ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ನಾಲಿಗೆ ಹರಿಬಿಟ್ಟಿದ್ದಾರೆ.
ಕೊಪ್ಪಳದಲ್ಲಿ ಇಂದು ಮಾಧ್ಯಮಗಳು, ಸಿದ್ದರಾಮಯ್ಯ ಸ್ಥಾನ ಭದ್ರ ಇದೆಯಾ..? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ನೆಗೆದುಬಿದ್ದು ಹೋಗುತ್ತಿದ್ದಾರೆ. ಇನ್ನು ಬೇರೆ ಪದ ಹೇಳಬೇಕಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆ ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಈ ಎರಡೂವರೆ ವರ್ಷಗಳಲ್ಲಿ ಸರ್ಕಾರ ಇದೆ ಎಂದು ಗೊತ್ತಾಗಿಲ್ಲ. ಈಗಲಾದರೂ ಜಗಳಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಆಗ್ರಹಿಸಿದ್ದರು.
ಸಿಎಂ- ಡಿಸಿಎಂ ನಾಟಿಕೋಳಿ ಊಟದ ಬಳಿಕವೂ ಕಿತ್ತಾಟ ನಿಲ್ಲುವುದಿಲ್ಲ. ಬ್ರೇಕ್ ಫಾಸ್ಟ್ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಬಿಟ್ಟು, ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಾ ಕುಳಿತಿದ್ದಾರೆ. ರಾಜ್ಯದ ಜನರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಟೀಕಿಸಿದ್ದರು.
ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮಾಗಾಂಧೀಜಿ ಹೇಳಿದ್ದರು. ಅದಕ್ಕೆ ಆಗ ಕಾಂಗ್ರೆಸ್ನವರು ಒಪ್ಪಿರಲಿಲ್ಲ. ಈಗ ದೇಶದ ಜನರು ಗಾಂಧೀಜಿ ಕನಸು ನನಸು ಮಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತಿದ್ದಾರೆ. ಈ ಸರ್ಕಾರ ಇರುತ್ತದೆಯೋ, ಇಲ್ಲವೋ, ಸಿದ್ದರಾಮಯ್ಯ ಇರುತ್ತಾರೋ, ಬೇರೆಯವರು ಬರುತ್ತಾರೋ ಎಂಬ ಬಗ್ಗೆ ಚರ್ಚೆ ಮಾಡಲ್ಲ. ರಾಜ್ಯದಲ್ಲಿಯೂ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಕಾರ ಕೊಡಲ್ಲ. ಡಿಕೆ ಶಿವಕುಮಾರ್ ಸಿಎಂ ಆದರೆ ಸಿದ್ದರಾಮಯ್ಯ ಸಹಕಾರ ಕೊಡಲ್ಲ. ಸರ್ಕಾರ ಬಿದ್ದು ಹೋಗುತ್ತದೆ. ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದರು.
ಬಿಜೆಪಿಯಲ್ಲಿ ಈಶ್ವರಪ್ಪ, ವಿಜಯೇಂದ್ರ ಮುಖ್ಯವಲ್ಲ. ನಮ್ಮ ಮೇಲೆ ಬಿಜೆಪಿ ನಿಂತಿಲ್ಲ. ನಿಷ್ಠಾವಂತ ಕಾರ್ಯಕರ್ತರ ಮೇಲೆ ಪಕ್ಷ ನಿಂತಿದೆ. ನಮ್ಮಲ್ಲಿ ಸರ್ವಾಧಿಕಾರ ಇಲ್ಲ. ಬಿಜೆಪಿ ಸರಿ ಹೋಗಬೇಕು ಎನ್ನುವುದೇ ನನ್ನ ಹಾಗೂ ಬಸನಗೌಡ ಪಾಟೀಲ ಯತ್ನಾಳರ ಆಶಯ. ರಾಜ್ಯದಲ್ಲಿ ಕಾಂಗ್ರೆಸ್ ಹೋಗಬೇಕು. ರಾಜ್ಯ ಉಳಿಯಬೇಕು ಎಂದು ಹೇಳಿದ್ದರು.
ಸಿದ್ದರಾಮಯ್ಯ ನೆಗೆದುಬಿದ್ದಿದ್ದಾರೆ – ಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಮಾಜಿ ಸಚಿವ ಈಶ್ವರಪ್ಪ..!
WhatsApp Group
Join Now