2025 ರಲ್ಲಿ ಅಗ್ನಿ (Fire), ವಾಯು ಮತ್ತು ಜಲ ಸುನಾಮಿ ಹೆಚ್ಚಾಗಲಿದೆ ಎಂದು ವರ್ಷದ ಆರಂಭದಲ್ಲಿಯೇ ಕೋಡಿಮಠದ ಶ್ರೀಗಳು ಭವಿಷ್ಯವೊಂದನ್ನು ನುಡಿದಿದ್ದರು. ಅದರಂತೆ ಸದ್ಯ ನಡೆಯುತ್ತಿರುವ ದುರಂತಕ್ಕೂ ಒಂದಕ್ಕೊಂದು ತಾಳೆ ಹಾಕಲಾಗುತ್ತಿದೆ.
ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ‘ಅರಸನ ಅರಮನೆಗೆ ಕಾರ್ಮೋಡ ಕವಿದೀತು, ವಾಯು, ಅಗ್ನಿ ಮುಂತಾದವುಗಳಿಂದ ಜನರು ತುಂಬಾ ತೊಂದರೆಯನ್ನು ಎದುರಿಸಬೇಕಾದೀತು. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಾರದು. ಸಾಮೂಹಿಕ ಸಾವು ಆಗುವ ಸಾಧ್ಯತೆಯಿದೆ, ನಾಲ್ಕು ಸುನಾಮಿಗಳಿಂದ ಜನರು ತತ್ತರಿಸಿ ಹೋಗಲಿದ್ದಾರೆ. ಅಚ್ಚರಿಯ ಮತ್ತು ದುಃಖದ ಪ್ರಸಂಗ ಭಾರತಕ್ಕೆ ಎದುರಾಗುತ್ತದೆ’ ಎಂದು ಹೇಳಿದ್ದರು.
ದೇಶದಲ್ಲಿ ವರ್ಷದಲ್ಲಾದ ಪ್ರಮುಖ ದುರಂತಗಳು ಹೀಗಿದೆ:
ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಬಸ್ : ಡಿಸೆಂಬರ್ 25ರ ಬೆಳಗ್ಗಿನ ಜಾವ ಎರಡು ಗಂಟೆ ಸುಮಾರಿಗೆ ಚಿತ್ರದುರ್ಗದ ಹಿರಿಯೂರು ತಾಲೂಕು ರಾ.ಹೆ.48ರ ಜವನಗೊಂಡನಹಳ್ಳಿಯ ಬಳಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಯೊಂಡು ಡಿವೈಡರ್ ದಾಟಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದಿದೆ. ಈ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕುಮಟಾಗೆ ತೆರಳುತ್ತಿದ್ದ ಖಾಸಗಿ ಬಸ್ ಇದಾಗಿತ್ತು.
ಗುಜರಾತ್ ವೇರ್ ಹೌಸ್ ದುರಂತ : ಏಪ್ರಿಲ್ 1ರಂದು ಗುಜರಾತ್ ನ ದೀಶಾ ಎನ್ನುವ ಪ್ರದೇಶದ ಗ್ರಾಮೀಣ ಭಾಗದಲ್ಲಿರುವ ವೇರ್ ಹೌಸ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 21 ಮಂದಿ ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ವೇಳೆ 24 ಮಂದಿ ನೌಕರರು ಅಲ್ಲಿದ್ದರು. ಕಳಪೆ ಮಟ್ಟದ ಅಲ್ಯೂಮಿನಿಯಂ ಪೌಡರ್‌ನಿಂದಾಗಿ ಬೆಂಕಿ ತಗುಲಿಕೊಂಡಿತ್ತು. ದೀಪಕ್ ಫತಡ್ಕಾ ಮಾಲೀಕತ್ವದ ಈ ವೇರ್ ಹೌಸ್ ಲೈಸೆನ್ಸ್ ಅವಧಿ ಒಂದು ವರ್ಷದ ಹಿಂದೆ ಮುಗಿದಿತ್ತು.
ಕೋಲ್ಕತ್ತಾ ಹೋಟೆಲ್‌ನಲ್ಲಿ ಅಗ್ನಿ ದುರಂತ : ಸೆಂಟ್ರಲ್ ಕೋಲ್ಕತ್ತಾದ ಬುರ್ರಾಬಜಾರ್ ಮೆಚುವಾ ಮಾರ್ಕೆಟ್ ನಲ್ಲಿ ಹೋಟೆಲ್ ಒಂದರಲ್ಲಿ ಏಪ್ರಿಲ್ 29 ರಂದು ಭೀಕರ ಅಗ್ನಿ ದುರಂತ ನಡೆದಿದೆ. ಈ ಅವಘಡದಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟು 14 ಮಂದಿ ಸುಟ್ಟು ಕರಕಲಾಗಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ 6 ಅಂತಸ್ತಿನ ರಿತುರಾಜ್ ಎನ್ನುವ ಹೋಟೆಲ್ ನಲ್ಲಿ ಈ ಘಟನೆ ನಡೆದಿತ್ತು.
ಗುಲ್ಜಾರ್ ಹೌಸ್ ಅಗ್ನಿ ದುರಂತ : ಮೇ 18ರಂದು ಹೈದರಾಬಾದ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ 8 ಮಂದಿ ಮಕ್ಕಳ ಸಹಿತ ಒಟ್ಟು 17 ಮಂದಿ ಸಾವನ್ನಪ್ಪಿದ್ದರು. ನಸುಕಿನ ಜಾವ ನಡೆದ ದುರಂತದಲ್ಲಿ ಒಂದೇ ಕುಟುಂಬದವರು ಸಾವನ್ನಪ್ಪಿದ್ದರು. ಕುಟುಂಬದ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ಇವರೆಲ್ಲಾ ಭಾಗವಹಿಸಿದ್ದರು. ಶಾರ್ಟ್ ಸರ್ಕ್ಯೂಟ್ ಆಗಿ, ಎಸಿ ಕಂಪ್ರೆಸರ್ ಬ್ಲಾಸ್ಟ್ ಆಗಿ, ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ಗಮನಿಸಿದ ಅಪಾರ್ಟ್ಮೆಂಟ್ ನೌಕರ ಕೂಡಲೇ ಮಾಹಿತಿಯನ್ನು ನೀಡಿದ್ದ. ಆದರೆ ದುರಂತ ಸಂಭವಿಸಿದ ಸುಮಾರು 45 ನಿಮಿಷದ ತರುವಾಯ ಫೈರ್ ಸರ್ವೀಸ್ ಇಂಜಿನ್ ಆಗಮಿಸಿತ್ತು.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಪತನ : ಜೂನ್ 12ರಂದು ಗುಜರಾತಿನ ಅಹಮದಾಬಾದ್‌ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ 32 ಸೆಕೆಂಡ್ ನಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ 241 ಪ್ರಯಾಣಿಕರು ಮೃತ ಪಟ್ಟಿದ್ದರು. ಲಂಡನ್ ನಗರಕ್ಕೆ ಹೊರಟಿದ್ದ ವಿಮಾನ, ಏರ್ಪೋರ್ಟ್ ಪಕ್ಕ ಇರುವ ಬಿಜೆ ಮೆಡಿಕಲ್ ಕಾಲೇಜ್ ಹಾಸ್ಟೆಲ್ ಮೇಲೆ ಹೊತ್ತಿ ಉರಿದು ಪತನಗೊಂಡಿತ್ತು. 12 crew ಸದಸ್ಯರೂ ಈ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಈ ವಿಮಾನ ದುರಂತದಲ್ಲಿ ಒಬ್ಬ ಪ್ರಯಾಣಿಕ ಪವಾಡಸದೃಶವಾಗಿ ಬಚಾವ್ ಆಗಿದ್ದರು. ಗುಜರಾತ್ ರಾಜ್ಯದ ಮಾಜಿ ಸಿಎಂ ವಿಜಯ್ ರುಪಾನಿ ಕೂಡಾ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಸಿಗಾಚಿ ಫಾರ್ಮಾ ಫ್ಯಾಕ್ಟರಿ ದುರಂತ : ಜೂನ್ 30 ರಂದು ತೆಲಂಗಾಣದಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿತ್ತು. ಸಿಗಾಚಿ ಕೈಗಾರಿಕಾ ಫಾರ್ಮಾ ಫ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೂವತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದಾಗ 140 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ಘಟನೆಯ ನಂತರ ತನಿಖೆಗಾಗಿ ತೊಂಬತ್ತು ದಿನ ಫ್ಯಾಕ್ಟರಿ ಬಂದ್ ಮಾಡಲು ಸರ್ಕಾರ ಆದೇಶ ನೀಡಿತ್ತು. ಸಂಗಾರೆಡ್ಡಿ ಜಿಲ್ಲೆಯ ಪಶಮ್ಯಲಾರಂ ಎನ್ನುವಲ್ಲಿ ಈ ದುರಂತ ಸಂಭವಿಸಿತ್ತು. ಇದು, ಫ್ಯಾಕ್ಟರಿ ಸ್ಪ್ರೇ ಡ್ರೈಯರ್ ಯುನಿಟ್ ಆಗಿತ್ತು.
ಹೈದರಾಬಾದ್ – ಬೆಂಗಳೂರು ಬಸ್ ಭಸ್ಮ : ಅಕ್ಟೋಬರ್ 24 ರಂದು ಆಂಧ್ರಪ್ರದೇಶದ ಕರ್ನೂಲ್ ಸಮೀಪ ಹೈದರಾಬಾದ್ – ಬೆಂಗಳೂರು ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ ತಗಲಿತ್ತು. ಈ ಅವಘಡದಲ್ಲಿ 21 ಪ್ರಯಾಣಿಕರು ಸಜೀವ ದಹನರಾಗಿದ್ದರು. ನಸುಕಿನ 3.30ರ ಸುಮಾರಿಗೆ ಈ ದುರಂತ ಸಂಭವಿಸಿತ್ತು ಮತ್ತು ವಿ.ಕಾವೇರಿ ಟ್ರಾವೆಲ್ಸ್ ಬಸ್ ಆಗಿತ್ತು.