ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗಾಗಿ ತಮ್ಮದೇ ಆದ ರೂಲ್ಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಪ್ರಯಾಣಿಕರಿಗೆ ತಿಳಿಯಲಿ ಎಂದು ತಮ್ಮ ಕ್ಯಾಬ್‌ನಲ್ಲಿ ರೂಲ್ಸ್ ಚಾರ್ಟ್ ಕೂಡ ಹಾಕಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಕ್ಯಾಬ್‌ವೊಂದರಲ್ಲಿ ಪ್ರಯಾಣಿಕರಿಗಾಗಿ ಆರು ನಿಯಮಗಳನ್ನು ಒಳಗೊಂಡಿರುವ ಕುತೂಹಲಕಾರಿ ಸೈನ್‌ಬೋರ್ಡ್ ಕಂಡುಬಂದಿದೆ.
ರೆಡ್ಡಿಟ್ ಬಳಕೆದಾರರೊಬ್ಬರು ಈ ಫೋಟೋ ಶೇರ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಕ್ಯಾಬ್ ಚಾಲಕರೊಂದಿಗೆ ಹೇಗೆ ವರ್ತಿಸಬೇಕು? ಎಂಬುದರ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಅವರು “ನನ್ನನ್ನು ಭಯ್ಯಾ (ಅಣ್ಣ) ಎಂದು ಕರೆಯಬೇಡಿ” ಮತ್ತು “ಸಭ್ಯರಾಗಿರಿ” ಎಂದೆಲ್ಲ ಸೂಚನೆ ನೀಡಿದ್ದಾರೆ.
ಏನದು ಆರು ರೂಲ್ಸ್
1) ನೀವು ಕ್ಯಾಬ್‌ನ ಮಾಲೀಕರಲ್ಲ.
2) ಕ್ಯಾಬ್ ಚಾಲನೆ ಮಾಡುವ ವ್ಯಕ್ತಿಯೇ ಕ್ಯಾಬ್‌ನ ಮಾಲೀಕ.
3) ಸಭ್ಯವಾಗಿ ಮಾತನಾಡಿ ಮತ್ತು ಗೌರವ ತೋರಿಸಿ.
4) ಬಾಗಿಲನ್ನು ನಿಧಾನವಾಗಿ ಮುಚ್ಚಿ
5) ನಿಮ್ಮ ಆಟಿಟ್ಯೂಡ್ ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ, ದಯವಿಟ್ಟು ನಮಗೆ ತೋರಿಸಬೇಡಿ. ಏಕೆಂದರೆ ನೀವು ನಮಗೆ ಹೆಚ್ಚಿನ ಹಣವನ್ನು ನೀಡುತ್ತಿಲ್ಲ.
6) ನಮಗೆ ಭಯ್ಯಾ (ಅಣ್ಣ) ಅಂತ ಹೇಳಬೇಡಿ. ವೇಗವಾಗಿ ಗಾಡಿ ಓಡಿಸಲು ಹೇಳಬೇಡಿ.
ಈ ರೂಲ್ಸ್ ನೋಡಿದ ಪ್ರಯಾಣಿಕರೊಬ್ಬರು ಕುತೂಹಲದಿಂದ ಫೋಟೋ ಹಂಚಿಕೊಂಡಿದ್ದಾರೆ. ಕೆಲವರು ಕ್ಯಾಬ್ ಚಾಲಕನ ಪರ ಮಾತನಾಡಿದ್ದಾರೆ. ಚಾಲಕ ಹೇಳುವುದರಲ್ಲಿ ತಪ್ಪಿಲ್ಲ, ಹಣ ನೀಡುತ್ತೇವೆ ಎಂಬ ಕಾರಣಕ್ಕೆ ಅವರ ಮೇಲೆ ದರ್ಪ ತೋರುವುದು ಸರಿಯಲ್ಲ ಎಂದು ಸಪೋರ್ಟ್ ಮಾಡಿದ್ದಾರೆ. ಇನ್ನು ಕೆಲವರು ಕಾಲೆಳೆದಿದ್ದಾರೆ.
ಕ್ಯಾಬ್ ಚಾಲಕನನ್ನು ಭಯ್ಯಾ ಬದಲು ಅಣ್ಣಾ ಅಥವಾ ಬಿಗ್ ಬ್ರದರ್ ಎಂದು ಕರೆಯುವುದು ಸರಿಯೇ? ಅಥವಾ ಗೌರವಾನ್ವಿತ ಚಾಲಕನೇ ಎನ್ನಬಹುದೇ ಎಂದು ಕೇಳಿದ್ದಾರೆ. ಒಂದು ವೇಳೆ ನಾವು ಹೆಚ್ಚು ಹಣ ನೀಡಿದರೆ, ಅವರು ಕೆಟ್ಟ ಮನೋಭಾವವನ್ನು ಸಹಿಸಿಕೊಳ್ಳುತ್ತಾರೆಯೇ? ಎಂದಿದ್ದಾರೆ.
ಕೆಲವರು ಜನರನ್ನು ಜನರು ಹೇಗೆ ನಡೆಸಿಕೊಳ್ಳುತ್ತಾರೆಂದು ನೀವು ನೋಡಿದ್ದೀರಾ? ಅವರು ಕೆಲಸಗಾರರನ್ನು, ಡೆಲಿವರಿ ಸಿಬ್ಬಂದಿಯನ್ನು ಲಿಫ್ಟ್ ಬಳಸಲು ಅನುಮತಿಸುವುದಿಲ್ಲ. ಆದ್ದರಿಂದ ಕ್ಯಾಬ್ ಚಾಲಕನ ನಿಯಮಗಳು ಸರಿ ಇದೆ. ಯಾರಾದರೂ ನಿಮ್ಮನ್ನು ಅಗೌರವಿಸಿದ್ದರೆ, ಭವಿಷ್ಯದಲ್ಲಿ ನಿಮ್ಮ ನಿಯಮಗಳನ್ನು ಉಲ್ಲೇಖಿಸುವ ಮೂಲಕ ಅದನ್ನು ಏಕೆ ತಪ್ಪಿಸಬಾರದು? ಎಂದಿದ್ದಾರೆ.
ನಾನು ನಿಜವಾಗಿಯೂ ಈ ನಿಯಮಗಳನ್ನು ಬೆಂಬಲಿಸುತ್ತೇನೆ. ಕೆಲವು ಪ್ರಯಾಣಿಕರು ವಾಹನವನ್ನು ತಮ್ಮ ಸ್ವಂತದ್ದು ಎನ್ನುವಂತೆ ವರ್ತಿಸುತ್ತಾರೆ. ನಿಮ್ಮ ಆಟಿಟ್ಯೂಡ್ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಎನ್ನುವುದು ನಿಜಕ್ಕೂ ಕೆಲವರ ಕೊಬ್ಬು ಇಳಿಸುತ್ತೆ. ಇದು ಕಷ್ಟವೇ ಆದರೂ ಬದಲಾವಣೆ ತರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಭಯ್ಯಾ ಅನ್ನಬೇಡಿ, ಆಟಿಟ್ಯೂಡ್ ನಿಮ್ಮ ಜೇಬಲ್ಲಿಡಿ : ಬೆಂಗಳೂರು ಕ್ಯಾಬ್ ಚಾಲಕನಿಂದ ಆರು ರೂಲ್ಸ್!
WhatsApp Group
Join Now