ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ರಾಮಕುಂಜದ ವಸಂತ್ ಅಮೀನ್ ಪುತ್ರ ಮೋಕ್ಷ (17) ಗುರುತಿಸಲಾಗಿದೆ. ಬಾಲಕನ ತಂದೆಯೂ ಚೂರಿಯಿಂದ ಇರಿದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಬಗ್ಗೆ ಹಲವು ಅನುಮಾನಗಳು ಮೂಡಿದೆ.
ಕೌಟುಂಬಿಕ ಕಲಹದಲ್ಲಿ ಮನೆಯಲ್ಲಿ ಸಂಘರ್ಷ ನಡೆದ ಬಗ್ಗೆ ಅನುಮಾನ ಇದ್ದು, ತಂದೆ ಮತ್ತು ಮಗನ ಮಧ್ಯೆ ಮನೆಯಲ್ಲಿ ಪರಸ್ಪರ ಜಗಳ ನಡೆದಿರುವ ಸಾಧ್ಯತೆ ಇದೆ. ಈ ವೇಳೆ ಕೋವಿಯಿಂದ ಗುಂಡು ಹಾರಿದ್ದು, ಗುಂಡು ತಗುಲಿ ಬಾಲಕ ಸಾವನಪ್ಪಿರುವ ಸಾಧ್ಯತೆ ಇದ್ದು, ಬಾಲಕನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಬಾಲಕನೇ ಶೂಟ್ ಮಾಡಿಕೊಂಡಿದ್ದಾ ಅಥವಾ ತಂದೆಯೇ ಶೂಟ್ ಮಾಡಿದ್ದಾ ಎಂಬ ಬಗ್ಗೆ ಅನುಮಾನ ಇದೆ. ಇನ್ನು ಗಲಾಟೆಯಲ್ಲಿ ತಂದೆ ವಸಂತ್ ಅಮೀನ್ ಗೂ ಚೂರಿ ಇರಿತದ ಗಾಯವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೇರಳ ಮೂಲದವರಾಗಿರುವ ವಸಂತ ಅಮೀನ್ ಅವರು ರಾಮಕುಂಜ ಪಾದೆ ಎಂಬಲ್ಲಿ ಜಾಗ ಖರೀದಿಸಿ ಮನೆ ಮಾಡಿ ತಂದೆ, ಮಗ ಜೊತೆಯಾಗಿ ವಾಸವಿದ್ದರು. ಮಂಗಳೂರು ಖಾಸಗಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಯಾಗಿದ್ದ ಮೋಕ್ಷ ಅವರು ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಸಂತ ಅಮೀನ್ ವಿರುದ್ಧ ಅವರ ಪತ್ನಿ ಜಯಶ್ರೀ ದೂರು ದಾಖಲಿಸಿದ್ದು, ಮಗನನ್ನು ವಸಂತ ಶೂಟ್ ಮಾಡಿ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಪತ್ನಿ ಜಯಶ್ರೀ ಪತಿಯೊಂದಿಗೆ ಮನಸ್ತಾಪಗೊಂಡು ಮಂಗಳೂರಿನ ತನ್ನ ತಾಯಿ ಮನೆಯಲ್ಲಿದ್ದರು, ಕಳೆದ ಒಂದು ವರ್ಷದಿಂದ ಮನೆಯಲ್ಲಿ ತಂದೆ ಮತ್ತು ಮಗ ಮಾತ್ರ ಇದ್ದರು ಎಂದು ಹೇಳಲಾಗುತ್ತಿದೆ. ಇಡೀ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸ್ ತನಿಖೆಯ ನಂತರವೇ ನಿಜಾಂಶ ತಿಳಿಯಬೇಕಾಗಿದೆ.
ಅಪ್ಪ ಮಗನ ಗಲಾಟೆ ದುರಂತ ಅಂತ್ಯ – ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಮಗನ ಶವ ಪತ್ತೆ
WhatsApp Group
Join Now