KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು

Spread the love

ಕುರಿಗಳು ರಸ್ತೆಗೆ ಅಡ್ಡ ಬಂದ ಕಾರಣ ಹಾರ್ನ್ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಬಸ್ ಚಾಲಕನ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಗಡಿ ಡಿಪೋಗೆ ಸೇರಿದ್ದ ಕೆಎಸ್‌ಆರ್‌ಟಿಸಿ ಬಸ್ ರಾಮನಗರದಿಂದ ಮಾಗಡಿ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ ಲಕ್ಷ್ಮೀಪುರ ಗ್ರಾಮದ ಬಳಿ ಬಂದಾಗ ರಸ್ತೆ ಮಧ್ಯೆ ಕುರಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ರೈತರು ಎದುರಾಗಿದ್ದಾರೆ. ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾದ ಕಾರಣ, ಬಸ್ ಚಾಲಕ ಮಂಜುನಾಥ್ ಅವರು ಮುಂದಕ್ಕೆ ಹೋಗಲು ಸಾಕಷ್ಟು ಬಾರಿ ಹಾರ್ನ್ ಮಾಡಿದ್ದಾರೆ.

ಕೋಪಗೊಂಡು ಬಸ್‌ನಿಂದ ಇಳಿಸಿ ಥಳಿತ

ಚಾಲಕ ಮಂಜುನಾಥ್ ಅವರು ಪದೇ ಪದೇ ಹಾರ್ನ್ ಮಾಡುತ್ತಿದ್ದರೂ ಕುರಿಗಳ ಮಾಲೀಕರು ಮತ್ತು ಗ್ರಾಮಸ್ಥರು ಅದನ್ನು ಕ್ಯಾರೆ ಮಾಡಿಲ್ಲ. ಇದರ ಜೊತೆಗೆ, ಅತಿಯಾಗಿ ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡ ಕುರಿಗಳ ಮಾಲೀಕ ಮತ್ತು ಇತರ ಗ್ರಾಮಸ್ಥರು ಬಸ್ ಅನ್ನು ತಡೆದಿದ್ದಾರೆ. ತಕ್ಷಣ ಬಸ್‌ನೊಳಗೆ ನುಗ್ಗಿದ ಕೆಲವರು ಚಾಲಕ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರ ಮತ್ತು ಸಹ ಪ್ರಯಾಣಿಕರ ಮುಂದೆಯೇ ಚಾಲಕನಿಗೆ ಥಳಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಲಕ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಯುತ್ತಿರುವ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಘಟನೆಯಿಂದಾಗಿ ರಸ್ತೆ ಸಂಚಾರಕ್ಕೆ ಅಲ್ಪಕಾಲ ತೊಂದರೆಯಾಗಿತ್ತು.

ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹಲ್ಲೆಯಿಂದ ನೋವಿಗೆ ಒಳಗಾದ ಬಸ್ ಚಾಲಕ ಮಂಜುನಾಥ್ ಅವರು ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಹಲ್ಲೆ ಮಾಡಿದ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಸಾರ್ವಜನಿಕ ಸಾರಿಗೆ ಬಸ್ ಚಾಲಕನ ಮೇಲೆ ಕರ್ತವ್ಯ ನಿರ್ವಹಿಸುವ ವೇಳೆ ಹಲ್ಲೆ ನಡೆಸಿರುವುದು ಗಂಭೀರ ವಿಚಾರವಾಗಿದ್ದು, ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ಸಾರಿಗೆ ಸಿಬ್ಬಂದಿ ಒತ್ತಾಯಿಸಿದ್ದಾರೆ.

WhatsApp Group Join Now

Spread the love

Leave a Reply