ಚುನಾವಣೆ ಮೊದಲು ಇನ್ನೊಂದು ಪಹಲ್ಗಾಂ ದಾಳಿ.? ಪ್ರಧಾನಿ ಮೌನ ಪ್ರಶ್ನಿಸಿದ ಮಮತಾ ಬ್ಯಾನರ್ಜಿ

Spread the love

‘ಚುನಾವಣೆಗೂ ಮುನ್ನ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆಯೇ?’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ದೀದಿ ನೇತೃತ್ವದ ರಾಜ್ಯಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ‘ಅಲ್ಪಸಂಖ್ಯಾತರ ಮತ ಸೆಳೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದೆ.

ಖ್ವಾಜಾರ ಹೇಳಿಕೆಗೆ ಪ್ರತಿಕ್ರಿಯೆಯನ್ನೇಕೆ ನೀಡಲಿಲ್ಲ?

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಕೋಲ್ಕತಾದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದನ್ನು ಉಲ್ಲೇಖಿಸಿದ ಮಮತಾ, ‘ಕೂಚ್‌ಬೆಹಾರ್‌ನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಖ್ವಾಜಾರ ಹೇಳಿಕೆಗೆ ಪ್ರತಿಕ್ರಿಯೆಯನ್ನೇಕೆ ನೀಡಲಿಲ್ಲ? ಇನ್ನೊಂದು ಪಹಲ್ಗಾಂ ದಾಳಿ ನಡೆಸುವ ಯೋಜನೆಯಿದೆಯೇ? ಯಾರಾದರೂ ಕೋಲ್ಕತಾದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡಿದರೆ ಭಾರತೀಯರಾದ ನಾವದನ್ನು ಸಹಿಸೆವು. ಹಾಗಿರುವಾಗ ನೀವು ಸುಮ್ಮನೆ ಇರಲು ಹೇಗೆ ಸಾಧ್ಯ’ ಎಂದು ಕೇಳಿದ್ದಾರೆ. ಜತೆಗೆ ಮೋದಿ ರಾಜೀನಾಮೆಗೂ ಆಗ್ರಹಿಸಿದ್ದಾರೆ.

ದೀದಿ ಹಿಂದೂ ವಿರೋಧಿ ಎಂದ ಬಿಜೆಪಿ

ಮಮತಾರ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ ಪ್ರತಿಕ್ರಿಯಿಸಿದ್ದು, ‘ಮತಬ್ಯಾಂಕ್‌ಗಾಗಿ ದೀದಿ, ಹಿಂದೂಗಳನ್ನು ಬಲಿ ಪಡೆದ ಕ್ರೂರ ಪಹಲ್ಗಾಂ ಉಗ್ರದಾಳಿಯನ್ನು ಯೋಜಿತ ಎಂದು ಕರೆಯುತ್ತಿದ್ದಾರೆ. ಅವರು ಹಿಂದೂ ವಿರೋಧಿ’ ಎಂದು ತಿವಿದಿದ್ದಾರೆ.

‘ಪಹಲ್ಗಾಂ ದಾಳಿಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತೆ ಉಗ್ರದಾಳಿಯ ನೆಪ ಹೇಳಿ ನಮ್ಮ ಮೇಲೆ ನಕಲಿ ಕಾರ್ಯಾಚರಣೆ ಕೈಗೊಳ್ಳಬಹುದು. ಹಾಗೇನಾದರೂ ಮಾಡಿದರೆ ನಾವು ಕೋಲ್ಕತಾವನ್ನು ಗುರಿಯಾಗಿಸಿ ಆಕ್ರಮಣ ಮಾಡುತ್ತೇವೆ’ ಎಂದು ಖ್ವಾಜಾ ನಾಲಗೆ ಹರಿಬಿಟ್ಟಿದ್ದರು.

WhatsApp Group Join Now

ಯುಸಿಸಿ, ಏಕ ಚುನಾವಣೆ ಚರ್ಚೆ ಜಾರಿಯಲ್ಲಿ: ಮೋದಿ

ಬಿಜೆಪಿ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ಒಂದು ರಾಷ್ಟ್ರ ಒಂದು ಚುನಾವಣೆಯ ಬಗೆಗಿನ ಮಾತುಕತೆಗಳು ಜಾರಿಯಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ‘ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಏಕ ಚುನಾವಣೆ ಮತ್ತು ಎಲ್ಲಾ ದೇಶವಾಸಿಗಳಿಗೆ ಮದುವೆ, ದತ್ತು ಇತ್ಯಾದಿ ವಿಷಯಗಳಲ್ಲಿ ಏಕರೂಪ ನೀತಿಯನ್ನು ರೂಪಿಸುವ ಯುಸಿಸಿ ಬಗೆಗಿನ ಮಾತುಕತೆಗಳು ನಡೆಯುತ್ತಿದ್ದು, ಧನಾತ್ಮಕ ದಿಕ್ಕಿನತ್ತ ಸಾಗುತ್ತಿವೆ’ ಎಂದರು.

ಬಿಜೆಪಿ ಬಗ್ಗೆ ಮಾತನಾಡುತ್ತಾ, ‘ಕಾರ್ಯಕರ್ತರು ಪಕ್ಷವನ್ನು ತಮ್ಮ ತಾಯಿ ಎಂದು ಪರಿಗಣಿಸುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ನಮ್ಮದು. ಆದ್ದರಿಂದಲೇ ಅದರ ಸ್ಥಾಪನಾ ದಿನವು ಬರಿಯ ರಾಜಕೀಯ ಕಾರ್ಯಕ್ರಮವಾಗಿರದೆ ಒಂದು ಭಾವನಾತ್ಮಕ ಸಂದರ್ಭವಾಗಿದೆ. ದೇಶಸೇವೆಗೆ ಅವಕಾಶ ಕೊಟ್ಟಿದ್ದಕ್ಕಾಗಿ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಲು ಸಿಕ್ಕಿರುವ ಸದವಕಾಶ’ ಎಂದರು.

ಹಲವು ಸವಾಲುಗಳು

ಸ್ಥಾಪನೆಯಾದಾಗಿಂದ ಪಕ್ಷ ನಡೆದುಬಂದ ಹಾದಿ ಹಾಗೂ ಎದುರಿಸಿದ ಸವಾಲುಗಳ ಬಗ್ಗೆಯೂ ಮೋದಿ ಮಾತಾಡಿದ್ದಾರೆ. ‘ಬಿಜೆಪಿಯು ತುರ್ತುಸ್ಥಿತಿಯಂತಹ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್‌ನ ದಬ್ಬಾಳಿಕೆಗೆ ತುತ್ತಾಗಿತ್ತು. ಹಿಂಸೆಯು ರಾಜಕೀಯ ಸಂಸ್ಕೃತಿಯೇ ಆಗಿಬಿಟ್ಟಿರುವ ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳಲ್ಲಿ ನಮ್ಮ ಹಲವು ಕಾರ್ಯಕರ್ತರು ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿ ಎಲ್ಲಾ ಸವಾಲುಗಳನ್ನು ಎದುರಿಸಿ ಉತ್ತಮ ಫಲಿತಾಂಶ ಪಡೆಯುವುದನ್ನು ಮುಂದುವರೆಸುತ್ತದೆ’ ಎಂದರು. ಇದಕ್ಕೆ, ಬ್ರಿಟಿಷ್‌ ಕಾಲದ ಕೆಲ ಕಾನೂನುಗಳ ರದ್ದತಿ, ಹೊಸ ಸಂಸತ್‌ ಭವನ ಸ್ಥಾಪನೆ, ಸಾಮಾನ್ಯ ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ, ತ್ರಿವಳಿ ತಲಾಕ್‌ ರದ್ದುಗೊಳಿಸುವ ಕಾನೂನು, ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣದಂತಹ ಕೆಲಸಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.


Spread the love

Leave a Reply