ಮೋದಿ – ಅಮಿತ್ ಶಾ ಸೋಲಿಸುವುದೇ ನಮ್ಮ ಗುರಿ : ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ

Spread the love

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಭಾನುವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಜ್ಞೆ ಮಾಡಿದ್ದಾರೆ.

ಮತಗಳವು ವಿರುದ್ಧ ರಾಮ್‌ ಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರಾಹುಲ್‌, ಸತ್ಯದ ಮುಂದೆ ಸುಳ್ಳು ಒಂದು ದಿನ ಸೋಲಲೇ ಬೇಕು.

ಅದಕ್ಕೆ ಸ್ವಲ್ಪ ಸಮಯ ಬೇಕು. ನಾವು ಹಾಗೂ ನಮ್ಮ ಪಕ್ಷ ಸದಾ ಸತ್ಯದ ಜತೆ ನಿಂತಿದ್ದೇವೆ. ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ಸರ್ಕಾರವನ್ನು ಅಧಿಕಾರದಿಂದ ಖಂಡಿತ ಕೆಳಗಿಳಿಸುತ್ತೇವೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

ಮತಗಳವು ಬಿಜೆಪಿ ಡಿಎನ್‌ಎಯಲ್ಲೇ ಇದೆ. 6 ವರ್ಷದ ಮಗುವಿನಿಂದ ಹಿಡಿದು 90 ವರ್ಷದ ಹಿರಿಯ ನಾಗರಿಕರವರೆಗೂ ಮೋದಿ ಮತ್ತು ಶಾ ಮತಗಳನ್ನು ಕದಿಯುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಬಹಿರಂಗವಾಗಿಯೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್ ಜೋಷಿ ಅವರ ಹೆಸರನ್ನೆತ್ತಿ, ಇವರೆಲ್ಲರೂ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಹಾರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಮಹಿಳೆಯರಿಗೆ 10,000 ರೂ. ಹಣವನ್ನು ಅವರ ಖಾತೆಗೆ ಜಮಾ ಮಾಡಿದರು. ಆದರೂ ಚುನಾವಣಾ ಆಯೋಗ ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಕಾನೂನನ್ನು ನರೇಂದ್ರ ಮೋದಿ ಸರ್ಕಾರ ಜಾರಿ ಮಾಡಿತು. ನಾವು ಅಧಿಕಾರಕ್ಕೇರಿದೊಡನೆ ಈ ಕಾನೂನನ್ನು ಬದಲಿಸಿ, ಚು.ಆಯೋಗದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಮತಗಳ್ಳತನ ಮಾಡಿದ ಬಿಜೆಪಿ ನಾಯಕರು ದೇಶದ್ರೋಹಿಗಳು: ಖರ್ಗೆ

ಮತಗಳ್ಳತನ ಮಾಡಿದ ಬಿಜೆಪಿ ನಾಯಕರು ದೇಶದ್ರೋಹಿಗಳು. ಮತದಾನದ ಹಕ್ಕನ್ನು ಹಾಗೂ ಸಂವಿಧಾನವನ್ನು ಉಳಿಸಲು ನಾವು ಅವರನ್ನು (ಬಿಜೆಪಿ) ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆಕೊಟ್ಟಿದ್ದಾರೆ.

ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆರ್‌ಎಸ್‌ಎಸ್‌ ಸಿದ್ಧಾಂತವು ಭವ್ಯ ಭಾರತ ದೇಶವನ್ನು ನಾಶ ಮಾಡುತ್ತದೆ. ಭಾರತೀಯರೆಲ್ಲರೂ ಒಂದಾಗಿ ಕಾಂಗ್ರೆಸ್‌ ಸಿದ್ಧಾಂತವನ್ನು ಬಲಪಡಿಸಬೇಕು. ಏಕೆಂದರೆ ಕಾಂಗ್ರೆಸ್‌ ಸಿದ್ಧಾಂತದಿಂದ ಮಾತ್ರವೇ ದೇಶವನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದರು.

ಬೆಂಗಳೂರಿನ ಆಸ್ಪತ್ರೆಯಲ್ಲಿ ನನ್ನ ಮಗನಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಅಲ್ಲಿಗೆ ಹೋಗದೇ ರ್‍ಯಾಲಿಯಲ್ಲಿ ಭಾಗವಹಿಸಿದ್ದೇನೆ. ಏಕೆಂದರೆ, ದೇಶದ 140 ಕೋಟಿ ಜನರನ್ನು ರಕ್ಷಿಸುವುದು ಹೆಚ್ಚು ಮುಖ್ಯ ಎನ್ನುವುದು ನನ್ನ ಭಾವನೆ ಎಂದೂ ಖರ್ಗೆ ನುಡಿದರು.

ಮತ ಕಳವು ‘ಪಿತೂರಿ’ ಬಗ್ಗೆ ಚು.ಆಯೋಗ ಉತ್ತರ ನೀಡಬೇಕು : ಪ್ರಿಯಾಂಕಾ

ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಬಗ್ಗೆ ಮಾಡಿದ ಪಿತೂರಿ ಬಗ್ಗೆ ಚುನಾವಣಾ ಆಯೋಗ ಆಯುಕ್ತರಾದ ಜ್ಞಾನೇಶ್‌ ಕುಮಾರ್‌ ಮತ್ತು ಅವರ ಆಪ್ತರು ಉತ್ತರಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದರು. ವೋಟ್‌ ಚೋರಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ, ಬಿಹಾರ ಚುನಾವಣೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದಾಗಲೂ ಪ್ರತಿಯೊಬ್ಬ ಮಹಿಳೆಗೆ ಬಿಜೆಪಿ 10,000 ರೂ.ಗಳನ್ನು ಪಾವತಿಸಿತ್ತು. ಈ ವೇಳೆ ಚುನಾವಣಾ ಆಯೋಗ ಜಾಣಕುರುಡರಂತೆ ವರ್ತಿಸಿತ್ತು. ಇದು ಮತಗಳವು ಅಲ್ಲದೇ ಇನ್ನೇನು?. ಇದರಿಂದಲೇ ಬಿಜೆಪಿ ಬಿಹಾರದಲ್ಲಿ ಗೆದ್ದಿದೆ ಎಂದು ಟೀಕಾ ಪ್ರಹಾರ ಮಾಡಿದರು. ಚುನಾವಣಾ ಆಯೋಗ ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸಲಿ, ಅದರಲ್ಲಿ ಬಿಜೆಪಿ ಸೋಲುತ್ತದೆ ಎಂದು ಹೇಳಿದರು.

WhatsApp Group Join Now

Spread the love

Leave a Reply