6 ತಿಂಗ್ಳ ನಂತ್ರ ಮನೆಗೆ ಮರಳಿದ ಪುಟ್ಟ ದೇವತೆ, ಹೆತ್ತವರಿಗೆ ಮರು ಜೀವ ಕೊಟ್ಟ ಮುಂಬೈ ಪೊಲೀಸ್‌ಗೆ ಆನಂದ್ ಮಹೀಂದ್ರಾ ಶ್ಲಾಘನೆ

Spread the love

ಮೇ ತಿಂಗಳಿನಿಂದ ಕಾಣೆಯಾಗಿದ್ದ ಬಾಲಕಿಯನ್ನು ಆಕೆಯ ಹೆತ್ತವರೊಂದಿಗೆ ಮತ್ತೆ ಸೇರಿಸಿದ ಮುಂಬೈ ಪೊಲೀಸರ ಕಾರ್ಯಕ್ಕೆ ಭಾರತೀಯ ಉದ್ಯಮಿ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು X ನಲ್ಲಿ ಶ್ಲಾಘಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಮುಂಬೈ ಪೊಲೀಸರ ಬದ್ಧತೆಯನ್ನ ಕೊಂಡಾಡಲಾಗಿದೆ.

WhatsApp Group Join Now

ಅಂದ ಹಾಗೆ ಮೂಲ ಪೋಸ್ಟ್ ಅನ್ನು ಮೋಹಿನಿ ಮಹೇಶ್ವರಿ ಎಂಬ ಬಳಕೆದಾರರು ಹಂಚಿಕೊಂಡಿದ್ದು, ಮುಂಬೈ ಪೊಲೀಸರನ್ನು ಶ್ಲಾಘಿಸುತ್ತಾ “ಕೆಲವು ಅಧಿಕಾರಿಗಳು ತಮ್ಮ ಶರ್ಟ್ ಜೇಬಿನಲ್ಲಿ ಬಾಲಕಿಯ ಫೋಟೋವನ್ನು ಸ್ವಂತ ಮಗುವಿನದ್ದೇನೋ ಎಂಬಂತೆ ಇಟ್ಟುಕೊಂಡು ಓಡಾಡಿದರು. ನಗರದಾದ್ಯಂತ ಪೋಸ್ಟರ್‌ಗಳನ್ನು ವಿತರಿಸಿದರು ಮತ್ತು ಪ್ರತಿಯೊಂದು ಸುಳಿವನ್ನ ಫಾಲೋ ಮಾಡಿದರು.

ನವೆಂಬರ್ 14 ರಂದು ಮಕ್ಕಳ ದಿನದಂದು ಬಾಲಕಿಯನ್ನು ಮುಂಬೈಗೆ ಕರೆತರಲಾಯಿತು. ವಿಮಾನ ನಿಲ್ದಾಣದಲ್ಲಿ ಮುಂಬೈ ಅಪರಾಧ ವಿಭಾಗವು ಅವಳನ್ನು ಬಲೂನುಗಳು ಮತ್ತು ಹೊಸ ನೀಲಿ ಬಣ್ಣದ ಫ್ರಾಕ್‌ನೊಂದಿಗೆ ಸ್ವಾಗತಿಸಿತು. ಅಧಿಕಾರಿಗಳು ಕಾಯುತ್ತಿರುವುದನ್ನು ನೋಡಿದಾಗ ಆ ಪುಟ್ಟ ಹುಡುಗಿ ಓಡಿಹೋದಳು…ದೂರವಲ್ಲ, ಬದಲಿಗೆ ಅವರ ಕಡೆಗೆ. ಆ ನಂತರ ಹತ್ತಿರದ ಪೊಲೀಸ್ ಅಧಿಕಾರಿಯನ್ನು ಅಪ್ಪಿಕೊಂಡಳು” ಎಂದು ಬರೆದುಕೊಂಡಿದ್ದರು.

ಏನಿದು ಪ್ರಕರಣ?

ಮೇ 20, 2025 ರ ರಾತ್ರಿ ಮಸುಕಾದ ಗುಲಾಬಿ ಬಣ್ಣದ ಫ್ರಾಕ್ ಧರಿಸಿದ್ದ ಪುಟ್ಟ ಹುಡುಗಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಕಾಣೆಯಾಗಿದ್ದಳು. ಸೋಲಾಪುರದ ಸರಳ ಜನರಾದ ಆಕೆಯ ಪೋಷಕರು ಚಿಕಿತ್ಸೆಗಾಗಿ ಮುಂಬೈಗೆ ಬಂದಿದ್ದರು. ಅವರು ಸುಸ್ತಾಗಿದ್ದರು. ಒಂದು ಕ್ಷಣ ತಾಯಿ ಕಣ್ಣು ಮುಚ್ಚಿದಳಷ್ಟೇ..ಕಣ್ಣು ತೆರೆದಾಗ ಮಗಳು ಅಲ್ಲಿರಲಿಲ್ಲ.

ಈ ಘಟನೆಯ ನಂತರ ಹುಡುಗಿಯ ತಂದೆ ಆರು ತಿಂಗಳು ನಿದ್ದೆ ಮಾಡಲಿಲ್ಲ. ತಾಯಿ-ತಂದೆ ಇಬ್ಬರ ಕಣ್ಣುಗಳು ದಣಿದಿದ್ದವು. ಕತ್ತಲೆಯಲ್ಲಿಯೂ ಅದೇ ಹೆಸರನ್ನು ಪಿಸುಗುಟ್ಟಲಾಗುತ್ತಿತ್ತು. “ಆರೋಹಿ… ಆರೋಹಿ…”

ಆದರೆ ಇತ್ತ ಮಗಳು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ವಾರಣಾಸಿಯಲ್ಲಿ ತನ್ನ ನಿಜವಾದ ಹೆಸರು ನೆನಪಿಲ್ಲದ ಕಾರಣಕ್ಕಾಗಿ ತನ್ನನ್ನು ತಾನು “ಕಾಶಿ” ಎಂದು ಕರೆದುಕೊಂಡಳು. ಜೂನ್‌ನಲ್ಲಿ ರೈಲ್ವೆ ಹಳಿಯ ಬಳಿ ಅವಳು ಬರಿಗಾಲಿನಲ್ಲಿ ಮತ್ತು ಭಯದಿಂದ ಅಳುತ್ತಿದ್ದಳು. ಅನಾಥಾಶ್ರಮವು ಅವಳಿಗೆ ಆಹಾರ, ಹಾಸಿಗೆ ಮತ್ತು ಹೊಸ ಹೆಸರನ್ನು ನೀಡಿತು. ಎಲ್ಲ ಮಕ್ಕಳಂತೆ ಆಕೆಯೂ ಮುಗುಳ್ನಕ್ಕಳು. ಆದರೆ ಕೆಲವೊಮ್ಮೆ ರಾತ್ರಿಯಲ್ಲಿ ಅವಳು ತನ್ನ ಕಂಬಳಿಯ ಅಂಚನ್ನು ಹಿಡಿದು “ಆಯಿ” ಎಂದು ಹೇಳುತ್ತಿದ್ದಳು. ಮರಾಠಿಯಲ್ಲಿ ಆಯಿ ಎಂದರೆ ತಾಯಿ. ಅದು ಬೇರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ.

ಹೀಗಿರುವಾಗ ನವೆಂಬರ್ 13 ರಂದು ವಾರಣಾಸಿಯ ಸ್ಥಳೀಯ ವರದಿಗಾರರೊಬ್ಬರು ಪೋಸ್ಟರ್ ನೋಡಿದರು. ಹಾಗೆಯೇ ನಿದ್ರೆಯಲ್ಲಿ ಒಬ್ಬ ಹುಡುಗಿ ಮರಾಠಿ ಪದಗಳನ್ನು ಮಾತನಾಡುತ್ತಿರುವುದನ್ನು ನೋಡಿದ್ದರು. ತಕ್ಷಣ ಪೊಲೀಸರಿಗೆ ಕರೆ ಮಾಡಿದರು. ಮರುದಿನ ಬೆಳಗ್ಗೆ ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ವಾರಣಾಸಿಯಲ್ಲಿ ತಮ್ಮ ಲ್ಯಾಪ್‌ಟಾಪ್‌ನಲ್ಲಿ ವಿಡಿಯೋ ಕರೆ ಮಾಡಿದರು. ಪರದೆಯ ಮೇಲೆ ಗುಲಾಬಿ ಬಣ್ಣದ ಫ್ರಾಕ್ ಧರಿಸಿದ ಪುಟ್ಟ ಹುಡುಗಿ ಕಾಣಿಸಿಕೊಂಡಳು. ಹುಡುಗಿ ಕಣ್ಮರೆಯಾದ ದಿನ ಧರಿಸಿದ್ದ ಅದೇ ಬಟ್ಟೆ. ಮುಂಬೈನಲ್ಲಿ ಅಧಿಕಾರಿಯ ಹಿಂದೆ ನಿಂತಿದ್ದ ತಾಯಿ ತನ್ನ ಮಗಳನ್ನು ನೋಡಿ ಮೌನವಾಗಿ ಕುಸಿದುಬಿದ್ದಳು. ತಂದೆ “ಇದು ನನ್ನ ಆರೋಹಿ… ಇದು ನನ್ನ ಮಗು…” ಎಂದು ಪುನರಾವರ್ತಿಸುತ್ತಲೇ ಇದ್ದರು. ನಂತರ ನವೆಂಬರ್ 14 ರಂದು ಅವಳನ್ನು ಹಿಂತಿರುಗಿಸಲಾಯಿತು.

ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾವನಾತ್ಮಕ ಪ್ರತಿಕ್ರಿಯೆ

ಈ ಕಥೆ ಕೇಳಿದೊಡನೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾವನಾತ್ಮಕ ಪ್ರತಿಕ್ರಿಯೆಗಳ ಪ್ರವಾಹವೇ ಹರಿದುಬಂತು. ಅಷ್ಟೇ ಅಲ್ಲ, ಮುಂಬೈ ಪೊಲೀಸರ ದೃಢಸಂಕಲ್ಪಕ್ಕೆ ಧನ್ಯವಾದವನ್ನು ಹೇಳಲಾಯ್ತು.

ಆನಂದ್ ಮಹೀಂದ್ರಾ ಅವರು X ನಲ್ಲಿ ಮೂಲ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದು, ಇದು ಮೇ ತಿಂಗಳಲ್ಲಿ ಮುಂಬೈನಿಂದ ಕಾಣೆಯಾದ ಮತ್ತು ಸುದೀರ್ಘ ಆರು ತಿಂಗಳುಗಳ ನಂತರ ಅಂತಿಮವಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾದ ಆರೋಹಿ ಎಂಬ ನಾಲ್ಕು ವರ್ಷದ ಹುಡುಗಿಯ ಭಾವನಾತ್ಮಕ ಕಥೆಯನ್ನು ಹೇಳುತ್ತದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಮುಂಬೈ ಪೊಲೀಸರು ವಿಶ್ವದ ಅತ್ಯುತ್ತಮ ಪಡೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಈ ಪೋಸ್ಟ್‌ಗೆ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸುತ್ತಾ, “ಮುಂಬೈ ಪೊಲೀಸರೇ, ನೀವು ನಮಗೆ ಭರವಸೆ ಮತ್ತು ಸಂತೋಷದ ಉಡುಗೊರೆಯನ್ನು ನೀಡಿದ್ದೀರಿ. ಈ ಕಾರಣಕ್ಕಾಗಿಯೇ, ನೀವು ವಿಶ್ವದ ಅತ್ಯುತ್ತಮ ಪಡೆಗಳಲ್ಲಿ ಒಬ್ಬರು” ಎಂದು ಬರೆದಿದ್ದಾರೆ.


Spread the love

Leave a Reply