Rachita Ram : ನಟ ಕಮಲ್ ಹಾಸನ್ ಕನ್ನಡದ ಭಾಷೆಯ ಕುರಿತಾಗಿ ತಮ್ಮ ಥಗ್‌ಲೈಫ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಾಲಿಗೆಹರಿಬಿಟ್ಟಿದ್ದು ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದ್ದಾರೆ.
ಕನ್ನಡಿಗರು ಕ್ಷಮೆಯಾಚಿಸಬೇಕು ಎಂದು ಹೇಳಿಕೆ ಎಚ್ಚರಿಕೆ ಕೊಟ್ಟರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಮಲ್ ಹಾಸನ್ ಕ್ಷಮೆಯಾಚಿಸಲ್ಲ ಎಂದು ನೇರವಾಗಿ
ಹೇಳಿದ್ದಾರೆ.
ಒಂದೆಡೆ ಕಮಲ್ ಹಾಸನ್ ಕನ್ನಡಿಗರ ವಿರೋಧಕ್ಕೆ ಗುರಿಯಾದರೆ, ಮತ್ತೊಂದೆಡೆ ಕಮಲ್ ಹಾಸನ್ ಅವರ ವಿವಾದವನ್ನು ಎಳೆಯಬೇಡಿ ಎಂದು ಹೇಳಿಕೆ ನೀಡುವ ಮೂಲಕ ನಟ ಶಿವರಾಜ್‌ಕುಮಾರ್ ಸಹ ಟೀಕೆಗೊಳಗಾಗಿದ್ದಾರೆ. ಅದರಲ್ಲೂ ಕಮಲ್ ಹಾಸನ್ ಹೇಳಿಕೆ ನೀಡುವಾಗ ಅದೇ ಕಾರ್ಯಕ್ರಮದ ಅತಿಥಿಯಾಗಿದ್ದ ಶಿವಣ್ಣ ಏನೂ ಮಾತನಾಡದೇ ಸುಮ್ಮನೆ ಇದ್ದದ್ದು ಕನ್ನಡಿಗರನ್ನು ಕೆರಳಿಸಿದೆ.
ಹೀಗೆ ಕಮಲ್ ಹಾಸನ್ ಎಬ್ಬಿಸಿರುವ ವಿವಾದದ ವಿರುದ್ಧ ಇಡೀ ಕನ್ನಡ ಚಲನಚಿತ್ರರಂಗವೇ ವಿರೋಧ ವ್ಯಕ್ತಪಡಿಸಿದ್ದು, ಇದೀಗ ನಟಿ ರಚಿತಾ ರಾಮ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು ವಿವಾದದ ವಿರುದ್ಧ ದನಿ ಎತ್ತಿದ್ದಾರೆ.
ಒಂದು ಹಾಡನ್ನು ಹೇಳಬೇಕು ಎನಿಸಿತು ಅದಕ್ಕೆ ಈ ವಿಡಿಯೊ ಮಾಡುತ್ತಿದ್ದೇನೆ ಎಂದು ಮಾತು ಆರಂಭಿಸುತ್ತಾ ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀನು ಕನ್ನಡದವನಾಗಿರು ಎಂದ ರಚಿತಾ ರಾಮ್ ನಾನು ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆಲ್ಲ ಅರ್ಥ ಆಗಿದೆ ಎನಿಸುತ್ತದೆ ಎಂದರು.
ಬಳಿಕಿ ಕನ್ನಡ, ಕರ್ನಾಟಕ ಅಂತ ಬಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಅದು ಭಾವನೆ. ಅದೇ ರೀತಿ ನಮ್ಮ ಭಾಷೆಯ ಬಗ್ಗೆ ಯಾರಾದರೂ ಒಬ್ಬರು ಟೀಕೆ ಮಾಡ್ತಾ ಇದ್ದಾರೆ ಎಂದರೆ ಸುಮ್ಮನೆ ಅಂತೂ ಕೂರೋಕಾಗಲ್ಲ ಅಲ್ವಾ ಎಂದಿದ್ದಾರೆ. ಅಲ್ಲದೇ ನಾವು ವಿಶಾಲಹೃದಯದವರು ಎಲ್ಲ ಭಾಷೆಯ ಚಿತ್ರಗಳನ್ನು ನೋಡುತ್ತೇವೆ, ಹಾಡುಗಳನ್ನು ಕೇಳುತ್ತೇವೆ, ನಟರನ್ನು ಬೆಂಬಲಿಸುತ್ತೇವೆ, ಆದರೆ ನಮ್ಮ ಭಾಷೆ ಬಗ್ಗೆ ಮಾತನಾಡಿದ್ರೆ ಯಾಕೆ ದನಿ ಎತ್ತಬಾರದು? ನಾವಿಲ್ಲಿ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿಲ್ಲ, ಹಾಗಿದ್ದ ಮೇಲೆ ನಮ್ಮ ಭಾಷೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದರೆ ನಾವು ಕನ್ನಡಿಗರಾಗಿ ನಿಲ್ಲಬೇಕು ಎಂದರು.
ನಂತರ ದೊಡ್ಡವರೆಲ್ಲ ಜಾಣರಲ್ಲ ಹಾಡನ್ನು ಉಲ್ಲೇಖಿಸಿದ ರಚಿತಾ ರಾಮ್ ಚಿಕ್ಕವರು ತಪ್ಪು ಮಾಡಿದಾಗ ಕ್ಷಮೆ ಕೇಳುವ ತನಕ ಬಿಡಲ್ಲ ದೊಡ್ಡವರು, ಆದರೆ ದೊಡ್ಡವರು ತಪ್ಪು ಮಾಡಿದ್ರೆ ಕ್ಷಮೆ ಕೇಳುವುದರಲ್ಲಿ ಏನು ತಪ್ಪಿದೆ? ಕನ್ನಡ ತಪ್ಪಾಗಿ ಮಾತನಾಡಿದರೆ ಕಲಿಸುವ ನಾವು ಕನ್ನಡದ ಬಗ್ಗೆ ತಪ್ಪಾಗಿ ಮಾತನಡುವವರ ವಿರುದ್ಧ ದನಿ ಎತ್ತಬೇಕು ಎಂದಿದ್ದಾರೆ.
ಹೀಗೆ ರಚಿತಾ ರಾಮ್ ʼಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡದವನಾಗಿರುʼ ಎಂದು ಹೇಳಿದ ಸಾಲು ಪರೋಕ್ಷವಾಗಿ ಕಮಲ್ ಹಾಸನ್ ಮುಂದೆ ತೆಪ್ಪಗೆ ಕುಳಿತಿದ್ದ ಶಿವರಾಜ್‌ಕುಮಾರ್ ಅವರಿಗೆ ಹೇಳಿದ ಹಾಗಿದೆ ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Rachita Ram : ಎಲ್ಲಾದರೂ ಇರು ಎಂತಾದರೂ ಇರು ಕನ್ನಡದವನಾಗಿರು ; ಕಮಲ್ ಎದುರು ತೆಪ್ಪಗಿದ್ದ ಶಿವಣ್ಣನಿಗೆ ಟಾಂಗ್ ಕೊಟ್ಟ ರಚಿತಾ ರಾಮ್!?
WhatsApp Group
Join Now