ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲ ಮಸಣ ಸೇರಿದ್ದಾರೆ ; ನರೇಂದ್ರ ಮೋದಿ

Spread the love

ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲರೂ ಇತಿಹಾಸದ ಮಸಣದಲ್ಲಿ ಸೇರಿದ್ದಾರೆ. ಆದರೆ ಸೋಮನಾಥ ದೇವಾಲಯವು ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಾ ಇಂದಿಗೂ ಅಚಲವಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

1026ರಲ್ಲಿ ಘಜ್ನಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ ಅಪಾರ ಸಂಪತ್ತನ್ನು ದೋಚಿದ್ದ ಘಟನೆಗೆ ಇದೀಗ ಸಾವಿರ ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಾಳಿಕೋರರು ಬಂದರು, ಹಾಳುಮಾಡಿದರು, ಹೋಗಿ ನಾಶವಾದರು. ಆದರೆ ಸೋಮನಾಥ ಮಾತ್ರ ಶತಮಾನಗಳ ಪರೀಕ್ಷೆಯನ್ನು ತಾಳಿಕೊಂಡು ಉಳಿದಿದ್ದಾನೆ ಎಂದರು.

ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು. ದೇವಾಲಯದ ಇತಿಹಾಸವನ್ನು ಮರೆಮಾಡುವ ಪ್ರಯತ್ನ ನಡೆಯಿತು. ಧಾರ್ಮಿಕ ಮತಾಂಧತೆಯನ್ನು ಕೇವಲ ದರೋಡೆ ಎಂದು ಚಿತ್ರಿಸಲಾಯಿತು ಎಂದು ಮೋದಿ ಆರೋಪಿಸಿದರು. ನಾವು ಜೀವಿಗಳಲ್ಲಿಯೂ ಶಿವನನ್ನು ನೋಡುವ ಸಂಸ್ಕೃತಿಯವರು. ನಮ್ಮ ಪೂರ್ವಜರು ತಮ್ಮ ಭಗವಾನ್ ಶಿವನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂದು ಹೇಳಿದರು.

ಸೋಮನಾಥ ದೇವಾಲಯದ ಶೌರ್ಯದ ಗಾಥೆಗೆ ಸಾವಿರ ವರ್ಷಗಳು ತುಂಬಿರುವಾಗಲೇ, ಅದರ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ಗುಜರಾತ್ ಭೇಟಿಯ ಎರಡನೇ ದಿನ ಪ್ರಧಾನಿ ಮೋದಿ ಸೋಮನಾಥದಲ್ಲಿ ಆಯೋಜಿಸಿದ್ದ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಿದರು. ದೇವಾಲಯದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಮೆರವಣಿಗೆ ನಡೆಯಿತು. ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವಾಗಿ 108 ಕುದುರೆಗಳ ಸಾಂಕೇತಿಕ ಮೆರವಣಿಗೆಯೂ ನಡೆದಿತು.

ನಂತರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಧಾನಿ, ಸಾವಿರ ವರ್ಷಗಳ ಹಿಂದೆ ಭಾರತವನ್ನು ಗೆದ್ದೆವು ಎಂದು ಭಾವಿಸಿದವರು ತಪ್ಪಾಗಿ ಅಂದುಕೊಂಡಿದ್ದರು. ಇಂದಿಗೂ ಸೋಮನಾಥದಲ್ಲಿ ಹಾರುತ್ತಿರುವ ಧ್ವಜವೇ ಭಾರತದ ಶಕ್ತಿಯನ್ನು ಹೇಳುತ್ತಿದೆ ಎಂದರು. ದುರದೃಷ್ಟವಶಾತ್, ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ್ದ ಶಕ್ತಿಗಳು ಇಂದಿಗೂ ದೇಶದಲ್ಲಿವೆ ಎಂದು ಮೋದಿ ಎಚ್ಚರಿಸಿದರು. 1951ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸೋಮನಾಥ ಪುನರ್ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಿದಾಗ ಅವರನ್ನು ತಡೆಯಲು ಪ್ರಯತ್ನಿಸಲಾಯಿತು. ಇಂದೂ ನಾವು ಒಗ್ಗಟ್ಟಿನಿಂದ ಇರಬೇಕು, ದೇಶವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು.

WhatsApp Group Join Now

Spread the love

Leave a Reply