ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದ ಪತ್ನಿ, ಆಕೆ ಕುಟುಂಬದ 6 ಜನರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗಂಡ!

Spread the love

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಕ್ರೂರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದ ಪತ್ನಿ ಮತ್ತು ಆಕೆಯ ಕುಟುಂಬದ ಆರು ಮಂದಿಯ ಮೇಲೆ ಗಂಡ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.

ಡಿಸೆಂಬರ್ 10 ರಂದು ತೆಲಸಂಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ತಕ್ಷಣ ವಿಜಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಘಟನೆಯ ವಿವರ :

ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿ ಭೀಮಾ ಭೋಸಲೆ ಎಂಬಾತನ ಹೆಂಡತಿ ರಾಣಿ ಭೋಸಲೆ, ಗಂಡನ ಮನೆಯಲ್ಲಿ ನಡೆಯುತ್ತಿದ್ದ ನಿರಂತರ ಜಗಳ ಮತ್ತು ಕಿರುಕುಳವನ್ನು ತಾಳಲಾರದೇ ತೆಲಸಂಗ ಗ್ರಾಮದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದರು. ಇದರಿಂದ ಸಿಟ್ಟಿಗೆದ್ದ ಗಂಡ ಭೀಮಾ, ತನ್ನ ಪತ್ನಿಯ ಕುಟುಂಬಸ್ಥರ ಮೇಲೆ ಆಕ್ರೋಶಗೊಂಡಿದ್ದ.

‘ಬೇಡ ಅಂದ್ರೂ ನೀವು ಹೇಗೆ ನನ್ನ ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದೀರಿ?’ ಎಂದು ಪತ್ನಿಯ ಮನೆಯವರೊಂದಿಗೆ ಜಗಳ ತೆಗೆದ ಭೀಮಾ, ಕ್ರೌರ್ಯದ ಪರಮಾವಧಿಗೆ ತಲುಪಿದ್ದಾನೆ. ಕೋಪದ ಭರದಲ್ಲಿ ಮನೆಯೊಳಗೆ ನುಗ್ಗಿದ ಭೀಮಾ, ಅಲ್ಲಿದ್ದ ರಾಣಿ ಭೋಸಲೆ, ಸಂಜು ಸಾಳುಂಕೆ, ಶಂಕರ್ ಸಾಳುಂಕೆ, ಕೃಷ್ಣ ಸಾಳುಂಕೆ, ಅಂಕುಶ ಪಡತಾರೆ ಮತ್ತು ಮನೋಹರ ಪಡತಾರೆ ಸೇರಿದಂತೆ ಒಟ್ಟು 6 ಜನರ ಮೇಲೆ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿದ್ದಾನೆ.

ಕೊಲೆ ಯತ್ನ ಪ್ರಕರಣ ದಾಖಲು

ಭೀಮಾ ಭೋಸಲೆಯ ಈ ಕೃತ್ಯದಿಂದಾಗಿ ಆರು ಮಂದಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಕೂಡಲೇ ವಿಜಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪತ್ನಿ ಹಾಗೂ ಕುಟುಂಬದವರನ್ನು ಜೀವಂತವಾಗಿ ಸುಡಲು ಯತ್ನಿಸಿದ ಆರೋಪಿ ಭೀಮಾ ಭೋಸಲೆ ವಿರುದ್ಧ ಐಗಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹವು ಈ ಮಟ್ಟದ ಘೋರ ಅಪರಾಧಕ್ಕೆ ಕಾರಣವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶವನ್ನು ಮೂಡಿಸಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

WhatsApp Group Join Now

Spread the love

Leave a Reply