ಖಾಸಗಿ ಬಸ್ – ಟಿಪ್ಪರ್ ಮುಖಾಮುಖಿ ಡಿಕ್ಕಿ : 10 ಪ್ರಯಾಣಿಕರು ಸಜೀವ ದಹನ, ಹಲವರ ಸ್ಥಿತಿ ಗಂಭೀರ

Spread the love

ಮಾರ್ಕಪುರಂ (ಆಂಧ್ರಪ್ರದೇಶ) : ರಾಜ್ಯದಲ್ಲಿ ಖಾಸಗಿ ಬಸ್‌ಗಳು ಅಗ್ನಿ ಅವಘಡಕ್ಕೆ ತುತ್ತಾಗುತ್ತಿರುವ ಸರಣಿ ಘಟನೆಗಳು ಮುಂದುವರಿದಿದ್ದು, ಇಂದು ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹತ್ತು ಮಂದಿ ಪ್ರಯಾಣಿಕರು ಬೆಂಕಿಗಾಹುತಿಯಾಗಿದ್ದಾರೆ.

ಘಟನೆಯ ವಿವರ :

ಹೈದರಾಬಾದ್‌ನಿಂದ ಪಾಮುರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್, ಮಾರ್ಕಪುರಂ ಜಿಲ್ಲೆಯ ರಾಯವರಂ ಸಮೀಪದ ಪಲಕಲಾ ಕ್ವಾರಿಗಳ ಬಳಿ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳಲ್ಲಿ ಕ್ಷಣಾರ್ಧದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಬಸ್ ಮತ್ತು ಲಾರಿ ಧಗಧಗನೆ ಹೊತ್ತಿ ಉರಿದಿವೆ.

ಬಸ್‌ನ ಹಿಂಭಾಗದಲ್ಲಿ ಕುಳಿತಿದ್ದ 10 ಪ್ರಯಾಣಿಕರು ಹೊರಬರಲಾಗದೆ ಸಜೀವ ದಹನವಾಗಿದ್ದಾರೆ.
18 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಮಾರ್ಕಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಬಸ್‌ನ ಮುಂಭಾಗದಲ್ಲಿದ್ದ ಸುಮಾರು 10 ಪ್ರಯಾಣಿಕರು ಸಮಯಪ್ರಜ್ಞೆಯಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮಾರ್ಕಪುರಂ ಶಾಸಕ ಕಂದುಲ ನಾರಾಯಣ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.”

ಸಿಎಂ ಚಂದ್ರಬಾಬು ನಾಯ್ಡು ತೀವ್ರ ಸಂತಾಪ :

ಈ ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಕೂಡಲೇ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಸತತವಾಗಿ ನಡೆಯುತ್ತಿರುವ ಇಂತಹ ಬೆಂಕಿ ಅವಘಡಗಳು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದು, ಖಾಸಗಿ ಬಸ್‌ಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತುವಂತೆ ಮಾಡಿದೆ.

WhatsApp Group Join Now

Spread the love

Leave a Reply