆಯೇ ಇಲ್ಲೊಂದು ಕಡೆ ತಾನಿನ್ನು ಹೆಚ್ಚು ಕಾಲ ಬದುಕುಳಿಯುವುದಿಲ್ಲ ಎಂದು ತಿಳಿದು ಕ್ಯಾನ್ಸರ್ ಪೀಡಿತ ಯುವಕನೋರ್ವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ವೊಂದನ್ನು ಬರೆದುಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. RANT VENT ಎಂಬ ಹೆಸರಿನ ರೆಡಿಟ್ ಖಾತೆಯಿಂದ ಈ ಪೋಸ್ಟ್ ವೈರಲ್ ಆಗಿದೆ. ಅವರು ಹೀಗೆ ಬರೆದುಕೊಂಡಿದ್ದಾರೆ.
ಪ್ರತಿಯೊಬ್ಬರಿಗೂ ಹಾಯ್, ನಾನು 21 ವರ್ಷದ ತರುಣ, ನಾನು 2023ರಿಂದ 4ನೇ ಹಂತದ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಾನು ಎಣಿಸಲಾಗದಷ್ಟು ಬಾರಿ ಕಿಮೊಥೆರಪಿ ಮತ್ತು ಆಸ್ಪತ್ರೆಯ ವಾಸ್ತವ್ಯದ ನಂತರ, ಪ್ರಯತ್ನಿಸಲು ಏನೂ ಉಳಿದಿಲ್ಲ ಎಂದು ವೈದ್ಯರು ನನಗೆ ಹೇಳಿದ್ದಾರೆ. ಬಹುಶಃ ಈ ವರ್ಷದ ಅಂತ್ಯದಲ್ಲಿ ನಾನು ಇರುತ್ತೇನೋ ಇಲ್ಲವೋ ಎಂದು ಹೇಳಲಾಗದು.
ದೀಪಾವಳಿ ಹತ್ತಿರದಲ್ಲೇ ಇದೆ. ಹಾಗೂ ಬೀದಿಯಲ್ಲಿ ದೀಪಗಳು ಈಗಾಗಲೇ ಕಾಣಿಸಿಕೊಳ್ಳುವುದಕ್ಕೆ ಶುರುವಾಗಿದೆ. ನಾನು ಆ ದೀಪಗಳನ್ನು ಕೊನೆಯ ಬಾರಿ ನೋಡುತ್ತಿದ್ದೇನೆ ಎಂದು ಅರಿತುಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ನಾನು ಅ ಬೆಳಕನ್ನು ಮಿಸ್ ಮಾಡಿಕೊಳ್ಳುತ್ತೇನೆ, ಆ ನಗು ಹಾಗೂ ಆ ಸದ್ದನ್ನು ಮಿಸ್ ಮಾಡುಕೊಳ್ಳುತ್ತೇನೆ. ನನ್ನ ಜೀವನಯಾತ್ರೆ ಸದ್ದಿಲ್ಲದೇ ಮುಗಿಯುತ್ತಿರುವಾಗ ಜೀವನ ಮುಂದುವರಿಯುತ್ತಿರುವುದನ್ನು ನೋಡುವುದಕ್ಕೆ ವಿಚಿತ್ರ ಎನಿಸುತ್ತಿದೆ. ನನಗೆ ಗೊತ್ತು ಮುಂದಿನ ವರ್ಷ ನಾನು ಕೇವಲ ನೆನಪಾಗಿರುವಾಗ ನನ್ನ ಜಾಗದಲ್ಲಿ ಮತ್ತಿನ್ಯಾರೋ ದೀಪವನ್ನು ಉರಿಸುತ್ತಾರೆ.
ಇದು ವಿಚಿತ್ರವೆನಿಸುತ್ತದೆ. ಬಹುತೇಕ ಅಭ್ಯಾಸದಂತೆ ಕೆಲವು ರಾತ್ರಿಗಳಲ್ಲಿ ನಾನು ಈಗಲೂ ನನ್ನ ಭವಿಷ್ಯದ ಬಗ್ಗೆ ಕನಸು ಕಾಣುತ್ತೇನೆ ಯೋಜನೆ ರೂಪಿಸುತ್ತೇನೆ. ನನಗ ಕನಸುಗಳಿದ್ದವು ನಿಮಗೆ ಗೊತ್ತೆ? ನಾನು ತುಂಬಾ ಕಡೆ ಹೋಗಬೇಕು. ನನ್ನದೇ ಆದ ಏನಾದರೂ ಮಾಡಬೇಕು. ಬಹುಶಃ ಹುರಾದರೆ ಒಂದು ನಾಯಿಯನ್ನು ದತ್ತು ಪಡೆಯಬೇಕು ಎಂದೆಲ್ಲಾ ಕನಸು ಕಂಡಿದ್ದೆ. ನಂತರ ನನಗಿನ್ನು ಹೆಚ್ಚು ಸಮಯವಿಲ್ಲ ಎಂಬುದು ಅರಿವಾಗಿ ಯೋಚನೆಗಳು ಮಾಯವಾದವು. ನಾನು ಮನೆಯಲ್ಲಿದ್ದೇನೆ. ನನ್ನ ಪೋಷಕರ ಮುಖದಲ್ಲಿ ದುಃಖವನ್ನು ನಾನು ನೋಡುತ್ತಿದ್ದೇನೆ. ನಾನು ಯಾಕೆ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ ಎಂದು ನನಗೆ ಗೊತ್ತಿಲ್ಲ, ಬಹುಶಃ ನಾನು ಸಂಪೂರ್ಣವಾಗಿ ಶೂನ್ಯಕ್ಕೆ ಜಾರುವ ಮುನ್ನ ಏನಾದರು ಒಂದು ಗುರುತನ್ನು ಬಿಡಲು ಇದನ್ನೆಲ್ಲಾ ಜೋರಾಗಿ ಹೇಳಲು… ಸರಿ ಮತ್ತೆ ನೋಡೋಣ… ಎಂದು ಅವರು ಬರೆದಿದ್ದು, ಅವರ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಣ್ಣಂಚನ್ನು ತೇವಗೊಳಿಸಿದ ಪೋಸ್ಟ್:
‘ಕ್ಯಾನ್ಸರ್ ಗೆದ್ದುಬಿಡ್ತು ಗೆಳೆಯರೇ ನೋಡೋಣ’ ಎಂದು ಸಾವಿನಂಚಿನಲ್ಲಿರುವ ಯುವಕನೋರ್ವ ಬದುಕಿನ ವಾಸ್ತವವನ್ನು ಅರಿತುಕೊಂಡು ಸಾವಿಗಾಗಿ ಕಾಯುತ್ತಿರುವಾಗ ಬರೆದ ಭಾವುಕ ಬರಹ ಈಗ ಅನೇಕರ ಕಣ್ಣಂಚನ್ನು ತೇವಗೊಳ್ಳುವಂತೆ ಮಾಡಿದೆ. ಅನೇಕರು ಕಾಮೆಂಟ್ ಮಾಡಿ ಆ ಯುವಕನಿಗೆ ದೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಅನೇಕರು ದೇವರೇ ಪವಾಡ ಎಂಬುದು ಇದ್ದರೆ ಅದನ್ನು ಈ ಹುಡುಗನ ವಿಚಾರದಲ್ಲಿ ಮಾಡು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರೇ ನೀನಿದ್ದರೆ ಈ ಹುಡುಗನ ಬದುಕಿಸು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನೂ ಅನೇಕರು ಇರುವ ಸ್ವಲ್ಪ ಸಮಯದಲ್ಲಿ ಖುಷಿಯಾಗಿರುವಂತೆ ಮನವಿ ಮಾಡಿದ್ದಾರೆ.
