ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊರಟಕೆರೆ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಯ ಅಮಾನವೀಯ ವರ್ತನೆಯಿಂದಾಗಿ ವೃದ್ಧ ದಂಪತಿಯೊಂದು ಕಳೆದ ಒಂದು ವಾರದಿಂದ ಬೀದಿಪಾಲಾಗಿ ಬದುಕು ಸಾಗಿಸುವ ಸ್ಥಿತಿಗೆ ತಲುಪಿದೆ.
ಮನೆ ಮಾತ್ರವಲ್ಲ, ತಮ್ಮ ಜೀವನಾಧಾರವಾಗಿದ್ದ ಜಾನುವಾರು ಕೊಟ್ಟಿಗೆಗೂ ಬೀಗ ಹಾಕಿದ ಪರಿಣಾಮ ವೃದ್ಧರು ತೀವ್ರ ಸಂಕಷ್ಟಕ್ಕೆ ಸಿಲುಕಿದ ಅಮಾನುಷ ಘಟನೆ ನಡೆದಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
2 ಲಕ್ಷ ಸಾಲ ಪಡೆದ ದಂಪತಿ!
ಗ್ರಾಮದ ಸಣ್ಣಯ್ಯ (80) ಮತ್ತು ಜಯಮ್ಮ (75) ಎಂಬ ದಂಪತಿ ಈ ಅಮಾನವೀಯತೆಗೆ ಬಲಿಯಾದವರು. 2023ರಲ್ಲಿ ತಮ್ಮ ಮಗನ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮಾರ್ಗವಿಲ್ಲದೇ, ಖಾಸಗಿ ಇಕ್ಚಿಟಾರ್ ಫೈನಾನ್ಸ್ ಸಂಸ್ಥೆಯಲ್ಲಿ ಮನೆ ಅಡಮಾನ ಇಟ್ಟು ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಮಗನ ಜೀವ ಉಳಿಸುವ ಆಶಯದಲ್ಲಿ ಕೈಗೊಂಡ ಈ ನಿರ್ಧಾರವೇ ಈಗ ಇವರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ.
ಎದುರಾದ ಆರ್ಥಿಕ ಸಂಕಷ್ಟ!
ಸಾಲ ಪಡೆದ ಬಳಿಕ ಒಂದು ವರ್ಷ ಕಾಲ ನಿಯಮಿತವಾಗಿ ಕಂತುಗಳನ್ನು ಕಟ್ಟಿದ್ದೇವೆ ಎಂದು ವೃದ್ಧ ದಂಪತಿ ಹೇಳುತ್ತಾರೆ. ಆದರೆ ನಂತರ ಆರ್ಥಿಕ ಸಂಕಷ್ಟ ಹೆಚ್ಚಾಗಿ ಕೆಲವು ತಿಂಗಳು ಸಾಲದ ಕಂತು ಪಾವತಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ, ಕೋರ್ಟ್ ಆದೇಶವಿದೆ ಎಂದು ಹೇಳಿಕೊಂಡು ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದು ಹೊರಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾವುದೇ ನೋಟಿಸ್ ಅಥವಾ ಪರ್ಯಾಯ ವ್ಯವಸ್ಥೆ ನೀಡದೆ, ವೃದ್ಧರನ್ನು ಮನೆಯಿಂದ ಹೊರಗೆ ತಳ್ಳಿ ಬೀಗ ಹಾಕಿರುವ ಘಟನೆ ನಡೆದಿದೆ.
ಮನೆ ಅಷ್ಟೇ ಅಲ್ಲ, ಜಾನುವಾರುಗಳ ಕೊಟ್ಟಿಗೆಗೂ ಬೀಗ!
ಮನೆಯಷ್ಟೇ ಅಲ್ಲ, ತಮ್ಮ ಜಾನುವಾರುಗಳನ್ನು ಕಟ್ಟಿ ಹಾಕುತ್ತಿದ್ದ ಕೊಟ್ಟಿಗೆಗೂ ಬೀಗ ಹಾಕಲಾಗಿದೆ ಎಂದು ಸಣ್ಣಯ್ಯ ಅಳಲು ತೋಡಿಕೊಂಡಿದ್ದಾರೆ. ಇದರಿಂದ ಜಾನುವಾರುಗಳಿಗೆ ಆಹಾರ ನೀಡಲು ಸಾಧ್ಯವಾಗದೆ, ಬದುಕಿನ ಏಕೈಕ ಆಧಾರವೂ ಕಸಿದುಕೊಂಡಂತಾಗಿದೆ. ನಾವು ಸಾಲ ವಾಪಸ್ ಕೊಡ್ತೀವಿ… ಸ್ವಲ್ಪ ಸಮಯ ಕೊಡಿ” ಎಂದು ಕೈ ಮುಗಿದು ಬೇಡಿಕೊಂಡರೂ ಯಾರೂ ಕೇಳಲಿಲ್ಲ ಎಂದು ಜಯಮ್ಮ ಕಣ್ಣೀರಿಡುತ್ತಾರೆ. ಕಳೆದ ಒಂದು ವಾರದಿಂದ ಈ ವೃದ್ಧ ದಂಪತಿ ಮನೆಯ ಹೊರಗೇ ವಾಸ ಮಾಡುತ್ತಿದ್ದಾರೆ. ಚಳಿಯಲ್ಲೇ ಬೀದಿಯಲ್ಲಿ ಅಡುಗೆ ಮಾಡಿಕೊಂಡು, ತೆರೆದ ಆಕಾಶದಡಿ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ವಯಸ್ಸಿನ ಕಾರಣದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದರೂ, ತಲೆಮೇಲೆ ಕೂರೆ ಇಲ್ಲದ ಬದುಕು ಇವರಿಗೆ ಇನ್ನಷ್ಟು ನೋವು ತಂದಿದೆ.
ವೃದ್ಧರನ್ನು ಬೀದಿಗೆ ತಳ್ಳುವುದು ಯಾವ ನ್ಯಾಯ?
ಈ ಘಟನೆ ತಿಳಿದ ಬಳಿಕ ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘಟನೆಗಳು ಖಾಸಗಿ ಫೈನಾನ್ಸ್ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾಲ ವಸೂಲಿಯೂ ಇರಲಿ, ಆದರೆ ಮಾನವೀಯತೆ ಇರಬೇಕು. ವೃದ್ಧರನ್ನು ಬೀದಿಗೆ ತಳ್ಳುವುದು ಯಾವ ನ್ಯಾಯ?” ಎಂಬ ಪ್ರಶ್ನೆ ಜನರಿಂದ ಕೇಳಿಬರುತ್ತಿದೆ. ಕೋರ್ಟ್ ಆದೇಶವಿದ್ದರೂ ಸಹ, ಕಾನೂನುಬದ್ಧ ಪ್ರಕ್ರಿಯೆ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಸಾಲ ತೀರಿಸಲು ಸಿದ್ದ, ಸಮಯ ನೀಡಿ!
ಸಣ್ಣಯ್ಯ-ಜಯಮ್ಮ ದಂಪತಿ ಇದೀಗ ಸಾರ್ವಜನಿಕರು, ದಾನಿಗಳು ಮತ್ತು ಸರ್ಕಾರದ ಮೊರೆ ಹೋಗಿದ್ದಾರೆ. “ಸಾಲ ತೀರಿಸಲು ನಾವು ಸಿದ್ಧ. ಬದುಕಲು ಸ್ವಲ್ಪ ಸಮಯ ಮತ್ತು ಸಹಾಯ ಕೊಡಿ” ಎಂದು ಅವರು ಅಂಗಲಾಚುತ್ತಿದ್ದಾರೆ. ಈ ಪ್ರಕರಣ ಖಾಸಗಿ ಫೈನಾನ್ಸ್ ಸಂಸ್ಥೆಗಳ ಕಾರ್ಯವೈಖರಿ ಮೇಲೆ ಗಂಭೀರ ಪ್ರಶ್ನೆ ಎತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂಬ ಅವರ ಆಗ್ರಹವಾಗಿದೆ.
ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ!
WhatsApp Group
Join Now