ಅಪರಾಧಗಳಲ್ಲಿ ಪೊಲೀಸರು ಭಾಗಿಯಾಗಿದ್ದರೆ ಮುಲ್ಲಾಜಿಲ್ಲದೆ ಸೇವೆಯಿಂದ ವಜಾ ಎಂದ ಗೃಹ ಸಚಿವ ಪರಮೇಶ್ವರ್‌

Spread the love

ಪೊಲೀಸ್‌‍ ಸಿಬ್ಬಂದಿ ಮತ್ತು ಅಧಿಕಾರಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲ್ಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ದರೋಡೆ ಪ್ರಕರಣದಲ್ಲಿ ಮತ್ತು ಕೊರಮಂಗಲ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಮಾಲೂರು ಪೊಲೀಸ್‌‍ ಠಾಣೆಯ ಕಾನ್ಸ್ ಟೆಬಲ್‌ ಭಾಗಿಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಮುಂದೆ ಮತ್ತಷ್ಟು ಎಚ್ಚರಿಕೆಯಿಂದ ಇರುವಂತೆ ಪೊಲೀಸ್‌‍ ಸಿಬ್ಬಂದಿಗಳಿಗೆ ಸೂಚನೆ ನೀಡುತ್ತೇನೆ. ಅಪರಾಧ ಕೃತ್ಯಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡು ಬಂದರೆ ಮುಲಾಜಿಲ್ಲದೆ ಸೇವೆಯಿಂದ ವಜಾ ಗೊಳಿಸಲಾಗುವುದು. ಕೋರಮಂಗಲದಲ್ಲಿ ಪತ್ತೆಯಾದ ಪ್ರಕರಣದಲ್ಲೂ ಮಾಲೂರು ನಗರ ಠಾಣೆಯ ಪೊಲೀಸ್‌‍ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಅವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನಡೆದಿದ್ದ 7.11 ಕೋಟಿ ದರೋಡೆ ಪ್ರಕರಣದಲ್ಲಿ ಪೊಲೀಸ್‌‍ ಕಾನ್‌ಸ್ಟೇಬಲ್‌ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. 6.29 ಕೋಟಿ ಹಣವನ್ನು ವಸೂಲಿ ಮಾಡಲಾಗಿದೆ. ಮೂರ್ನಾಲ್ಕು ತಂಡಗಳನ್ನಾಗಿ ರಚಿಸಿ ಆರೋಪಿಗಳನ್ನು ಕ್ಷೀಪ್ರಗತಿಯಲ್ಲಿ ಬಂಧಿಸಲಾಗಿದೆ. ಪೊಲೀಸ್‌‍ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 200ಕ್ಕೂ ಹೆಚ್ಚು ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.

ದರೋಡೆ ಪ್ರಕರಣ ಬೆಂಗಳೂರಿಗೆ ಕೆಟ್ಟ ಹೆಸರು ತಂದಿತ್ತು. ಬೆಂಗಳೂರು ಪೊಲೀಸರು ಸಮರ್ಥರಿದ್ದಾರೆ. ಆರೋಪಿಗಳನ್ನು ಬಂಧಿಸಿಯೇ ಬಂಧಿಸುತ್ತಾರೆ ಎಂಬ ವಿಶ್ವಾಸ ತಮಗಿತ್ತು. ಅದರಂತೆ ಪೊಲೀಸರು ತಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ ಎಂದರು.
ಸವಾಲಿನ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಾಂತ್ರಿಕವಾಗಿ ಮತ್ತು ಬುದ್ಧಿ ಉಪಯೋಗಿಸಿ ಪ್ರಕರಣ ಭೇದಿಸಿದ್ದಾರೆ. ದರೋಡೆಕೋರರು ಕೂಡ ಬಹಳ ಬುದ್ಧಿವಂತಿಕೆ ಪ್ರದರ್ಶಿಸಿದರು. ಹಲವು ವಾಹನಗಳಿಗೆ ಹಣ ಬದಲಾವಣೆ ಮಾಡಿ ಸಾಗಿಸಲಾಗಿತ್ತು ಎಂದು ವಿವರಿಸಿದರು.

ದರೋಡೆ ಪ್ರಕರಣದ ಭೇದಿಸಿದ್ದರಿಂದಾಗಿ ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಒಳ್ಳೆಯ ಹೆಸರು ಬಂದಿದೆ. ಇಡೀ ರಾಜ್ಯವೇ ಈ ಪ್ರಕರಣದ ಮೇಲೆ ತೀವ್ರ ನಿಗಾ ವಹಿಸಿತ್ತು ಎಂದರು.
ಸಿಎಂಎಸ್‌‍ ಸಂಸ್ಥೆ ಲೋಪ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರ್‌ಬಿಐ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ವಿಚಾರಣೆ ನಡೆಸಿ ಲೋಪಗಳು ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು.

WhatsApp Group Join Now

Spread the love

Leave a Reply