ಉತ್ತರ ಪ್ರದೇಶದ ಆಗ್ರಾದ ಸರಾಫಾ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರ ಮಗುವಿನ ಬಣ್ಣವನ್ನು ನೋಡಿ ಸಾರ್ವಜನಿಕರು ಮಗು ಅಪಹರಣವಾಗಿರಬಹುದು ಎಂದು ಶಂಕಿಸಿದ ಘಟನೆ ನಡೆದಿದೆ. ಮಾರುಕಟ್ಟೆಯ ನಮಕ್ ಕಿ ಮಂಡಿ ಪ್ರದೇಶದಲ್ಲಿ ನಡೆದ ಈ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು.
ಗುರುವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಮಾರುಕಟ್ಟೆಯಲ್ಲಿ ತಿನ್ನಲು ಆಹಾರ ನೀಡುವಂತೆ ಕೇಳುತ್ತಿದ್ದರು. ಆದರೆ, ಆ ಮಹಿಳೆಯ ಮೈಬಣ್ಣಕ್ಕೂ ಆಕೆ ಎತ್ತಿಕೊಂಡಿದ್ದ ಮಗುವಿನ ಅತ್ಯಂತ ಬಿಳಿ ಬಣ್ಣಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸಂಶಯಗೊಂಡು ಮಹಿಳೆಯನ್ನು ಪ್ರಶ್ನಿಸಲು ಶುರು ಮಾಡಿದರು. ಮಗುವಿನ ಹೆಸರನ್ನು ಕೇಳಿದಾಗ ಮಹಿಳೆ ಗಾಬರಿಯಿಂದ ಉತ್ತರಿಸಿದ್ದು, ಆಹಾರವನ್ನೂ ಪಡೆಯದೆ ಅಲ್ಲಿಂದ ಹೊರಡಲು ಯತ್ನಿಸಿದಾಗ ಜನರ ಸಂಶಯ ಇನ್ನಷ್ಟು ಬಲವಾಗಿದೆ. ಮಗು ಅಪಹರಣವಾಗಿರಬಹುದು ಎಂದು ಭಾವಿಸಿದ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ಈ ವೇಳೆ ಅಸಲಿ ವಿಷಯ ಬೆಳಕಿಗೆ ಬಂದಿದೆ. ಮಹಿಳೆಯು ಎಸ್ಎನ್ ವೈದ್ಯಕೀಯ ಕಾಲೇಜಿನ ಬಳಿಯ ಗುಡಿಸಲಿನಲ್ಲಿ ವಾಸವಿದ್ದು, ಆಕೆಯ ಪತಿ ದಿನಗೂಲಿ ಕಾರ್ಮಿಕನಾಗಿದ್ದಾನೆ. ಈ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಈ ಮಗು ಕೂಡ ಆಕೆಯದ್ದೇ ಎಂದು ಮಹಿಳೆ ತಿಳಿಸಿದ್ದಾಳೆ.
ಜೊತೆಗೆ ಪೊಲೀಸರು ಮಗುವಿನ ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದರು. ಮಹಿಳೆಯು ಮಗುವಿನ ಅಸಲಿ ದಾಖಲೆಗಳನ್ನು ಹಾಜರುಪಡಿಸಿದ ಬಳಿಕ, ಮಗು ಆಕೆಯದ್ದೇ ಎಂಬುದು ದೃಢಪಟ್ಟಿದೆ. ಯಾವುದೇ ಕಾನೂನುಬಾಹಿರ ಕೃತ್ಯ ನಡೆಯದಿರುವುದು ಖಚಿತವಾದ ನಂತರ ಪೊಲೀಸರು ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ.