ಮೂವರು ಸಹೋದರರು ದುರಂತ ಸಾವು : IAS ಅಧಿಕಾರಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು, ಸಿಎಂ ಸೇರಿ ಹಲವರಿಂದ ಸಂತಾಪ

Spread the love

ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಗೌನಹಳ್ಳಿ ಕ್ರಾಸ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. 51 ವರ್ಷದ ಬೀಳಗಿ ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಏಕಾಏಕಿ ನಾಯಿ ಅಡ್ಡ ಬಂದಿದ್ದು, ಅದನ್ನು ಉಳಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.

ಘಟನೆಯಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮಹಾಂತೇಶ್ ಬೀಳಗಿ ಮತ್ತು ಅವರ ಇಬ್ಬರು ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತಪಟ್ಟಿದ್ದಾರೆ. ಮೂವರು ಸಹೋದರರು ಸಂಬಂಧಿಕರ ಮದ್ವೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ

ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೂವರು ಸಹೋದರರು ದುರಂತ ಅಂತ್ಯ ಕಂಡಿದ್ದಾರೆ

ಇನ್ನು ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮಹಾಂತೇಶ್ ಬೀಳಗಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಐಜಿಪಿ ಶಾಂತನು ಸಿನ್ಹಾ, ಕಲಬುರಗಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ‌ದೌಡಾಯಿಸಿದ್ದಾರೆ.

ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ ಸಹ ಆಗಿದ್ದರು. ಅಲ್ಲದೇ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು.

ಮಹಾಂತೇಶ್ ಬೀಳಗಿ ಸಾವು ನೋವುಂಟು ಮಾಡಿದೆ.

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ನೋವುಂಟು ಮಾಡಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಮಹಾಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಹಾಂತೇಶ ನಿಧನರಾಗಿರುವುದು ಅತ್ಯಂತ ದುಃಖಕರ

ಮಹಾಂತೇಶ್ ನಿಧನ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ , ಸಮಾಜಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿಗಳಾದ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು, ಜೊತೆಗೆ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಜನಪರ ಕಾರ್ಯಗಳ‌ ಮೂಲಕ ಹೆಸರುವಾಸಿಯಾಗಿದ್ದ ದಕ್ಷ ಅಧಿಕಾರಿಯ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ‌ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ರಾಜ್ಯ ದಕ್ಷ ಮತ್ತು ಉತ್ತಮ ಅಧಿಕಾರಿಯನ್ನು ಕಳೆದುಕೊಂಡಿದೆ

ಮಹಾಂತೇಶ್ ಬೀಳಗಿ ಸಾವಿಗೆ ತೀವ್ರ ನೋವು ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಹಾಂತೇಶ್ ಬೀಳಗಿ ಕಾರಿನಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೂ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಹಿರಿಯ IAS ಅಧಿಕಾರಿ ಶ್ರೀ ಮಹಾಂತೇಶ್ ಬೀಳಗಿ ಅವರು ಕಲಬುರ್ಗಿ ಸಮೀಪ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ವಿಧಿವಶರಾದ ಸುದ್ದಿ ಅತೀವ ಆಘಾತವನ್ನು ಉಂಟುಮಾಡಿದೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಮಹಾಂತೇಶ್ ಬೀಳಗಿ ಅವರು ಈ ಹಿಂದೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಕಾಲಿಕ ನಿಧನದಿಂದ ರಾಜ್ಯ ಒಬ್ಬ ಹಿರಿಯ, ದಕ್ಷ, ಮತ್ತು ಉತ್ತಮ ಅಧಿಕಾರಿಯನ್ನು ಕಳೆದುಕೊಂಡಿದೆ. ಅಗಲಿದ ಹಿರಿಯ ಅಧಿಕಾರಿಯ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತಾ, ಅವರ ಕುಟುಂಬದ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನನ್ನ ತೀವ್ರ ಸಂತಾಪಗಳನ್ನು ಸಲ್ಲಿಸುತ್ತೇನೆ. ಈ ಭೀಕರ ಅಪಘಾತದಲ್ಲಿ ಶ್ರೀಯುತ ಬೀಳಗಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇನ್ನೂ ಇಬ್ಬರು ಕೂಡ ಸಾವನ್ನಪ್ಪಿದ್ದು, ಅವರಿಗೂ ದೇವರು ಸದ್ಗತಿಯನ್ನು ಕರುಣಿಸಲಿ, ಅವರ ಕುಟುಂಬದ ಸದಸ್ಯರಲ್ಲಿ ಕೂಡ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

WhatsApp Group Join Now

Spread the love

Leave a Reply