ಜಿಲ್ಲೆಯ ಜೇವರ್ಗಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಕಾರು ಪಲ್ಟಿ ಅಪಘಾತದಲ್ಲಿ ಎಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದರೆ, ಇವರ ಜತೆ ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ನಾಲ್ವರು ಮೃತಪಟ್ಟಂತಾಗಿದೆ.
ಈರಣ್ಣ ಶಂಕ್ರಪ್ಪ ಸಿರಸಂಗಿ (47) ಎನ್ನುವರೇ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಕ್ಕೊಳಗಾದ ಕಾರಿನ ಚಾಲಕ ಅರೋಕಿಯಾ ಅಂಥೋನಿರಾಜ್ ಗೆ ಚಿಕಿತ್ಸೆ ಮುಂದುವರೆದಿದೆ.
ಚಾಲಕನ ವಿರುದ್ಧ ಪ್ರಕರಣ ದಾಖಲು: ಎಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆಗೆ ಚಾಲಕ ತಮಿಳನಾಡು ಮೂಲದ ಅರೋಕಿಯಾ ಅಂಥೋನಿರಾಜ್ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದ ಆಗಿದೆ ಎಂದು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ನಗರದ ಬಸವೇಶ್ವರ ಕಾಲೋನಿಯ ಬಸವರಾಜ ಕಮರಡಗಿ ಎನ್ನುವರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಮಹಾಂತೇಶ ಬೀಳಗಿ ಅವರು ಮಲ್ಲಿಕಾರ್ಜುನ ಕಮರಡಗಿ ಮಕ್ಕಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಚಾಲಕ ತಮಿಳನಾಡಿನ ಪನ್ರುತಿ ಪಟ್ಟಣಕ್ಕೆ ಸೇರಿದವನಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖಾ ಕಾರ್ಯ ಚುರುಕುಗೊಂಡಿದೆ.