ಸಿದ್ದರಾಮಯ್ಯ ಕೇವಲ ರೆಡಿಮೇಡ್ ಸಿಎಂ, ಡಿಕೆಶಿಗೆ ಪಟ್ಟ ಕಟ್ಟದಿದ್ದರೆ ಕಾಂಗ್ರೆಸ್ ಕಥೆ ಮುಗಿಯುತ್ತೆ! ಕೈ ಪಾಳೆಯದಲ್ಲಿ ಬಾಂಬ್ ಸಿಡಿಸಿದ ಮುಸ್ಲಿಂ ಮುಖಂಡ

Spread the love

ರಾಜ್ಯ ಕಾಂಗ್ರೆಸ್ ಸರ್ಕಾರದ ಒಳಾಂಗಣದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಗುಸುಗುಸು ಜೋರಾಗಿರುವ ಬೆನ್ನಲ್ಲೇ, ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರೊಬ್ಬರು ಸ್ಫೋಟಕ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸಿನಿಂದ ಕಾಂಗ್ರೆಸ್ ಗೆದ್ದಿಲ್ಲ, ಬದಲಾಗಿ ಮುಸ್ಲಿಮರು ಡಿ.ಕೆ. ಶಿವಕುಮಾರ್ ಅವರನ್ನು ನಂಬಿ ಮತ ಹಾಕಿದ್ದಾರೆ ಎಂದು ಮುಸ್ಲಿಂ ಮುಖಂಡ ಸಾದಿಕ್ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ನಡುವಿನ ಶೀತಲ ಸಮರಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಸಿದ್ದರಾಮಯ್ಯ ಕೇವಲ ರೆಡಿಮೇಡ್ ಸಿಎಂ

ತಮ್ಮ ವಿಡಿಯೋ ಹೇಳಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಾದಿಕ್, ಸಿದ್ದರಾಮಯ್ಯ ಅವರನ್ನು ರೆಡಿಮೇಡ್ ಸಿಎಂ ಎಂದು ಜರೆದಿದ್ದಾರೆ. ಕಷ್ಟಪಟ್ಟು ಪಕ್ಷ ಕಟ್ಟಿದವರು ಡಿ.ಕೆ. ಶಿವಕುಮಾರ್. ಆದರೆ, ಅಧಿಕಾರ ಸಿಕ್ಕಾಗ ಮಾತ್ರ ಸಿದ್ದರಾಮಯ್ಯ ಬಂದು ಕುಳಿತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಸಿದ್ದರಾಮಯ್ಯನವರ ಮುಖ ನೋಡಿ ವೋಟ್ ಹಾಕಿಲ್ಲ. ಬದಲಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರು ನಮ್ಮ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಆ ಭರವಸೆಯನ್ನು ನಂಬಿ ನಾವು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.

ಡಿಕೆಶಿಗೆ ಸಿಎಂ ಪಟ್ಟ ಸಿಗದಿದ್ದರೆ ಪಾಠ ಕಲಿಸುತ್ತೇವೆ

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವಕ್ಕೆ ನೇರ ಎಚ್ಚರಿಕೆ ರವಾನಿಸಿರುವ ಸಾದಿಕ್, ಅಧಿಕಾರ ಹಂಚಿಕೆ ಸೂತ್ರದಂತೆ ಕೂಡಲೇ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು. ಒಂದು ವೇಳೆ ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ. ನಾವು ಯಾರನ್ನು ನಂಬಿ ಮತ ಹಾಕಿದ್ದೇವೋ ಅವರಿಗೆ ಅಧಿಕಾರ ಸಿಗಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಮಗೂ ಬೇಕು ಡಿಸಿಎಂ ಸ್ಥಾನ

ಕೇವಲ ಸಿಎಂ ಬದಲಾವಣೆ ಅಷ್ಟೇ ಅಲ್ಲದೆ, ಸಮುದಾಯದ ಪ್ರಾತಿನಿಧ್ಯದ ಬಗ್ಗೆಯೂ ಧ್ವನಿ ಎತ್ತಿರುವ ಅವರು, ಕಾಂಗ್ರೆಸ್ ಗೆಲುವಿನಲ್ಲಿ ಮುಸ್ಲಿಮರ ಪಾಲು ದೊಡ್ಡದಿದೆ. ಹೀಗಾಗಿ ಮುಸ್ಲಿಂ ಸಮುದಾಯದ ಶಾಸಕರೊಬ್ಬರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ರಚನೆಯಾಗಿ ಇಷ್ಟು ದಿನ ಕಳೆದರೂ ಮುಸ್ಲಿಮರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.

ಕೈ ನಾಯಕರಿಗೆ ನಡುಕ

ಮುಡಾ ಹಗರಣ ಸೇರಿದಂತೆ ಹಲವು ಆರೋಪಗಳಿಂದ ಈಗಾಗಲೇ ಮುಜುಗರಕ್ಕೀಡಾಗಿರುವ ಸಿದ್ದರಾಮಯ್ಯ ಅವರಿಗೆ, ಸ್ವಪಕ್ಷದ ವಲಯದಿಂದಲೇ ಕೇಳಿಬರುತ್ತಿರುವ ಈ ಸ್ವರಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಅದರಲ್ಲೂ ಅಹಿಂದ ನಾಯಕ ಎಂದು ಕರೆಿಸಿಕೊಳ್ಳುವ ಸಿದ್ದರಾಮಯ್ಯನವರನ್ನು ಮುಸ್ಲಿಂ ಮುಖಂಡರೇ ಸಿದ್ದರಾಮಯ್ಯ ಮುಖ ನೋಡಿ ವೋಟ್ ಹಾಕಿಲ್ಲ ಎಂದು ಹೇಳಿರುವುದು ಅವರ ವರ್ಚಸ್ಸಿಗೆ ಭಾರೀ ಪೆಟ್ಟು ನೀಡಿದೆ.

ಸಾದಿಕ್ ಅವರ ಈ ಹೇಳಿಕೆಯು ಡಿಕೆ ಶಿವಕುಮಾರ್ ಬಣಕ್ಕೆ ಹೊಸ ಅಸ್ತ್ರವನ್ನು ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ಕೂಗು ಮತ್ತಷ್ಟು ಜೋರಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

WhatsApp Group Join Now

Spread the love

Leave a Reply