ತುಮಕೂರು : ವಿಧಿಯಾಟ ಅಂದ್ರೆ ಇದೇ ಅನಿಸುತ್ತೆ. ತುಂಬು ಗರ್ಭಿಣಿ ಪತ್ನಿಗೆ ಇಂದೇ ಡೆಲಿವರಿ ಡೇಟ್ ಕೊಟ್ಟಿದ್ರು. ಆಸ್ಪತ್ರೆಗೆ ಹೋಗದೇ ಕೆಲಸಕ್ಕೆ ಹಾಜರಾದ ಲೈನ್ ಮ್ಯಾನ್ ಮನದಲ್ಲಿ ಮಗುವನ್ನ ಕಣ್ತುಂಬಿಕೊಳ್ಳುವ ಆಸೆ ಕಾಣ್ತಿತ್ತು. ಆ ಆಸೆ ನುಚ್ಚು ನೂರಾಗಿದೆ. ವಿದ್ಯುತ್ ಶಾಕ್ನಿಂದ ಲೈನ್ ಮ್ಯಾನ್ ಸಾವನ್ನಪ್ಪಿದ್ದು, ಈತನ ಕಥೆ ಕರುಳು ಹಿಂಡುವಂತಿದೆ.
ಲೈನ್ ಮ್ಯಾನ್ ಸಾವಿಗೆ ಯಾರು ಹೊಣೆ?
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೈನ್ ಮ್ಯಾನ್ ಬಲಿಯಾಗಿರುವ ಘಟನೆ ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಪರಿವರ್ತಕ ಅಳವಡಿಸುವಾಗ ದುರಂತ ಸಂಭವಿಸಿದ್ದು, 26 ವರ್ಷದ ಕೆಪಿ ಮನು ಸಾವನ್ನಪ್ಪಿದ್ದಾರೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪವಿದೆ.
ತುಂಬು ಗರ್ಭಿಣಿ ಮನುವಿನ ಪತ್ನಿ
ಮೃತ ಲೈನ್ ಮ್ಯಾನ್ ಮನು ಕುಟುಂಬದ ಕಣ್ಣೀರ ಕಥೆ ಕರುಳು ಹಿಂಡುವಂತಿದೆ. ಮದುವೆಯಾಗಿ ಕೇವಲ ಹತ್ತು ತಿಂಗಳಷ್ಟೇ ಆಗಿತ್ತು. ಲೈನ್ ಮ್ಯಾನ್ ಮನು ಪತ್ನಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ರು. ಅಷ್ಟೇ ಅಲ್ಲದೇ ಹೆಂಡತಿಗೆ ಇವತ್ತೇ ಡೆಲಿವರಿ ಡೇಟ್ ಕೂಡ ಕೊಟ್ಟಿದ್ರು. ದುರಾಷ್ಟಕರ ಎನ್ನುವಂತೆ ಮನು ಸಾವನ್ನಪ್ಪಿದ್ದಾನೆ.
ಮನು ಸಾವಿಗೆ ಆಘಾತ, ಕುಟುಂಬಸ್ಥರ ಕಣ್ಣೀರು
ಇವತ್ತು ಮನು ಪತ್ನಿಗೆ ಡೆಲಿವರಿ ಡೇಟ್ ಕೊಡಲಾಗಿತ್ತು. ಪತ್ನಿ ಡೆಲಿವರಿಗೂ ಮುನ್ನವೇ ಪತಿ ಸಾವನ್ನಪ್ಪಿದ್ದು, ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ತಿಪಟೂರು ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ ಮನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ನಿಯಮದಂತೆ ಲೈನ್ ಮ್ಯಾನ್ ಜೊತೆ ಇರಬೇಕಾದ ಬೆಸ್ಕಾಂ ಮೇಸ್ತ್ರಿಯನ್ನು ಸ್ಥಳಕ್ಕೆ ಕಳುಹಿಸಿರಲಿಲ್ಲ. ಲೈನ್ ಮ್ಯಾನ್ ಸಾವಿಗೆ ಅಧಿಕಾರಿಗಳ ನೇರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಜೊತೆಗೆ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ತುಂಬು ಗರ್ಭಿಣಿ; ಮದುವೆಯಾಗಿ ವರ್ಷ ಕಳೆಯೋ ಮುನ್ನವೇ ಲೈನ್ ಮ್ಯಾನ್ ದುರಂತ ಅಂತ್ಯ
WhatsApp Group
Join Now