ಹರ್ನಿಯಾ : ಹೊಟ್ಟೆ ಭಾಗದಲ್ಲಿ ನೋವು, ತೊಡೆಸಂಧಿಯ ಉಬ್ಬು, ಹರ್ನಿಯಾ ನಡುವಿನ ವ್ಯತ್ಯಾಸ ತಿಳಿಯಿರಿ

Spread the love

ಹೊಟ್ಟೆಯ ಭಾಗ ಅಥವಾ ತೊಡೆಸಂಧಿ ಪ್ರದೇಶದಲ್ಲಿ ಕಂಡುಬರುವ ಉಬ್ಬುಗಳು, ನೋವಿನ ವಿಧಗಳು ಮತ್ತು ತೀವ್ರತೆಯ ಬಗ್ಗೆ ಬಹುತೇಕ ಮಂದಿ ತಿಳಿವಳಿಕೆ ಹೊಂದಿರುವುದು ತೀರಾ ಕಡಿಮೆ. ಪ್ರತಿಯೊಬ್ಬರು ಕೂಡ ವಿವಿಧ ರೀತಿಯ ಊತಗಳಿಗೆ ಸಂಬಂಧಿಸಿ ಬೇರೆ ಬೇರೆ ಅಭಿಪ್ರಾಯ ಹೊಂದಿರುತ್ತಾರೆ.

ಹರ್ನಿಯಾಗಳು ನೋವುರಹಿತವಾಗಿರುವುದರಿಂದಾಗಿ ಬಹುತೇಕ ರೋಗಿಗಳು ತೀರಾ ತಡವಾಗಿ ವೈದ್ಯರ ಬಳಿಗೆ ಬರುತ್ತಾರೆ.

ಹಾಗಾದರೆ ಹೊಟ್ಟೆಯ ಮತ್ತು ತೊಡೆಸಂಧಿ ಭಾಗದ ಊತಗಳು, ವಿಶೇಷವಾಗಿ ಹರ್ನಿಯಾಗಳನ್ನು ಗುರುತಿಸುವುದು ಹೇಗೆ? ಇದಕ್ಕೆ ಕೆಲವು ಸಾಮಾನ್ಯ ಲಕ್ಷಣಗಳು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಎಂಬುದರ ಕುರಿತು ತಿಳಿವಳಿಕೆ ಹೊಂದಿರಬೇಕಾಗುತ್ತದೆ.

WhatsApp Group Join Now

ಜಿನ್ನಾ ಎದುರು ಮಂಡಿಯೂರಿದ್ದ ನೆಹರು, ವಂದೇ ಮಾತರಂ ತುಂಡರಿಸಿದ ಕಾಂಗ್ರೆಸ್: ಲೋಕಸಭೆಯಲ್ಲಿ ಇತಿಹಾಸದ ಕರಾಳ ಪುಟ ತೆರೆದಿಟ್ಟ ಪ್ರಧಾನಿ ಮೋದಿ

ತೊಡೆಸಂಧಿ ಭಾಗ/ ಹೊಟ್ಟೆಯ ಭಾಗದಲ್ಲಿ ಊತಗಳ ಲಕ್ಷಣಗಳು

1. ದೈಹಿಕ ಬದಲಾವಣೆಗಳು/ ಎದ್ದುಕಾಣುವ ಊತಗಳು ಎದ್ದುಕಾಣುವ ಊತ ಅಥವಾ ಗಡ್ಡೆ/ ಗಂಟು ಹರ್ನಿಯಾದ ಮೊದಲ ಲಕ್ಷಣವಾಗಿರುತ್ತದೆ. ರೋಗಿ ಕೆಮ್ಮಿದಾಗ, ಕಠಿನ ಕೆಲಸ ಮಾಡುವಾಗ ಅಥವಾ ಭಾರ ಎತ್ತಿದಾಗ ಇದು ಎದ್ದು ಕಾಣಬಹುದು. ಆರಂಭಿಕ ಹಂತದಲ್ಲಿ ಇದು ರೋಗಿ ಮಲಗಿದಾಗ ಕಡಿಮೆಯಾಗಬಹುದು ಅಥವಾ ಮಾಯವಾಗಬಹುದು. ಬಹುತೇಕ ಊತಗಳು/ ಗಂಟುಗಳು ತೊಡೆ ಸಂಧಿ ಭಾಗದಲ್ಲಿ ಕಾಣಿಸುತ್ತವೆ, ಆದರೆ ಹೊಟ್ಟೆಯ ಭಾಗದಲ್ಲಿ, ಸಾಮಾನ್ಯವಾಗಿ ಹೊಕ್ಕುಳು, ಹೊಟ್ಟೆಯ ಮಧ್ಯಭಾಗ ಅಥವಾ ಹೊಟ್ಟೆಯ ಯಾವುದೇ ಭಾಗದಲ್ಲಿ ಕೂಡ ಕಂಡುಬರಬಹುದು. ಇಂತಹ ಊತ/ ಗಂಟುಗಳು ಕಂಡುಬಂದಾಗ ಸಾಮಾನ್ಯವಾಗಿ ರೋಗಿಗಳು ಸೌಂದರ್ಯಕ್ಕೆ ಕೊರತೆಯಾಗುವ ಕಾರಣಕ್ಕೆ ವೈದ್ಯರನ್ನು ಸಂಪರ್ಕಿಸುತ್ತಾರೆ.

2. ನೋವು ಅಥವಾ ಮೃದುವಾಗಿರುವುದು ಅಪರೂಪಕ್ಕೆ ಹರ್ನಿಯಾ ನೋವಿನಿಂದ ಕೂಡಿರಬಹುದು. ಕೆಲವೊಮ್ಮೆ ಇಂತಹ ಗಂಟುಗಳಿಂದಾಗಿ ಕಿರಿಕಿರಿ, ನೋವು ಅಥವಾ ಭಾರವಾಗಿರುವ ಅನುಭವ ಉಂಟಾಗಬಹುದು. ಕೆಮ್ಮುವುದು, ಬಾಗುವುದು, ಭಾರ ಎತ್ತುವುದು ಅಥವಾ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳ ಸಂದರ್ಭದಲ್ಲಿ ಈ ಲಕ್ಷಣಗಳು ಉಲ್ಬಣಿಸುತ್ತವೆ.

3. ಇತರ ಲಕ್ಷಣಗಳು ಹೆಚ್ಚು ತೀವ್ರತೆಯ ಪ್ರಕರಣಗಳಲ್ಲಿ, ವಾಕರಿಕೆ, ವಾಂತಿ, ಮಲಬದ್ಧತೆ/ ನೀರಾದ ಮಲ ವಿಸರ್ಜನೆಗಳ ಜತೆಗೆ ತೀವ್ರ ನೋವು ಹಾಗೂ ಗಂಟನ್ನು ಒಳಕ್ಕೆ ತಳ್ಳಲು ಸಾಧ್ಯವಾಗದಿರುವುದು ಕಂಡುಬರಬಹುದು. ಇದು ಸಂಕೀರ್ಣ ಹರ್ನಿಯಾ ಪ್ರಕರಣ ಆಗಿರಬಹುದಾಗಿದ್ದು, ಇದಕ್ಕೆ ತತ್‌ಕ್ಷಣ ಚಿಕಿತ್ಸೆಯ ಅಗತ್ಯವಿರುತ್ತದೆ.

ಹರ್ನಿಯಾ ಬೆಳವಣಿಗೆಯನ್ನು ತಡೆಯುವುದು ಹೇಗೆ.?

• ಹರ್ನಿಯಾ ಉಂಟಾಗುವ ಅಪಾಯ ಇದ್ದರೆ ಅಥವಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ ಭಾರ ಎತ್ತಬಾರದು: ಭಾರ ಎತ್ತುವುದು, ಕಠಿನ ಕೆಲಸ ಮಾಡಬಾರದು.

ಆಧಾರ ಸ್ನಾಯುಗಳನ್ನು ಬಲಪಡಿಸಿ : ಹೊಟ್ಟೆ ಮತ್ತು ಬೆನ್ನನ್ನು ಬಲಪಡಿಸುವ ವ್ಯಾಯಾಮ ಮಾಡಬೇಕು, ಆದರೆ ಊತವನ್ನು ಮತ್ತು ಹರ್ನಿಯಾ ಹೆಚ್ಚಲು ಕಾರಣವಾಗಬಲ್ಲ ವ್ಯಾಯಾಮ ಮಾಡಬಾರದು (ಉದಾ., ಭಾರತ ಎತ್ತುವುದು, ಹೊಟ್ಟೆಯ ಕೆಲವು ವ್ಯಾಯಾಮಗಳು).

ಆರೋಗ್ಯಕರ ದೇಹತೂಕ ಕಾಪಾಡಿಕೊಳ್ಳಬೇಕು : ಅತಿಯಾದ ದೇಹತೂಕವು ಆಧಾರ ಸ್ನಾಯುಗಳ ದೃಢತೆಯನ್ನು ಕುಗ್ಗಿಸುವುದು ಮಾತ್ರವಲ್ಲದೆ ಹೊಟ್ಟೆಯ ಮೇಲೆ ಹೆಚ್ಚುವರಿ ಭಾರ ಉಂಟು ಮಾಡಿ ಹರ್ನಿಯಾ ತಲೆದೋರುವ ಅಪಾಯವನ್ನು ಹೆಚ್ಚಿಸುತ್ತದೆ.

ಮಲಬದ್ಧತೆ ಮತ್ತು ಮೂತ್ರಾಂಗ ಲಕ್ಷಣಗಳಿಗೆ ಚಿಕಿತ್ಸೆ ಪಡೆಯಬೇಕು : ದೀರ್ಘ‌ಕಾಲೀನ ಮಲಬದ್ಧತೆಯು ಮಲ ವಿಸರ್ಜನೆಯ ಸಂದರ್ಭದಲ್ಲಿ ಹೊಟ್ಟೆಯ ಭಾಗಕ್ಕೆ ಶ್ರಮ ಉಂಟಾಗುವಂತೆ ಮಾಡುವ ಮೂಲಕ ಹರ್ನಿಯಾ ತಲೆದೋರುವ ಅಪಾಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಪ್ರೊಸ್ಟೇಟಿಕ್‌ ಲಕ್ಷಣಗಳನ್ನು ಹೊಂದಿರುವವವರು ಕೂಡ ಹರ್ನಿಯಾಕ್ಕೆ ತುತ್ತಾಗುವ ಅಪಾಯಕ್ಕೀಡಾಗುತ್ತಾರೆ.

ಹೊಟ್ಟೆ, ತೊಡೆಸಂಧಿಯ ಊತಗಳು, ಹರ್ನಿಯಾ ನಿರ್ವಹಣೆ ಹೇಗೆ.?

1. ಸ್ವಯಂ ತಪಾಸಣೆ : ಬಹುತೇಕ ಹರ್ನಿಯಾಗಳು ವಯಸ್ಕರಲ್ಲಿ ಮತ್ತು ವೃದ್ಧಾಪ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ಹರ್ನಿಯಾ ಸಾಮಾನ್ಯವಾಗಿ ಕಂಡುಬರುವ ದೇಹಭಾಗಗಳ ಕೂಲಂಕಷ ಸ್ವಯಂ ತಪಾಸಣೆಯಿಂದ ಬೇಗನೆ ಪತ್ತೆಹಚ್ಚಬಹುದಾಗಿದೆ. ಸೂಕ್ಷ್ಮವಾದ ಲಕ್ಷಣಗಳಿದ್ದರೂ ಕೂಡ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

2. ವೈದ್ಯರನ್ನು ಸಂಪರ್ಕಿಸಿ : ಊತ ಕಂಡುಬಂದರೆ, ವಿಶೇಷವಾಗಿ ನೋವು ಅಥವಾ ತೊಂದರೆ ಕೂಡ ಇದ್ದರೆ ಸರಿಯಾದ ರೋಗಪತ್ತೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಸಾಮಾನ್ಯವಾಗಿ ದೈಹಿಕ ಪರೀಕ್ಷೆಯನ್ನು ನಡೆಸುತ್ತಾರೆ ಮತ್ತು ಅಲ್ಟ್ರಾಸೌಂಡ್‌ ಯಾ ಸಿಟಿ ಸ್ಕ್ಯಾನ್‌ನಂತಹ ಪರೀಕ್ಷೆಗಳ ಮೂಲಕ ಹರ್ನಿಯಾದ ವಿಧ ಮತ್ತು ತೀವ್ರತೆಯನ್ನು ತಿಳಿದುಕೊಳ್ಳುತ್ತಾರೆ. 50 ವರ್ಷ ವಯಸ್ಸಿನ ಬಳಿಕ ಸರ್ಜನ್‌ ಬಳಿ ನಿಯಮಿತವಾಗಿ ವಾರ್ಷಿಕ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

3. ಶಸ್ತ್ರಚಿಕಿತ್ಸೇತರ ನಿರ್ವಹಣೆ (ತಾತ್ಕಾಲಿಕ ಪರಿಹಾರ) ಹರ್ನಿಯಾ ಬೆಲ್ಟ್ : ಇದೊಂದು ಹಳೆಯ ಕಾಲದ ಪದ್ಧತಿಯಾಗಿದ್ದು, ಇದರಲ್ಲಿ ಹರ್ನಿಯಾ ತಲೆದೋರಿರುವ ಭಾಗಕ್ಕೆ ವಿಶೇಷ ಬೆಲ್ಟ್ ಕಟ್ಟಿಕೊಳ್ಳುವ ಮೂಲಕ ಅಲ್ಲಿಗೆ ಆಧಾರ ನೀಡಿ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತದೆ. ಇದು ಊತವನ್ನು ಹಿಡಿದಿಟ್ಟುಕೊಳ್ಳುತ್ತದೆ, ಆದರೆ ಶಾಶ್ವತ ಪರಿಹಾರ ಅಲ್ಲ.

ನೋವು ನಿರ್ವಹಣೆ : ನೋವು, ತೊಂದರೆಯ ಉಪಶಮನಕ್ಕೆ ನೋವು ನಿವಾರಕಗಳನ್ನು ಉಪಯೋಗಿಸಬಹುದು. ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಹರ್ನಿಯಾ ಗುಣವಾಗುವುದೇ ಎಂಬ ಸಂಶಯ ಅನೇಕ ರೋಗಿಗಳಲ್ಲಿರುತ್ತದೆ. ಆದರೆ ಹರ್ನಿಯಾವನ್ನು ಗುಣಪಡಿಸಲು ಯಾವುದೇ ಔಷಧಗಳಿಲ್ಲ. ಇದು ಶಸ್ತ್ರಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಹುದಾದ ಅನಾರೋಗ್ಯವಾಗಿದೆ.

4. ಶಸ್ತ್ರಚಿಕಿತ್ಸೆ : ಹರ್ನಿಯಾ ಶಸ್ತ್ರಚಿಕಿತ್ಸೆಯಿಂದ ಮಾತ್ರ ಗುಣಪಡಿಸಹುದಾದ ಸಮಸ್ಯೆಯಾಗಿದೆ. ಊತ ಅಥವಾ ಗಂಟಿನಲ್ಲಿರುವ ಅಂಶಗಳನ್ನು ಅವು ಎಲ್ಲಿಂದ ಬಂದಿವೆಯೋ ಅಲ್ಲಿಗೆ ಮರಳಿ ಸೇರಿಸಬೇಕಾಗುತ್ತದೆ. ಬಳಿಕ ಆ ಅವಕಾಶ/ ರಂಧ್ರವನ್ನು ಹೊಲಿಗೆಯ ಮೂಲಕ ಮುಚ್ಚಿ ಆ ಭಾಗಕ್ಕೆ ಹೆಚ್ಚುವರಿ ಬಲ ಒದಗಿಸಲು ಹಾಗೂ ಹರ್ನಿಯಾ ಮರುಕಳಿಸದಿರಲು ಮೆಶ್‌ನಂತಹ ಪ್ರೊಸ್ಥೆಸಿಸ್‌ ಗಳ ಮೂಲಕ ಬಲಪಡಿಸಬೇಕಾಗುತ್ತದೆ. ತೆರೆದ ಅಥವಾ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯಂತಹ ವಿವಿಧ ಆಯ್ಕೆಗಳು ಲಭ್ಯವಿವೆ.

ಹರ್ನಿಯೊರಪಿ : ಇದು ಹರ್ನಿಯಾವನ್ನು ಸರಿಪಡಿಸಲು ಅನುಸರಿಸುವ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಧಾನ. ಉಬ್ಬಿದ ಅಂಗಾಂಶವನ್ನು ಅದರ ಮೂಲಸ್ಥಾನಕ್ಕೆ ತಳ್ಳಿ, ಸ್ನಾಯುಭಿತ್ತಿಯನ್ನು ಹೊಲಿಯಲಾಗುತ್ತದೆ. ಹರ್ನಿಯೊಪ್ಲಾಸ್ಟಿ: ಇದು ಅತೀ ಸಾಮಾನ್ಯವಾಗಿ ಅನುಸರಿಸುವ ಮತ್ತು ಪರಿಣಾಮಕಾರಿ ಶಸ್ತ್ರಚಿಕಿತ್ಸೆಯಾಗಿದ್ದು, ಇದರಲ್ಲಿ ಮೆಶ್‌ ಅಳವಡಿಸುವ ಮೂಲಕ ಹರ್ನಿಯಾ ಕಾಣಿಸಿಕೊಂಡ ಭಾಗಕ್ಕೆ ಆಧಾರ ನೀಡಲಾಗುತ್ತದೆ.

ಲ್ಯಾಪರೊಸ್ಕೋಪಿಕ್‌/ ರೊಬಾಟಿಕ್‌ ಶಸ್ತ್ರಚಿಕಿತ್ಸೆ : ಇದು ಅತೀ ಕಡಿಮೆ ನೋವಿನ ಆಯ್ಕೆಯಾಗಿದ್ದು, ಹರ್ನಿಯಾವನ್ನು ಸರಿಪಡಿಸಲು ಕಿರು ಗಾಯವನ್ನಷ್ಟೇ ಮಾಡಲಾಗುತ್ತದೆ. ಸಂಕೀರ್ಣವಾದ ಹರ್ನಿಯಾ ಪ್ರಕರಣಗಳನ್ನು ಸರಿಪಡಿಸಲು ಇದು ಅತೀ ಹೆಚ್ಚು ಅನುಸರಣೆಯಾಗುವ ಶಸ್ತ್ರಚಿಕಿತ್ಸೆಯಾಗಿದ್ದು, ರೋಗಿಸ್ನೇಹಿಯಾದ ಮತ್ತು ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಗುವಂತ ಕಡಿಮೆ ಗಾಯದ ಮೂಲಕ ನಿರ್ವಹಿಸಲಾಗುತ್ತದೆ.

5. ಶಸ್ತ್ರಚಿಕಿತ್ಸೆಯ ಬಳಿಕ ಆರೈಕೆ : ಸರಿಪಡಿಸಲ್ಪಟ್ಟ ಭಾಗವು ಗುಣ ಹೊಂದಲು ಮತ್ತು ಬಲಗೊಳ್ಳಲು ಕನಿಷ್ಠ 1-2 ತಿಂಗಳು ತಗಲುವುದರಿಂದ ಶಸ್ತ್ರಚಿಕಿತ್ಸೆಯ ಬಳಿಕ ಭಾರ ಎತ್ತಬಾರದು ಇತ್ಯಾದಿ ವೈದ್ಯರ ಸೂಚನೆಗಳನ್ನು ಪಾಲಿಸಬೇಕು. ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಮತ್ತು ಹರ್ನಿಯಾ ಮರುಕಳಿಸುವುದನ್ನು ತಡೆಯಲು ನಿಧಾನವಾಗಿ ಸಹಜ ಚಟುವಟಿಕೆಗಳನ್ನು ಆರಂಭಿಸುವುದು ಮತ್ತು ದೈಹಿಕ ಥೆರಪಿಗಳನ್ನು ವೈದ್ಯರು ಶಿಫಾರಸು ಮಾಡಬಹುದಾಗಿದೆ.

-ಡಾ| ಅವಿನಾಶ್‌ ಕೆ.
ಕನ್ಸಲ್ಟಂಟ್‌ ಮಿನಿಮಲ್‌ ಆಯಕ್ಸೆಸ್‌
ಮತ್ತು ಜನರಲ್‌ ಸರ್ಜನ್‌
ಕೆಎಂಸಿ ಆಸ್ಪತ್ರೆ,
ಡಾ| ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಜನರಲ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)


Spread the love

Leave a Reply