ಬಿಜೆಪಿ ಮತ್ತು ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ, ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯಪಾಲು ಕೇವಲ 37 ಸೆಕೆಂಡುಗಳಲ್ಲಿ ರಾಷ್ಟ್ರಗೀತೆಗೆ ಅಪಚಾರ, ಸಂವಿಧಾನಕ್ಕೆ ದ್ರೋಹ, ಕರ್ನಾಟಕಕ್ಕೆ ಅಗೌರವ, ಕನ್ನಡಿಗರಿಗೆ ಅಪಮಾನ,ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರಿಂದ ಇಷ್ಟೆಲ್ಲ ಅಪಚಾರವಾದರೂ ಬಿಜೆಪಿಯವರ ಸಮರ್ಥನೆ ನೋಡುತ್ತಿದ್ದರೆ ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೇ ಅಥವಾ ಜಗನ್ನಾಥ ಭವನದಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ. ಭಾಷಣದ ನಂತರ ರಾಷ್ಟ್ರಗೀತೆಯ ಬ್ಯಾಂಡ್ ನುಡಿಸುವುದು ನಿಯಮ, ಆದರೆ ರಾಜ್ಯಪಾಲರು ರಾಷ್ಟ್ರಗೀತೆ ನುಡಿಸಲು ಒಂದು ಕ್ಷಣವೂ ಅವಕಾಶ ನೀಡದೆ ಅವಸರದ ನಡೆ ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ಈ ದೇಶದ್ರೋಹಿ ನಡವಳಿಕೆಯನ್ನು ಖಂಡಿಸದೆ ಸಮರ್ಥಿಸುತ್ತಿರುವ ಬಿಜೆಪಿಯವರದ್ದು ಬೂಟಾಟಿಕೆಯ ದೇಶಭಕ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಂಸತ್ತಿನಲ್ಲಿ “ವಂದೇ ಮಾತರಂ” ಬಗ್ಗೆ ಮೂರು ದಿನಗಳ ಕಾಲ ಚರ್ಚೆ ನಡೆಸುವ ಬಿಜೆಪಿಗೆ “ಜನ ಗಣ ಮನ”ದ ಬಗ್ಗೆ ಮೂರು ನಿಮಿಷವೂ ಚರ್ಚಿಸದಷ್ಟು ಅಸಹನೆ ಏಕೆ? ರಾಷ್ಟ್ರಗೀತೆಯನ್ನು ವಿರೋಧಿಸುವ ಸಂಘದ ಪಾಠವನ್ನು ಪಾಲಿಸುತ್ತಿದ್ದಾರೆಯೇ? ಬಿಜೆಪಿಯವರಲ್ಲಿ ಎಳ್ಳು ಕಾಳಷ್ಟು ದೇಶಭಕ್ತಿ ಇದ್ದಿದ್ದೇ ಆದರೆ ರಾಷ್ಟ್ರಗೀತೆಗೆ, ಸಂವಿಧಾನಕ್ಕೆ ರಾಜ್ಯಪಾಲರಿಂದ ಆಗಿರುವ ಅವಮಾನವನ್ನು ಖಂಡಿಸಲಿ ಎಂದು ಆಗ್ರಹಿಸಿದ್ದಾರೆ.
‘ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ: ಗವರ್ನರ್ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೋ, ಜಗನ್ನಾಥ ಭವನದಲ್ಲಿದೆಯೋ?’
WhatsApp Group
Join Now