ನಮ್ಮ ದೇಹದಲ್ಲಿ ಮೂತ್ರಪಿಂಡಗಳು (Kidney’s) ಕ್ಷಣಮಾತ್ರವೂ ವಿಶ್ರಾಂತಿ ಪಡೆಯದೆ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತವೆ. ರಕ್ತದಲ್ಲಿನ ತ್ಯಾಜ್ಯಗಳನ್ನು ಶೋಧಿಸುವುದರಿಂದ ಹಿಡಿದು, ದೇಹದ ದ್ರವ ಸಮತೋಲನ, ರಕ್ತದೊತ್ತಡ (Blood Pressure) ನಿಯಂತ್ರಣ ಹಾಗೂ ಕೆಂಪು ರಕ್ತಕಣಗಳ ಉತ್ಪಾದನೆಗೆ (Produce) ಸಹಾಯ ಮಾಡುವವರೆಗೂ ಮೂತ್ರಪಿಂಡಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಇಷ್ಟೊಂದು ಜವಾಬ್ದಾರಿ ಹೊತ್ತಿರುವ ಮೂತ್ರಪಿಂಡಗಳನ್ನು ನಾವು ಸರಿಯಾಗಿ ನೋಡಿಕೊಳ್ಳದಿದ್ದರೆ, ಅದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಯತ್ನಿಸೋಣ ಬನ್ನಿ.
ಹಲವಾರು ಸಮಸ್ಯೆಗಳಿಗೆ ನೀರೆ ಮದ್ದು!
ಅನಾರೋಗ್ಯಕರ ಆಹಾರ ಪದ್ಧತಿ, ಸಾಕಷ್ಟು ನೀರು ಕುಡಿಯದಿರುವುದು, ದೀರ್ಘಕಾಲದ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಸಮಸ್ಯೆಗಳು ಮೂತ್ರಪಿಂಡಗಳ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತವೆ. ಇದರ ಪರಿಣಾಮವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಮೂತ್ರಪಿಂಡದ ಕಲ್ಲುಗಳು ಮತ್ತು ಕೊನೆಗೆ ಮೂತ್ರಪಿಂಡ ವೈಫಲ್ಯದವರೆಗೂ ಪರಿಸ್ಥಿತಿ ತಲುಪಬಹುದು.
ಸಕಾಲಿಕ ಚಿಕಿತ್ಸೆ ಅಗತ್ಯ!
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಸಮಸ್ಯೆಯೆಂದರೆ *ಮಧುಮೇಹ ಮೂತ್ರಪಿಂಡ ಕಾಯಿಲೆ (Diabetic Kidney Disease – DKD). ಮಧುಮೇಹ ಹೊಂದಿರುವ ಲಕ್ಷಾಂತರ ಜನರಿಗೆ ಇದು ಗಂಭೀರ ತೊಡಕಾಗಿ ಪರಿಣಮಿಸಿದೆ. ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಡಿಕೆಡಿ ನಿಧಾನವಾಗಿ ಮೂತ್ರಪಿಂಡ ವೈಫಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಹಂತದಲ್ಲಿ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅನಿವಾರ್ಯವಾಗಬಹುದು. ಆದ್ದರಿಂದ ಸಕಾಲಿಕ ಚಿಕಿತ್ಸೆ ಪಡೆದು, ಆರೋಗ್ಯ ಹತೋಟಿಯಲ್ಲಿಟ್ಟುಕೊಳ್ಳುವುದೇ ಉತ್ತಮ ಎನ್ನುವುದು ಮೇಲ್ನೋಟಕ್ಕೆ ಕಾರಣವಾಗಬಹುದು.
ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಿ!
ಟೈಪ್ 1 ಹಾಗೂ ಟೈಪ್ 2 ಮಧುಮೇಹ ಇರುವವರಲ್ಲಿ ಡಿಕೆಡಿ ಸಾಮಾನ್ಯವಾಗಿ ಕಂಡುಬರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ದೀರ್ಘಕಾಲ ಹೆಚ್ಚು ಇದ್ದರೆ, ಮೂತ್ರಪಿಂಡಗಳಲ್ಲಿರುವ ಸಣ್ಣ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಕಿಡ್ನಿಗಳು ತ್ಯಾಜ್ಯಗಳನ್ನು ಸರಿಯಾಗಿ ಫಿಲ್ಟರ್ ಮಾಡಲು ವಿಫಲವಾಗುತ್ತವೆ. ಪರಿಣಾಮವಾಗಿ ಮೂತ್ರದಲ್ಲಿ ಪ್ರೋಟೀನ್ ಸೋರಿಕೆ ಆರಂಭವಾಗಿ, ಕಾಲಾನಂತರದಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಕುಸಿಯುತ್ತದೆ. ಡಿಕೆಡಿಯ ದೊಡ್ಡ ಸವಾಲೆಂದರೆ, ಇದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಕಷ್ಟ. ಸಾಮಾನ್ಯವಾಗಿ ಬಳಸುವ ಇಜಿಎಫ್‌ಆರ್ ಅಥವಾ ಮೂತ್ರದ ಅಲ್ಬುಮಿನ್ ಪರೀಕ್ಷೆಗಳಲ್ಲಿ ಈ ಕಾಯಿಲೆ ಬೇಗನೆ ಗೋಚರಿಸುವುದಿಲ್ಲ. ಆದರೆ ಇತ್ತೀಚಿನ ಸಂಶೋಧನೆಗಳು ಡಿಕೆಡಿಯನ್ನು ಮೊದಲೇ ಗುರುತಿಸಲು ಸಹಾಯಕವಾಗುವ ಹೊಸ ಮಾರ್ಗವನ್ನು ಸೂಚಿಸಿವೆ.
ಡಿಕೆಡಿಯಿಂದ ಹೆಚ್ಚಿನ ಅಪಾಯ!
ವಿಜ್ಞಾನಿಗಳು ಕೆಂಪು ರಕ್ತಕಣಗಳ ವಿತರಣಾ ಅಗಲ-ಆಲ್ಬುಮಿನ್ ಅನುಪಾತ (Red Cell Distribution Width-to-Albumin Ratio – RAR) ಎಂಬ ಹೊಸ ರಕ್ತದ ಮಾರ್ಕರ್ ಅನ್ನು ಗುರುತಿಸಿದ್ದಾರೆ. ಈ RAR ಮಧುಮೇಹ ಹೊಂದಿರುವ ವಯಸ್ಕರಲ್ಲಿ ಡಿಕೆಡಿಯ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ ಎಂದು ಅಧ್ಯಯನ ತಿಳಿಸಿವೆ.
ಹಾನಿಯ ಸೂಚನೆ ಏನು ಗೊತ್ತಾ.?
RAR ಎನ್ನುವುದು RDW ಮತ್ತು ಸೀರಮ್ ಅಲ್ಬುಮಿನ್ ಎಂಬ ಎರಡು ಸಾಮಾನ್ಯ ರಕ್ತಪರೀಕ್ಷೆಗಳ ಸಂಯೋಜನೆಯಾಗಿದೆ. RDW ದೇಹದಲ್ಲಿನ ಉರಿಯೂತ ಮತ್ತು ಪೌಷ್ಟಿಕಾಂಶದ ಕೊರತೆಯ ಸುಳಿವು ನೀಡುತ್ತದೆ. ಅಲ್ಬುಮಿನ್ ಮಟ್ಟ ಕಡಿಮೆಯಾದರೆ ದೇಹದ ಪೋಷಣಾ ಸ್ಥಿತಿ ಮತ್ತು ದೀರ್ಘಕಾಲದ ಕಾಯಿಲೆಗಳ ಸೂಚನೆ ಸಿಗುತ್ತದೆ. RDW ಅಧಿಕವಾಗಿದ್ದು, ಅಲ್ಬುಮಿನ್ ಕಡಿಮೆಯಾಗಿದ್ದರೆ RAR ಹೆಚ್ಚಾಗುತ್ತದೆ. ಇದು ಮೂತ್ರಪಿಂಡ ಹಾನಿಯ ಅಪಾಯ ಹೆಚ್ಚಿದೆ ಎಂಬ ಸೂಚನೆಯಾಗಿರುತ್ತದೆ. ಮಧುಮೇಹಿಗಳಲ್ಲಿ RAR ಅನ್ನು ಬೇಗನೆ ಗುರುತಿಸುವುದರಿಂದ ಆಹಾರ ಪದ್ಧತಿಯಲ್ಲಿ ಬದಲಾವಣೆ, ರಕ್ತದ ಸಕ್ಕರೆ ನಿಯಂತ್ರಣ, ರಕ್ತದೊತ್ತಡದ ಚಿಕಿತ್ಸೆ ಮತ್ತು ಮೂತ್ರಪಿಂಡ ರಕ್ಷಕ ಔಷಧಿಗಳ ಮೂಲಕ ಡಿಕೆಡಿಯ ತೀವ್ರತೆಯನ್ನು ಕಡಿಮೆ ಮಾಡಬಹುದು. RAR ಪತ್ತೆಹಚ್ಚಲು ಅಗತ್ಯವಿರುವ RDW ಮತ್ತು ಅಲ್ಬುಮಿನ್ ಪರೀಕ್ಷೆಗಳು ಸಾಮಾನ್ಯ ರಕ್ತಪರೀಕ್ಷೆಗಳಾಗಿದ್ದು, ಸಣ್ಣ ಲ್ಯಾಬ್‌ಗಳಲ್ಲಿಯೂ ಸುಲಭವಾಗಿ ಲಭ್ಯವಿರುವುದು ಇದಕ್ಕೆ ಮತ್ತೊಂದು ದೊಡ್ಡ ಲಾಭವಾಗಿದೆ.
ಸಕ್ಕರೆ ಕಾಯಿಲೆ ಇದ್ದರೆ ಕಿಡ್ನಿ ಅಪಾಯ ಹೆಚ್ಚಾ? ವಿಜ್ಞಾನಿಗಳು ಹೇಳುತ್ತಿರುವ ಹೊಸ ಸತ್ಯ ಏನು?
WhatsApp Group
Join Now