ರಾಜಣ್ಣ ಮತ್ತು ನಾನು ಹಳೆಯ ಸ್ನೇಹಿತರು. ಅವರನ್ನು ನಾನೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದೆ ಎಂದು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ಕೆ.ಎನ್ . ರಾಜಣ್ಣ (KN Rajanna )ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಂಗಳವಾರ ರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಾನು ಅಪೆಕ್ಸ್ ಅಧ್ಯಕ್ಷ ಆಗಿದ್ದು ಗೊತ್ತಿರುವ ವಿಚಾರ. ಡಿಸಿಎಂ ಡಿಕೆಶಿ ಆವತ್ತು ಸಹಕಾರ ಸಚಿವರಾಗಿದ್ದರು . ಸಹಾಯ ಮಾಡಿದ್ದಾರೆ, ಮರೆಯೋಕೆ ಹೋಗಲ್ಲ. ಯಾರದ್ದೇ ಸಹಾಯವಾಗಲಿ ನೆನೆಯುವ ಗುಣ ನನ್ನದು ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೈಕಮ್ಯಾಂಡ್ ಗೊಂದಲ ನಿವಾರಣೆ ಮಾಡುವ ಕೆಲಸ ಆಗಬೇಕು. ಗೊಂದಲದಿಂದ ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು.
ಡಿಕೆ ಶಿವಕುಮಾರ್ ಅವರು ಸಿಎಂ ಆಕಾಂಕ್ಷಿ, ಹೈಕಮಾಂಡ್ ಮಾತು ಕೊಟ್ಟಿದೆ ಎಂದು ಹೇಳುತ್ತಿದ್ದಾರೆ. ಯಾರು ಮಾತು ಕೊಟ್ಟಿದ್ದಾರೆ ಅವರು ಮಾತನಾಡಲಿ. ಒಪ್ಪಂದ ಆಗಿಲ್ಲ ಅಂತಾ ಸಿಎಂ ಹೇಳಿದ್ದಾರೆ ಅದನ್ನೂ ಒಪ್ಪಬೇಕು. ಆದರೆ ಒಪ್ಪಂದ ಆಗಿದೆ ಎಂದು ಡಿಕೆಶಿ ಹೇಳುತ್ತಿರುವುದರಿಂದ ಅವರ ಮಾತನ್ನೂ ತಳ್ಳಿಹಾಕುವಂತಿಲ್ಲ ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ. ಅಲ್ಲದೇ , ರಾಹುಲ್ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ಈ ಗೊಂದಲಕ್ಕೆ ತೆರೆಯೆಳೆಯುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಕೆ.ಎನ್. ರಾಜಣ್ಣ ಹೇಳಿದರು.
ವೋಟ್ ಚೋರಿ ಅಭಿಯಾನದಲ್ಲಿ ಕಾಂಗ್ರೆಸ್ ವಿರುದ್ದವೇ ಕಿಡಿ ಕಾರಿದ್ದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ವೋಟ್ ಚೋರಿ ಅಭಿಯಾನಕ್ಕೆ ಚಾಲನೆ ನೀಡಿದ ಮರುದಿನವೇ ಕೆ.ಎನ್. ರಾಜಣ್ಣ ಮತಗಳ್ಳತನದ ಬಗ್ಗೆ ವಿರುದ್ದ ಹೇಳಿಕೆ ನೀಡಿದ್ದರು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿತ್ತು. ಈಗ ನಾನು ಹಾಗೆ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೆ.ಎನ್. ರಾಜಣ್ಣ ಸ್ಪಷ್ಟೀಕರಣ ನೀಡಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ಡಿಕೆಶಿ ಮಾಡಿದ ಸಹಾಯ ಮರೆಯೋಕೆ ಹೋಗಲ್ಲ – ಡಿಸಿಎಂ ಮೇಲೆ ರಾಜಣ್ಣ ಸಾಫ್ಟ್ ಕಾರ್ನರ್!
WhatsApp Group
Join Now