ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮನೆಯೊಂದರಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ. ಆಕೆ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿದ ಆಕೆಯ ಪ್ರಿಯಕರ, ಕತ್ತುಕುಯ್ದು ಆಕೆಯ ಹತ್ಯೆ ಮಾಡಿರುವುದು ತಿಳಿದುಬಂದಿದೆ. ಮಾಹಿತಿ ಸಿಕ್ಕ ಕೂಡಲೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮದುವೆಯಾಗದೇ ಒಂಟಿಯಾಗಿದ್ದ ಸ್ಟಾಫ್ ನರ್ಸ್
39 ವರ್ಷವಾದರೂ ಮದುವೆಯಾಗದೆ ಒಂಟಿಯಾಗಿದ್ದ ಮಮತಾ, ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕುಮಾರಸ್ವಾಮಿ ಲೇಔಟ್‌ನಲ್ಲಿ ತಮ್ಮ ಸ್ನೇಹಿತೆಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡಿದ್ದರು. ಡಿಸೆಂಬರ್ 24ರಂದು ಆಕೆಯ ಸ್ನೇಹಿತೆ ಊರಿಗೆ ತೆರಳಿದ್ದರಿಂದ ಆ ದಿನ ರಾತ್ರಿ ಮಮತಾ ಒಬ್ಬರೇ ಮನೆಯಲ್ಲಿದ್ದರು.
ಇದೇ ಸಮಯಕ್ಕೆ ಕಾದು ಕುಳಿತಿದ್ದ ಆರೋಪಿ ಸುಧಾಕರ್, ರಾತ್ರೋ ರಾತ್ರಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಡಿಸೆಂಬರ್ 25ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ. ಹತ್ಯೆಯ ಮಾಹಿತಿ ದೊರಕುತ್ತಿದ್ದಂತೆ , ಕುಮಾರಸ್ವಾಮಿ ಲೇಔಟ್ನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದಿದ್ದ ಮಮತಾ
ಸುಧಾಕರ್ ಮತ್ತು ಮಮತಾ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಯಲ್ಲಿದ್ದರು. ಮಮತಾ ತನಗಿಂತ ವಯಸ್ಸಿನಲ್ಲಿ ಹಿರಿಯವರೆಂದು ತಿಳಿಯದ ಸುಧಾಕರ್ ಪ್ರೀತಿಯಲ್ಲಿ ಬಿದ್ದಿದ್ದ. ಆದರೆ ಸುಧಾಕರ್‌ಗೆ ಇತ್ತೀಚೆಗೆ ಕುಟುಂಬಸ್ಥರು ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ, ಕೋಪಗೊಂಡು ತನ್ನನ್ನೇ ಮದುವೆಯಾಗಬೇಕು ಎಂದು ಒತ್ತಾಯಿಸಿದ್ದರು.
ಅಷ್ಟೇ ಅಲ್ಲದೇ ತನ್ನನ್ನು ಬಿಟ್ಟು ಬೇರೆ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಂಡು ಸುಧಾಕರ್ ಹಾಗೂ ಅವರ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಈ ಒತ್ತಡದಿಂದ ಆತಂಕಕ್ಕೊಳಗಾದ ಸುಧಾಕರ್, ಮಮತಾಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದ. ಡಿಸೆಂಬರ್ 24ರಂದು ಮಮತಾ ಒಬ್ಬರೇ ಇದ್ದ ಸಂದರ್ಭ ಮನೆಗೆ ತೆರಳಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.