ಯಾದಗಿರಿ : ಸೋಷಿಯಲ್ ಮೀಡಿಯಾದಲ್ಲಿ ಮಲ್ಲಿಕಾರ್ಜುನ್ ಮುತ್ಯಾ ಎಂಬ ಯುವಕನ ವಿಡಿಯೊ ವೈರಲ್ ಆಗುವುದನ್ನ ನಿಮ್ಮಲ್ಲಿ ಅನೇಕರು ನೋಡಿರುತ್ತೀರಿ. ಅಲ್ಲಿನ ಜನರಂತೂ ಮಲ್ಲಿಕಾರ್ಜುನ್ ಮುತ್ಯಾರನ್ನ ಅಪ್ಪಾಜಿ ಎಂದೇ ಕರೆಯುತ್ತಾರೆ. ಅವರನ್ನ ಜನಸೇವಕ, ದೈವಾಂಶ ಸಂಭೂತ ಎಂದು ಭಾವಿಸುತ್ತಾರೆ.
ಭಾರಿ ಜನಪ್ರಿಯತೆಗಳಿಸಿಕೊಂಡಿರುವ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿರುಗಿಬಿದ್ದಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ, ಯಾದಗಿರಿ ಎಸ್ಪಿಗೆ ಪತ್ರ ಕೂಡ ಬರೆದಿದೆ. ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ತನಿಖೆಗೆ ಆಗ್ರಹಿಸಿದೆ.
ಏನಿದು ಘಟನೆ?
ಮಲ್ಲಿಕಾರ್ಜುನ್ ಮುತ್ಯಾ ಬಾಲಕಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮೊದಲು ಬಾಲಕಿಯನ್ನ ಅವರು ಮಂಚದ ಮೇಲೆ ತಮ್ಮ ಮಡಿಲಲ್ಲಿ ಮಲಗಿಸಿಕೊಂಡಿದ್ದಾರೆ. ಅವಳಿಗೆ ಮುತ್ತಿಟ್ಟು, ಮುದ್ದು ಮಾಡುವುದನ್ನ ನೋಡಬಹುದು. ಆ ಬಾಲಕಿಗೆ ತೀರ ಕಿರಿಕಿರಿಯಾಗುವುದನ್ನೂ ವಿಡಿಯೊದಲ್ಲಿ ನೋಡಬಹುದು. ಅವಳನ್ನ ಮಲಗಿಸಿಕೊಂಡು ಏನನ್ನೋ ತಿನ್ನಿಸುತ್ತಾರೆ. ಹಾಗೇ, ಇನ್ನೊಂದು ವಿಡಿಯೋದಲ್ಲಿ ಬಾಲಕಿಯನ್ನ ಮಂಚದ ಮೇಲೆ ಕತ್ತು ಹಿಡಿದು ನಿಲ್ಲಿಸುತ್ತಾರೆ. ಜಡೆಯನ್ನೂ ಜಗ್ಗುತ್ತಾರೆ.
ಒಟ್ಟಾರೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಆ ಬಾಲಕಿಯೇನೂ ತೀರ ಪುಟ್ಟ ಮಗುವೂ ಅಲ್ಲ. ಅವಳಿಗೆ ಹಿಂಸೆ ಆಗುವುದನ್ನೂ ನೋಡಬಹುದು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ವಿರೋಧಿಸಿದ್ದರು. ಮಲ್ಲಿಕಾರ್ಜುನ್ ಮುತ್ಯಾ ವರ್ತನೆ ಬಗ್ಗೆ ಪ್ರಶ್ನೆ ಮಾಡಿದ್ದರು. ಕಮೆಂಟ್ ಸೆಕ್ಷನ್ನಲ್ಲಿ ಬಾಯಿಗೆ ಬಂದಂತೆ ಬೈದಿದ್ದರು. ಕೂಡಲೇ ಅವರ ವಿರುದ್ಧ FIR ದಾಖಲಿಸುವಂತೆಯೂ ಆಗ್ರಹಿಸಿದ್ದರು. ಇನ್ನು ಇಂಥವರನ್ನ ಮುತ್ಯಾ ಎಂದು ಕರೆದು, ಗೌರವಿಸುವವರಿಗೆ ಬುದ್ಧಿ ಇಲ್ಲ ಎಂದೂ ಅನೇಕರು ಕಮೆಂಟ್ ಹಾಕಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ದೂರು ದಾಖಲು
ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಕೋಸಂಬೆ ಈ ಬಗ್ಗೆ ಸುಮೋಟೊ ದೂರು ದಾಖಲಿಸಿಕೊಂಡಿದ್ದಾರೆ. ಈ ಆಯೋಗದಿಂದ ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಲಾಗಿದೆ. ʼಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೋಜಾಮಹಲ್ ಗ್ರಾಮದಲ್ಲಿ ಮಲ್ಲಿಕಾರ್ಜುನ್ ಮುತ್ಯಾ ಎಂಬ ವ್ಯಕ್ತಿಯು, ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೊದ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಗೆ ಸಂಬಂಧಪಟ್ಟು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ಷೇಪಣೆ ವ್ಯಕ್ತವಾಗಿದೆ. ಹಾಗೇ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊ ತುಣುಕಿನ ಆಧಾರದ ಮೇರೆಗೆ ಸ್ವಯಂ ಪ್ರೇರಿತ ದೂರನ್ನ ದಾಖಲಿಸಿಕೊಳ್ಳಲಾಗಿದೆ. ತಾವು ಈ ಬಗ್ಗೆ ಖುದ್ದು ಗಮನಹರಿಸಿ, ಸದರಿ ವಿಡಿಯೊ ಕುರಿತು ಪರಿಶೀಲನೆ ಮಾಡಬೇಕು. ಹಾಗೇ, ನೀವು ತೆಗದುಕೊಂಡ ಕ್ರಮದ ವರದಿಯನ್ನ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಬೇಕುʼ ಎಂದು ಪತ್ರದಲ್ಲಿ ಬರೆಯಲಾಗಿದೆ.
ಭಾರಿ ಸಂಖ್ಯೆಯಲ್ಲಿ ಅನುಯಾಯಿಗಳು..
ಮಲ್ಲಿಕಾರ್ಜುನ್ ಮುತ್ಯಾಗೆ ಇನ್ನೂ 26 ವರ್ಷ. ಆದರೆ ಅಪಾರ ಸಂಖ್ಯೆಯಲ್ಲಿ ಜನರ ಪ್ರೀತಿ ಗಳಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅನುಯಾಯಿಗಳನ್ನ ಹೊಂದಿದ್ದಾರೆ. ಯಾದಗಿರಿ ಭಾಗದ ನಡೆದಾಡುವ ದೇವರು ಎಂದೇ ಹೇಳಲಾಗುತ್ತದೆ. ಅನೇಕ ಜನರಿಗೆ ಮಲ್ಲಿಕಾರ್ಜುನ್ ಮುತ್ಯಾ ಸಹಾಯ ಮಾಡುವ ಸಾಕಷ್ಟು ವಿಡಿಯೊಗಳೂ ವೈರಲ್ ಆಗುತ್ತವೆ. ಇವರದ್ದೊಂದು ಮಠ ಇದೆ. ಆ ಮಠದ ಬಳಿಯಂತೂ ಯಾವಾಗಲೂ ಜನದಟ್ಟಣೆ ಇರುತ್ತದೆ. ಮಲ್ಲಿಕಾರ್ಜುನ್ ಮುತ್ಯಾರನ್ನ ನೋಡಲು ಬಹುತೇಕ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಬಾಲಕಿಯನ್ನ ಮಡಿಲಲ್ಲಿ ಮಲಗಿಸಿಕೊಂಡು ಹುಚ್ಚಾಟ; ನಡೆದಾಡುವ ದೇವರು ಎನ್ನಿಸಿಕೊಂಡಿದ್ದ ಮಲ್ಲಿಕಾರ್ಜುನ್ ಮುತ್ಯಾಗೆ ಕಾನೂನು ಸಂಕಷ್ಟ
WhatsApp Group
Join Now