ಅಧಿಕಾರದ ಆಸೆ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿ ಮಾಡಬಲ್ಲದು ಎಂಬುದಕ್ಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವ ಸಲುವಾಗಿ, ತಂದೆಯೊಬ್ಬ ತನ್ನ ಆರು ವರ್ಷದ ಮಗಳನ್ನೇ ಕಾಲುವೆಗೆ ನೂಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೇರೂರ್ ಗ್ರಾಮದ ನಿವಾಸಿ ಪಾಂಡುರಂಗ ಕೊಂಡಮಂಗಲೆ ಎಂಬಾತ ಗ್ರಾಮದಲ್ಲಿ ಸಲೂನ್ ನಡೆಸುತ್ತಿದ್ದ. ಈತನಿಗೆ ಒಬ್ಬ ಮಗ ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಮಹಾರಾಷ್ಟ್ರದ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ, ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿ ಸರಪಂಚನಾಗಬೇಕೆಂಬ ಹಂಬಲ ಹೊಂದಿದ್ದ ಪಾಂಡುರಂಗನಿಗೆ ಮೂರು ಮಕ್ಕಳಿರವುದು ದೊಡ್ಡ ಅಡ್ಡಿಯಾಗಿತ್ತು.
ಸಂಚು ರೂಪಿಸಿದ ಸರಪಂಚ ಮತ್ತು ತಂದೆ: ಈ ಸಮಸ್ಯೆಗೆ ಪರಿಹಾರ ಹುಡುಕಲು ಪಾಂಡುರಂಗ ತನ್ನ ಸ್ನೇಹಿತ ಹಾಗೂ ಹಾಲಿ ಸರಪಂಚ ಗಣೇಶ್ ರಾಮಚಂದ್ರ ಶಿಂಧೆ ಬಳಿ ಸಲಹೆ ಕೇಳಿದ್ದ. ಮೊದಲು ಮಗುವನ್ನು ದತ್ತು ನೀಡಲು ಯೋಚಿಸಿದರಾದರೂ, ಜನ್ಮ ಪ್ರಮಾಣಪತ್ರದಲ್ಲಿ ತಂದೆಯ ಹೆಸರಿರುವುದರಿಂದ ಅದು ಕಾನೂನುಬದ್ಧವಾಗಿ ಚುನಾವಣೆಗೆ ಅಡ್ಡಿಯಾಗಬಹುದು ಎಂದು ಭಾವಿಸಿದರು. ಕೊನೆಗೆ ಇಬ್ಬರೂ ಸೇರಿ ಅತಿ ಕ್ರೂರವಾದ ನಿರ್ಧಾರಕ್ಕೆ ಬಂದರು. ಅದೇ ಮಗುವನ್ನು ಕೊಲೆ ಮಾಡುವುದು!
ಹತ್ಯೆ ನಡೆದಿದ್ದು ಹೇಗೆ? ಜನವರಿ 29 ರಂದು ಪಾಂಡುರಂಗ ತನ್ನ ಮಗಳಾದ ಪ್ರಾಚಿಯನ್ನು ಬೈಕ್‌ನಲ್ಲಿ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನಿಜಾಮ್ ಸಾಗರ್ ಕಾಲುವೆ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಯಾರು ಇಲ್ಲದ ಸಮಯ ನೋಡಿ ಮಗುವನ್ನು ಕಾಲುವೆಗೆ ನೂಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಶಬ್ದ ಕೇಳಿ ಬರುವಷ್ಟರಲ್ಲಿ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು.
ಪೊಲೀಸರ ತನಿಖೆ ಮತ್ತು ವಾಟ್ಸಾಪ್ ಸ್ಟೇಟಸ್: ತೆಲಂಗಾಣ ಪೊಲೀಸರಿಗೆ ಅಪರಿಚಿತ ಮಗುವಿನ ಶವ ಸಿಕ್ಕಾಗ, ಕಾನ್ಸ್ಟೇಬಲ್ ಒಬ್ಬರು ಮಗುವಿನ ಫೋಟೋವನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದರು. ಇದನ್ನು ನೋಡಿದ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಇದು ಪಾಂಡುರಂಗನ ಮಗಳು ಎಂದು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪಾಂಡುರಂಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ರಾಜಕೀಯ ಆಸೆಗಾಗಿ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಪಾಂಡುರಂಗ ಮತ್ತು ಆತನಿಗೆ ಸಹಕರಿಸಿದ ಸರಪಂಚ ಗಣೇಶ್ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಧಿಕಾರದ ದಾಹಕ್ಕೆ ಕಂದಮ್ಮನ ಬಲಿ ಪಡೆದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.