ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ್ದ, ಕ್ರಾಂತಿಕಾರಿಗಳ ರಕ್ತದಲ್ಲಿ ಬೆರೆತು ಹೋಗಿದ್ದ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಐತಿಹಾಸಿಕ ಹಾಗೂ ಆಕ್ರೋಶಭರಿತ ಭಾಷಣ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗ್ ಮತ್ತು ಮಹಮ್ಮದ್ ಅಲಿ ಜಿನ್ನಾ ಅವರ ಒತ್ತಡಕ್ಕೆ ಮಣಿದು, ರಾಷ್ಟ್ರಭಕ್ತಿಯ ಪ್ರತೀಕವಾಗಿದ್ದ ವಂದೇ ಮಾತರಂ ಗೀತೆಯನ್ನು ಹೇಗೆ ಹರಿದು ಹಾಕಿತು ಎನ್ನುವ ಇತಿಹಾಸದ ಕರಾಳ ಸತ್ಯವನ್ನು ಪ್ರಧಾನಿ ಮೋದಿ ಎಳೆಎಳೆಯಾಗಿ ಬಿಚ್ಚಿಟ್ಟರು.
ತಮ್ಮ ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ, ಬ್ರಿಟಿಷರ ಗುಂಡೇಟಿಗೆ ಎದೆಯೊಡ್ಡುವಾಗ ಸ್ವಾತಂತ್ರ್ಯ ಹೋರಾಟಗಾರರು ವಂದೇ ಮಾತರಂ ಎಂಬ ಮಂತ್ರವನ್ನೇ ಜಪಿಸುತ್ತಿದ್ದರು. ಮಹಾತ್ಮ ಗಾಂಧೀಜಿಯವರು ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ನೋಡಿದ್ದರು. ಇದು ತಾಯ್ನಾಡಿನ ಆರಾಧನೆಯಾಗಿತ್ತು. ಆದರೆ ಅಂತಹ ಪವಿತ್ರ ಗೀತೆಗೆ ದಶಕಗಳ ಹಿಂದೆಯೇ ದ್ರೋಹ ಬಗೆಯಲಾಯಿತು. ಬಾಪು ಅವರ ಭಾವನೆಗಳನ್ನೂ ಮೀರಿಸುವಂತಹ ಶಕ್ತಿ ಯಾವುದಿತ್ತು? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಡವಳಿಕೆಯನ್ನು ಟೀಕಿಸಿದರು.
ನೆಹರು ಸಿಂಹಾಸನ ಅಲುಗಾಡಿಸಿದ ಜಿನ್ನಾ ಆರ್ಭಟ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದ ಪ್ರಧಾನಿ ಮೋದಿ, 1937ರ ಕಾಲಘಟ್ಟವನ್ನು ನೆನಪಿಸಿದರು. 1937ರ ಅಕ್ಟೋಬರ್ 15ರಂದು ಲಕ್ನೋದಲ್ಲಿ ಮಹಮ್ಮದ್ ಅಲಿ ಜಿನ್ನಾ ವಂದೇ ಮಾತರಂ ವಿರುದ್ಧ ಘೋಷಣೆ ಕೂಗಿದ್ದರು. ಜಿನ್ನಾ ಅವರ ಈ ಆರ್ಭಟಕ್ಕೆ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಬೆದರಿದ್ದರು. ತಮ್ಮ ಸಿಂಹಾಸನ ಅಲುಗಾಡುತ್ತಿದೆ ಎಂದು ಭಾವಿಸಿದ ನೆಹರು, ಮುಸ್ಲಿಂ ಲೀಗ್ನ ಆಧಾರರಹಿತ ಹೇಳಿಕೆಗಳನ್ನು ಖಂಡಿಸುವ ಬದಲು ಅವರಿಗೆ ಶರಣಾದರು. ವಂದೇ ಮಾತರಂ ಗೀತೆಯ ವಿರುದ್ಧವೇ ತನಿಖೆ ನಡೆಸಲು ಮುಂದಾದರು ಎಂದು ಮೋದಿ ಗಂಭೀರ ಆರೋಪ ಮಾಡಿದರು.
ನೆಹರು ಅವರು ವಂದೇ ಮಾತರಂ ಬಗ್ಗೆ ತನಿಖೆ ನಡೆಸಿದ್ದಲ್ಲದೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರವನ್ನೂ ಬರೆದಿದ್ದರು. ಆನಂದಮಠ ಕಾದಂಬರಿಯ ಹಿನ್ನೆಲೆಯು ಮುಸ್ಲಿಮರಿಗೆ ನೋವುಂಟು ಮಾಡಬಹುದು, ಇದು ಅವರನ್ನು ಕೆರಳಿಸುತ್ತದೆ ಎಂದು ಜಿನ್ನಾ ಅವರ ವಾದವನ್ನೇ ನೆಹರು ಸಮರ್ಥಿಸಿಕೊಂಡಿದ್ದರು. ಅಕ್ಟೋಬರ್ 26 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಂದೇ ಮಾತರಂ ಬಳಕೆಯನ್ನು ಪರಿಶೀಲಿಸಲಾಯಿತು. ಆ ಮೂಲಕ ದೇಶಾದ್ಯಂತದ ಜನರ ವಿರೋಧದ ನಡುವೆಯೂ ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ತುಂಡು ತುಂಡು ಮಾಡಿತು ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಈಗ ಮುಸ್ಲಿಂ ಲೀಗ್ ಕಂಪನಿ
ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಯನ್ನು ವಿಶ್ಲೇಷಿಸಿದ ಪ್ರಧಾನಿ, ಅಂದು ಮುಸ್ಲಿಂ ಲೀಗ್ಗೆ ಶರಣಾಗಿದ್ದ ಕಾಂಗ್ರೆಸ್, ಇಂದು ಸ್ವತಃ ಮುಸ್ಲಿಂ ಲೀಗ್ನ ಹೊರಗುತ್ತಿಗೆ ಕಂಪನಿಯಾಗಿ ಬದಲಾಗಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಈಗ ಮುಸ್ಲಿಂ ಲೀಗ್ ಸ್ವರೂಪ ಪಡೆದಿದೆ. ತುಷ್ಟೀಕರಣದ ರಾಜಕಾರಣಕ್ಕಾಗಿ ರಾಷ್ಟ್ರೀಯತೆಯ ಪ್ರತೀಕವಾಗಿದ್ದ ಗೀತೆಯನ್ನೇ ಬಲಿಪಶು ಮಾಡಲಾಯಿತು ಎಂದು ಮೋದಿ ವಾಗ್ದಾಳಿ ನಡೆಸಿದರು.
1906 ರಲ್ಲಿ ಬಂಗಾಳ ವಿಭಜನೆಯಾದಾಗ, ಬಾರಿಸಾಲ್ನಲ್ಲಿ ನಡೆದ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಎನ್ನದೆ 10,000ಕ್ಕೂ ಹೆಚ್ಚು ಜನರು ವಂದೇ ಮಾತರಂ ಧ್ವಜ ಹಿಡಿದು ಸಾಗಿದ್ದರು. ಬಂಗಾಳದ ಏಕತೆಗೆ ಈ ಗೀತೆ ಜನಾಂದೋಲನದ ಕೂಗಾಗಿತ್ತು. ಲೆಕ್ಕವಿಲ್ಲದಷ್ಟು ವೀರರು ಇದೇ ಹಾಡನ್ನು ಹಾಡುತ್ತಾ ನೇಣುಗಂಬ ಏರಿದರು. ಆದರೆ ಅಧಿಕಾರದ ಲಾಲಸೆಗಾಗಿ ಅಂತಹ ತ್ಯಾಗವನ್ನೂ ಕಡೆಗಣಿಸಲಾಯಿತು ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.
ತಮ್ಮ ಆವೇಶಭರಿತ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ವಂದೇ ಮಾತರಂ ಎಂಬ ಪದವನ್ನು ಬರೋಬ್ಬರಿ 131 ಬಾರಿ ಉಲ್ಲೇಖಿಸಿದರು. ಕಾಂಗ್ರೆಸ್ ಹೆಸರನ್ನು 13 ಬಾರಿ, ನೆಹರು ಅವರನ್ನು 7 ಬಾರಿ, ಮುಸ್ಲಿಂ ಲೀಗ್ ಅನ್ನು 5 ಬಾರಿ ಹಾಗೂ ಜಿನ್ನಾ ಹೆಸರನ್ನು 3 ಬಾರಿ ಪ್ರಸ್ತಾಪಿಸುವ ಮೂಲಕ, ವಂದೇ ಮಾತರಂ ಗೀತೆಗೆ ಆದ ಅನ್ಯಾಯಕ್ಕೆ ಯಾರು ಕಾರಣ ಎಂಬುದನ್ನು ಸ್ಪಷ್ಟಪಡಿಸಿದರು.
ವಂದೇ ಮಾತರಂ 50ನೇ ವರ್ಷ ಆಚರಿಸುವಾಗ ದೇಶ ಗುಲಾಮಗಿರಿ ಮತ್ತು ಬಡತನದಲ್ಲಿತ್ತು. 100ನೇ ವರ್ಷದಲ್ಲಿ ತುರ್ತು ಪರಿಸ್ಥಿತಿಯ ಕತ್ತಲೆಯಲ್ಲಿತ್ತು. ಆದರೆ ಇಂದು 150ನೇ ವಾರ್ಷಿಕೋತ್ಸವ ಆಚರಿಸುತ್ತಿರುವಾಗ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ತಲೆ ಎತ್ತಿ ನಿಂತಿದೆ ಎಂದು ಪ್ರಧಾನಿ ಮೋದಿ ಹೆಮ್ಮೆಯಿಂದ ನುಡಿದರು.
ಜಿನ್ನಾ ಎದುರು ಮಂಡಿಯೂರಿದ್ದ ನೆಹರು, ವಂದೇ ಮಾತರಂ ತುಂಡರಿಸಿದ ಕಾಂಗ್ರೆಸ್ : ಇತಿಹಾಸದ ಕರಾಳ ಪುಟ ತೆರೆದಿಟ್ಟ ಪ್ರಧಾನಿ ಮೋದಿ
WhatsApp Group
Join Now