ದಿನಕ್ಕೆ ಎರಡು ಸಿಗರೇಟ್ ಮಾತ್ರ! ಈ ಸುಳ್ಳು ಎಷ್ಟು ಅಪಾಯಕಾರಿ ಗೊತ್ತಾ?

Spread the love

ದಿನಕ್ಕೆ ಒಂದು ಅಥವಾ ಎರಡು ಸಿಗರೇಟ್ ಮಾತ್ರ ಸೇದುತ್ತೇನೆ, ಅದರಿಂದ ಏನೂ ಆಗಲ್ಲ ಈ ವಾಕ್ಯವನ್ನು ನಾವು ಕಾರ್ಪೊರೇಟ್ ಕಚೇರಿಗಳಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ, ಸ್ನೇಹಿತರ ವಲಯದಲ್ಲಿ ಆಗಾಗ್ಗೆ ಕೇಳುತ್ತೇವೆ.

ಅನೇಕರು ಇದನ್ನು ನಿಯಂತ್ರಿತ ಧೂಮಪಾನ ಅಥವಾ ಸಾಂದರ್ಭಿಕ ಅಭ್ಯಾಸ ಎಂದು ಸಮಾಧಾನ ಪಡಿಸಿಕೊಳ್ಳುತ್ತಾರೆ. ಆದರೆ ವೈದ್ಯಕೀಯ ತಜ್ಞರು ಎಚ್ಚರಿಸುವುದೇನೆಂದರೆ, ದಿನಕ್ಕೆ ಎರಡು ಸಿಗರೇಟ್ ಸೇದುವುದೂ ಸಹ ದೇಹಕ್ಕೆ ಅಪಾಯಕಾರಿಯೇ. ಶ್ವಾಸಕೋಶ ಮತ್ತು ಹೃದಯ ತಜ್ಞರ ಪ್ರಕಾರ, ಧೂಮಪಾನದ ಹಾನಿ ವರ್ಷಗಳ ನಂತರ ಮಾತ್ರ ಕಾಣಿಸುತ್ತದೆ ಎಂಬುದು ತಪ್ಪು ಕಲ್ಪನೆ. ವಾಸ್ತವದಲ್ಲಿ, ಕೇವಲ ಒಂದು ತಿಂಗಳ ಕಾಲ ದಿನಕ್ಕೆ ಎರಡು ಸಿಗರೇಟ್ ಸೇದಿದರೂ ದೇಹದೊಳಗೆ ಬದಲಾವಣೆಗಳು ಆರಂಭವಾಗುತ್ತವೆ.

ನಿಕೋಟಿನ್ ವ್ಯಸನ ಹೇಗೆ ಶುರುವಾಗುತ್ತದೆ..?

ಸಿಗರೇಟಿನಲ್ಲಿರುವ ನಿಕೋಟಿನ್ ಮೆದುಳಿನ “ಪ್ರತಿಫಲ ವ್ಯವಸ್ಥೆಯ ಮೇಲೆ ನೇರವಾಗಿ ಕೆಲಸ ಮಾಡುತ್ತದೆ. ಇದು ತಾತ್ಕಾಲಿಕವಾಗಿ ಒಳ್ಳೆಯ ಭಾವನೆ ನೀಡುತ್ತದೆ. ಆರಂಭದಲ್ಲಿ ಹಂಬಲ ಸಣ್ಣದಾಗಿ ಕಾಣಿಸಿದರೂ, ಮೆದುಳು ಬೇಗನೆ ಅದಕ್ಕೆ ಒಲಿಯುತ್ತದೆ. ಇನ್ನೊಂದು ಸಿಗರೇಟ್ ಸಾಕು ಅನ್ನೋ ಹಂತದಿಂದ ಇಲ್ಲದೇ ಇರಲಾರೆ ಅನ್ನೋ ಹಂತಕ್ಕೆ ಹೋಗುವುದೇ ಅಪಾಯ. ದಿನಕ್ಕೆ ಎರಡು ಸಿಗರೇಟ್ ಎಂಬುದು ವ್ಯಸನದ ಮೊದಲ ಮೆಟ್ಟಿಲಾಗಬಹುದು.

ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ!

ನಿಕೋಟಿನ್ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ತಕ್ಷಣ ಹೆಚ್ಚಿಸುತ್ತದೆ. ರಕ್ತನಾಳಗಳು ಸಂಕುಚಿತವಾಗುತ್ತವೆ, ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಧೂಮಪಾನದಿಂದ ರಕ್ತ ದಪ್ಪವಾಗುತ್ತದೆ, ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಾಗುತ್ತದೆ. ಇದರಿಂದ ಹೃದಯಾಘಾತ ಮತ್ತು ಸ್ಟ್ರೋಕ್‌ಗೆ ನೆಲೆಯೂ ಸಿದ್ಧವಾಗುತ್ತದೆ – ಅದು ಕಡಿಮೆ ಪ್ರಮಾಣದಲ್ಲಿದ್ದರೂ ಸಹ.

ಶ್ವಾಸಕೋಶದ ಮೇಲೆ ಬೀಳುವ ಮೌನ ಹೊಡೆತ!

ದಿನಕ್ಕೆ ಎರಡು ಸಿಗರೇಟ್ ಸೇದಿದರೂ ಶ್ವಾಸಕೋಶ ಸುರಕ್ಷಿತವಲ್ಲ. ಹೊಗೆ ವಾಯುಮಾರ್ಗಗಳಲ್ಲಿ ಉರಿಯೂತ ಉಂಟುಮಾಡುತ್ತದೆ. ಒಂದು ತಿಂಗಳೊಳಗೆ ಗಂಟಲು ಕೆರಕು, ಸಣ್ಣ ಕೆಮ್ಮು, ಎದೆ ಬಿಗಿತ, ನಡೆದುಕೊಂಡಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಬಹುತೇಕರು ಇದನ್ನು ಆಯಾಸ ಅಥವಾ ಹವಾಮಾನ ಕಾರಣವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಶ್ವಾಸಕೋಶ ಸಾಮರ್ಥ್ಯ ಕುಗ್ಗುವ ಆರಂಭವಾಗಿರಬಹುದು.

ರೋಗನಿರೋಧಕ ಶಕ್ತಿ ದುರ್ಬಲ!

ಸಿಗರೇಟಿನಲ್ಲಿರುವ ವಿಷಕಾರಿ ರಾಸಾಯನಿಕಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಚರ್ಮ ಮಂದವಾಗಿ ಕಾಣುತ್ತದೆ, ಗಾಯಗಳು ತಡವಾಗಿ ಗುಣಮುಖವಾಗುತ್ತವೆ. ಒಸಡುಗಳ ಉರಿಯೂತ, ದುರ್ವಾಸನೆ ಮತ್ತು ಹಲ್ಲು ಸಮಸ್ಯೆಗಳೂ ಹೆಚ್ಚಾಗಬಹುದು.

ಈ ಹಾನಿ ಶಾಶ್ವತವೇ?

ಒಳ್ಳೆಯ ಸುದ್ದಿ ಎಂದರೆ ಆರೋಗ್ಯವಂತ ವ್ಯಕ್ತಿ ಒಂದು ತಿಂಗಳೊಳಗೆ ಧೂಮಪಾನ ತ್ಯಜಿಸಿದರೆ ಹೆಚ್ಚಿನ ಹಾನಿ ಹಿಮ್ಮೆಟ್ಟಬಹುದು. ಆದರೆ ಸೆಲ್ಯುಲರ್ ಮಟ್ಟದಲ್ಲಿ ಹಾನಿಯ ಬೀಜ ಬಿತ್ತಲ್ಪಡುತ್ತದೆ. ಆಸ್ತಮಾ, ಹೃದ್ರೋಗ ಅಥವಾ ಆನುವಂಶಿಕ ಅಪಾಯ ಇರುವವರಿಗೆ ಪರಿಣಾಮ ಹೆಚ್ಚು ಗಂಭೀರವಾಗಬಹುದು ಎನ್ನವುದು ತಜ್ಞರ ಅಭಿಪ್ರಾಯ.

ಲೈಟ್ ಸಿಗರೇಟ್’ ಎಂಬ ಮಿಥ್!

ಹಗುರ ಅಥವಾ ಕಡಿಮೆ ಟಾರ್ ಇರುವ ಸಿಗರೇಟ್‌ಗಳು ಸುರಕ್ಷಿತವಲ್ಲ. ಎಲ್ಲ ಸಿಗರೇಟ್‌ಗಳಲ್ಲೂ ನಿಕೋಟಿನ್ ಮತ್ತು ಸಾವಿರಾರು ಹಾನಿಕಾರಕ ರಾಸಾಯನಿಕಗಳಿವೆ. ಕಡಿಮೆ ನಿಕೋಟಿನ್ ಪೂರೈಸಲು ಜನರು ಹೆಚ್ಚು ಆಳವಾಗಿ ಉಸಿರಾಡುವುದರಿಂದ ಹಾನಿ ಇನ್ನೂ ಹೆಚ್ಚಾಗಬಹುದು. ದಿನಕ್ಕೆ ಎರಡು ಸಿಗರೇಟ್ ಕೂಡ ಅಪಾಯವಲ್ಲ ಎಂದು ಭಾವಿಸುವುದು ಭ್ರಮೆ. ನಿಜವಾದ ಅಪಾಯವೆಂದರೆ ವ್ಯಸನ ಎಷ್ಟು ಬೇಗ ಶುರುವಾಗುತ್ತದೆ ಎಂಬುದು. ಸಣ್ಣ ಆರಂಭವೇ ದೊಡ್ಡ ಅಭ್ಯಾಸವಾಗಬಹುದು.

ಹಕ್ಕು ನಿರಾಕರಣೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ಇದನ್ನು ವೃತ್ತಿಪರ ವೈದ್ಯಕೀಯ ಸಲಹೆ ಎಂದು ಅರ್ಥೈಸಿಕೊಳ್ಳಬಾರದು. ಯಾವುದೇ ಪ್ರಶ್ನೆಗಳು ಅಥವಾ ಕಾಳಜಿಗಳೊಂದಿಗೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

WhatsApp Group Join Now

Spread the love

Leave a Reply