ಸರ್ಕಾರಿ ಕೆಲಸದಲ್ಲಿದ್ದ ಪತಿಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಪತಿಯ ಕೆಲಸ ಗಿಟ್ಟಿಸಿಕೊಂಡಿದ್ದ ಮಹಿಳೆಗೆ ಬರುವ ವೇತನದಲ್ಲಿ ಪತಿಯ ತಂದೆ ಅಂದರೆ ಮಾವನಿಗೆ 20 ಸಾವಿರ ನೀಡುವಂತೆ ರಾಜಸ್ಥಾನ ಹೈಕೋರ್ಟ್ನ ಜೋಧ್ಪುರ ಪೀಠವು ಮಹತ್ವದ ಆದೇಶ ನೀಡಿದೆ.
ಕೆಲಸ ಸಿಕ್ಕ ನಂತರ ಮಹಿಳೆ(ಸೊಸೆ) ಪತಿಯ ಪೋಷಕರನ್ನು ತೊರೆದು ಹೋಗಿದ್ದಲ್ಲದೇ ಅವರಿಗೆ ಯಾವುದೇ ಆರ್ಥಿಕ ನೆರವು ನೀಡುತ್ತಿರಲಿಲ್ಲ.
ರಾಜಸ್ಥಾನದ ಅಲ್ವಾರ್ದ ಖೇರ್ಲಿಯ ಭಗವಾನ್ ಸಿಂಗ್ ಅವರು ಈ ಸಂಬಂಧ ತಮ್ಮ ಸೊಸೆ ಶಶಿ ಕುಮಾರಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿದ ಜೋಧ್ಪುರ ಕೋರ್ಟ್ ಸೊಸೆ ಶಶಿಕುಮಾರಿ ಅವರ ಸಂಬಳದಿಂದ ಪ್ರತಿ ತಿಂಗಳು ₹20,000 ಕಡಿತಗೊಳಿಸಿ ಈ ಹಣವನ್ನು ಭಗವಾನ್ ಸಿಂಗ್ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ತೀರ್ಪು ನೀಡಿದೆ. ಜೋಧಪುರ ಪೀಠದ ನ್ಯಾಯಮೂರ್ತಿ ಫರ್ಜಾಂದ್ ಅಲಿ ಅವರು, ಅಜ್ಮೀರ್ ಡಿಸ್ಕಾಮ್ಗೆ ಈ ನಿರ್ದೇಶನ ನೀಡಿದ್ದಾರೆ. ಈ ಕಡಿತವು ನವೆಂಬರ್ 1, 2025 ರಿಂದ ಪ್ರಾರಂಭವಾಗಿ ಭಗವಾನ್ ಸಿಂಗ್ ಅವರು ಬದುಕಿರುವವರೆಗೂ ಜಾರಿಯಲ್ಲಿರುತ್ತದೆ. ಈ ಮೂಲಕ ಜೋಧಪುರ ಪೀಠವು ಅಪರೂಪದ ಐತಿಹಾಸಿಕ ತೀರ್ಪು ನೀಡಿದೆ.
ನ್ಯಾಯಾಲಯವು ಅಕ್ಟೋಬರ್ 10 ರಂದು ತೀರ್ಪನ್ನು ಕಾಯ್ದಿರಿಸಿತ್ತು ಮತ್ತು ಅಕ್ಟೋಬರ್ 29 ರಂದು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಖೇರ್ಲಿಯ ನಯಿ ಕಜೋರಿ ಮೊಹಲ್ಲಾ ನಿವಾಸಿ ಭಗವಾನ್ ಸಿಂಗ್ ಸೈನಿ ಅವರ ಮಗ ರಾಜೇಶ್ಕುಮಾರ್ ಅಜ್ಮೀರ್ ಡಿಸ್ಕಾಮ್ನಲ್ಲಿ ತಾಂತ್ರಿಕ ಸಹಾಯಕರಾಗಿದ್ದ ಲೇ 2015 ರ ಸೆಪ್ಟೆಂಬರ್ 15ರಂದು ಕರ್ತವ್ಯದ ಸಮಯದಲ್ಲಿಯೇ ನಿಧನರಾಗಿದ್ದರು. ರಾಜೇಶ್ ಕುಮಾರ್ ಅವರ ಮರಣದ ನಂತರ ಡಿಸ್ಕಾಮ್ ಇಲಾಖೆಯೂ ಸೆಪ್ಟೆಂಬರ್ 21, 2015 ಮತ್ತು ಸೆಪ್ಟೆಂಬರ್ 26, 2015 ರಂದು ಅವರ ತಂದೆ ಭಗವಾನ್ ಸಿಂಗ್ ಅವರಿಗೆ ಅನುಕಂಪದ ನೇಮಕಾತಿಯಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿ ಪತ್ರಗಳನ್ನು ನೀಡಿತು. ಇದೇ ವೇಳೆ ಮೃತ ಉದ್ಯೋಗಿಯ ಪತ್ನಿ ಶಶಿ ಕುಮಾರಿ ಕೂಡ ಅನುಕಂಪದ ಉದ್ಯೋಗದ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು.
ಮಾವನ ಔದಾರ್ಯದಿಂದ ಸೊಸೆಗೆ ಸಿಕ್ತು ಉದ್ಯೋಗ
ಇಲಾಖೆಯೂ ಮೊದಲು ಭಗವಾನ್ ಸಿಂಗ್ ಅವರಿಗೆ ಅನುಕಂಪದ ನೇಮಕಾತಿಯ ಪ್ರಸ್ತಾಪವನ್ನು ನೀಡಿತ್ತು. ಆದರೆ ಅವರು ಉದಾರತೆಯಿಂದ ಹಾಗೂ ಇತರ ಮಿತಿಗಳಿಂದ ಈ ಅನುಕಂಪದ ನೇಮಕಾತಿಯನ್ನು ತಮ್ಮ ಬದಲಿಗೆ ತಮ್ಮ ಸೊಸೆಗೆ ನೀಡಬೇಕೆಂದು ಸ್ವಯಂಪ್ರೇರಣೆಯಿಂದ ಶಿಫಾರಸು ಮಾಡಿದರು. ಈ ಶಿಫಾರಸಿನ ಮೇರೆಗೆ, ಮಾರ್ಚ್ 11, 2016 ರಂದು, ಅಜ್ಮೀರ್ ಡಿಸ್ಕಾಮ್, ಶಶಿ ಕುಮಾರಿ ಅವರನ್ನು ಅನುಕಂಪದ ಆಧಾರದ ಮೇಲೆ ಎಲ್ಡಿಸಿ ಹುದ್ದೆಗೆ ನೇಮಿಸಿತು.
ನೇಮಕಾತಿಯ ಸಮಯದಲ್ಲಿ ಅಕ್ಟೋಬರ್ 19, 2015 ರಂದು ಶಶಿ ಕುಮಾರಿ ಅವರು ಅಫಿಡವಿಟ್ ನೀಡಿದ್ದರು. ಅದರಲ್ಲಿ ಮೂರು ಪ್ರಮುಖ ಭರವಸೆಗಳನ್ನು ನೀಡಿದ್ದರು.. ತಮ್ಮ ಮೃತ ಗಂಡನ ಪೋಷಕರೊಂದಿಗೆ ವಾಸಿಸುತೇನೆ. ಎರಡನೆಯದಾಗಿ, ಅವರ ಕಲ್ಯಾಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಮೂರನೆಯದಾಗಿ, ಅವರು ಮರುಮದುವೆಯಾಗುವುದಿಲ್ಲ ಎಂದು ಅವರು ಅಫಿಡವಿಟ್ ಸಲ್ಲಿಸಿದ್ದರು.
ಆದರೆ ಶಶಿ ಕುಮಾರಿ ನಂತರ ತಮ್ಮ ಅಫಿಡವಿಟ್ಗೆ ವಿರುದ್ಧವಾಗಿ ಗಂಡನ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಹೀಗಾಗಿ ಆಕೆ ಸಲ್ಲಿಸಿದ್ದ ಈ ಅಫಿಡವಿಟ್ ಸುಳ್ಳು ಎಂದು ಅರ್ಜಿದಾರರು ಆರೋಪಿಸಿದ್ದರು. ಹೀಗಾಗಿ ಖೇರ್ಲಿ ಖತುಮಾರ್ ಪುರಸಭೆಯ ಅಧ್ಯಕ್ಷರು ಈ ಬಗ್ಗೆ ತನಿಖಾ ವರದಿ ನೀಡಿದ್ದು, ಶಶಿ ಕುಮಾರಿ ತನ್ನ ಪತಿ ಸಾವನ್ನಪ್ಪಿದ 18 ದಿನಗಳಲ್ಲಿ ತನ್ನ ಅತ್ತೆಯ ಮನೆಯನ್ನು ತೊರೆದು ತನ್ನ ಹೆತ್ತವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಭಗವಾನ್ಸಿಂಗ್ ಅವರಿಗೆ ವಯಸ್ಸಾಗಿದ್ದು, ಯಾವುದೇ ಸ್ವತಂತ್ರ ಆದಾಯದ ಮೂಲಗಳಿಲ್ಲ ಮತ್ತು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸೊಸೆ ಅವರ ಪುತ್ರನ ಉದ್ಯೋಗ ಪಡೆದರು ಆದರೆ ಪತಿಯ ಕುಟುಂಬದ ಆರೈಕೆ ಮಾಡಲಿಲ್ಲ ಎಂದು ಪುರಸಭೆ ಅಧ್ಯಕ್ಷರ ವರದಿಯಲ್ಲಿ ದಾಖಲಿಸಲಾಗಿದೆ.
ಹೀಗಾಗಿ ರಾಜೇಶ್ ಅವರ ತಂದೆ ಜೂನ್ 3, 2017 ರಂದು ಸೂಪರಿಂಟೆಂಡಿಂಗ್ ಎಂಜಿನಿಯರ್ಗೆ ದೂರು ಸಲ್ಲಿಸಿದರು ಮತ್ತು ಡಿಸೆಂಬರ್ 7, 2017 ರಂದು ನೋಂದಾಯಿತ ನೋಟಿಸ್ ಸಹ ಕಳುಹಿಸಿದರು, ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಇದಾದ ನಂತರ, 2018 ರಲ್ಲಿ, ಸೊಸೆ ಶಶಿ ಕುಮಾರಿ ಅವರ ಸಂಬಳದ 50 ಪ್ರತಿಶತವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು.
ಅನುಕಂಪದ ನೇಮಕಾತಿ ಉದ್ಯೋಗ ವಿಧಾನವಲ್ಲ, ಕಲ್ಯಾಣ ಕ್ರಮ : ಹೈಕೋರ್ಟ್
ಓರ್ವ ಸರ್ಕಾರಿ ಉದ್ಯೋಗಿಯ ಸಾವಿನ ನಂತರ ಆತನ ಕುಟುಂಬದ ಸದಸ್ಯರಲ್ಲಿ ಯಾರಿಗಾದರೊಬ್ಬರಿಗೆ ಸಿಗುವ ಉದ್ಯೋಗವೂ ಸ್ಥಾಪಿತ ಹಕ್ಕಲ್ಲ, ಬದಲಾಗಿ ಮೃತ ಸರ್ಕಾರಿ ನೌಕರನ ಕುಟುಂಬದ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಮಾಡುವ ಒಂದು ಕೃಪೆಯ ಕಾರ್ಯವಾಗಿದೆ ಎಂದು ನ್ಯಾಯಮೂರ್ತಿ ಫರ್ಜಾಂದ್ ಅಲಿ ತಮ್ಮ ವಿವರವಾದ ಆದೇಶದಲ್ಲಿ ಹೇಳಿದ್ದಾರೆ. ಇದು ಕಲ್ಯಾಣ ಕ್ರಮವಾಗಿದೆ. ಉದ್ಯೋಗದ ವಿಧಾನವಲ್ಲ ಎಂದು ಅವರು ಹೇಳಿದ್ದಾರೆ
ಶಶಿ ಕುಮಾರಿ ಅವರ ವೈಯಕ್ತಿಕ ಅರ್ಹತೆ, ಸಾಮರ್ಥ್ಯ ಅಥವಾ ಅರ್ಹತೆಯ ಆಧಾರದ ಮೇಲೆ ಈ ನೇಮಕಾತಿ ಅವರಿಗೆ ಸಿಕ್ಕಿದ್ದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ನೇಮಕಾತಿಗೆ ಯಾವುದೇ ಜಾಹೀರಾತು ನೀಡಲಾಗಿಲ್ಲ, ಯಾವುದೇ ಸ್ಪರ್ಧಾತ್ಮಕ ಆಯ್ಕೆ ನಡೆದಿಲ್ಲ, ಅಥವಾ ಅವರು ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನಕ್ಕೆ ಹಾಜರಾಗಿಲ್ಲ. ಇದು ತನ್ನ ಮೃತ ಉದ್ಯೋಗಿಗಳ ಅವಲಂಬಿತರನ್ನು ರಕ್ಷಿಸಲು ಮತ್ತು ಸಹಾಯ ಮಾಡಲು ರಾಜ್ಯವು ಮಾಡಿದ ಕರುಣೆಯ ಕೆಲಸವಷ್ಟೇ ಎಂದು ನ್ಯಾಯಾಧೀಶರು ಹೇಳುತ್ತಾ ಈ ಐತಿಹಾಸಿಕ ತೀರ್ಪು ನೀಡಿದ್ದಾರೆ.
ಮೃತನ ಕುಟುಂಬ ಎಂದರೆ ವಿಧವೆ ಪತ್ನಿ ಮಾತ್ರವಲ್ಲ
ಮೃತನ ಕುಟುಂಬ ಎಂದರೆ ಕೇವಲ ವಿಧವೆ ಹೆಂಡತಿ ಮಾತ್ರ ಅಲ್ಲ, ಇದು ಮೃತ ಉದ್ಯೋಗಿಯ ಪೋಷಕರು, ಹೆಂಡತಿ ಮತ್ತು ಮಕ್ಕಳಂತಹ ಅವಲಂಬಿತರಾದ ಎಲ್ಲರನ್ನೂ ಒಳಗೊಂಡಿದೆ. ಅವರೆಲ್ಲರೂ ಒಟ್ಟಾಗಿ ಜಂಟಿ ಕುಟುಂಬ ಘಟಕವನ್ನು ರೂಪಿಸುತ್ತಾರೆ. ಅಂತಹ ಕುಟುಂಬದ ಸದಸ್ಯರಿಗೆ ಅನುಕಂಪದ ನೇಮಕಾತಿಯ ಪ್ರಯೋಜನವನ್ನು ನೀಡಿದಾಗ, ಅದನ್ನು ವೈಯಕ್ತಿಕ ಸಾಮರ್ಥ್ಯದಲ್ಲಿ ನೀಡಲಾಗುವುದಿಲ್ಲ, ಬದಲಾಗಿ ಇಡೀ ಕುಟುಂಬದ ಪ್ರತಿನಿಧಿಯಾಗಿ ನೀಡಲಾಗುತ್ತದೆ. ಆದ್ದರಿಂದ, ಉಳಿದಿರುವ ಇತರ ಅವಲಂಬಿತರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಅವರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ನೈತಿಕ ಮತ್ತು ಕಾನೂನು ಜವಾಬ್ದಾರಿಯೊಂದಿಗೆ ಇದು ಬರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಪ್ರಾಮಿಸರಿ ಎಸ್ಟೊಪೆಲ್ ( promissory estoppel) ಸಿದ್ಧಾಂತವು ಸಂಪೂರ್ಣವಾಗಿ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಶಶಿ ಕುಮಾರಿ ನಿರ್ದಿಷ್ಟ ಭರವಸೆ ನೀಡುವ ಮೂಲಕ ಪ್ರಯೋಜನವನ್ನು ಪಡೆದರು. ಈಗ ಅವರು ತಾವು ನೀಡಿದ ಭರವಸೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಶೇ.70 ರಷ್ಟು ಪರಿಹಾರ ಪಡೆದಿದ್ದ ಸೊಸೆ ಮರು ಮದುವೆಯಾಗಿದ್ದಳು
ಪತಿಯ ಕೆಲಸ ಪಡೆದ ನಂತರ, ಶಶಿ ಕುಮಾರಿ ಭವಿಷ್ಯ ನಿಧಿ ಮತ್ತು ಪರಿಹಾರ ಮೊತ್ತದ ಸರಿಸುಮಾರು ಶೇ. 70 ಪ್ರತಿಶತವನ್ನು ಪಡೆದರು. ಇದರ ಹೊರತಾಗಿಯೂ, ಅವರು ತಮ್ಮ ಅತ್ತೆ ಮಾವಂದಿರನ್ನು ತ್ಯಜಿಸಿ ಬೇರೆಡೆ ವಾಸಿಸುತ್ತಿದ್ದಾರೆ. ಬರೀ ಇಷ್ಟೇ ಅಲ್ಲ ಅವರು ಮರು ಮದುವೆಯಾಗಿದ್ದಾರೆ. ಇದರಿಂದಾಗಿ ಅವರ ಹಿಂದಿನ ಅತ್ತೆ ಮಾವಂದಿರನ್ನು ನಿರ್ವಹಿಸುವ ಕಾನೂನುಬದ್ಧ ಕರ್ತವ್ಯ ನಿಂತುಹೋಗಿದೆ ಎಂದು ಆಕೆಯ ವಕೀಲರು ವಾದಿಸಿದರು.
ನ್ಯಾಯಾಲಯದ ತೀರ್ಪಿನ ಪ್ರತಿಯೊಂದು ಅಂಶವೂ ಅರ್ಜಿದಾರರ ವಯಸ್ಸು, ಅವರ ವೈದ್ಯಕೀಯ ಸ್ಥಿತಿ, ಮೃತ ಮಗನ ಮೇಲಿನ ಅವರ ಸಾಬೀತಾದ ಅವಲಂಬನೆ ಮತ್ತು ಶಶಿ ಕುಮಾರಿ ಅವರ ಅಫಿಡವಿಟ್ನಿಂದ ಉಂಟಾಗುವ ನೈತಿಕ ಮತ್ತು ಸಮಾನ ಬಾಧ್ಯತೆ ಸೇರಿದಂತೆ ಎಲ್ಲಾ ಸಂಗತಿಗಳನ್ನು ಪರಿಗಣಿಸಿದ ನ್ಯಾಯಾಲಯವು, ನವೆಂಬರ್ 1, 2025 ರಿಂದ ಪ್ರತಿವಾದಿ ಇಲಾಖೆಯು ಶಶಿ ಕುಮಾರಿ ಅವರ ಸಂಬಳದಿಂದ ತಿಂಗಳಿಗೆ 20,000 ರೂ.ಗಳ ಕಡಿತವನ್ನು ಖಚಿತಪಡಿಸುತ್ತದೆ ಎಂದು ನಿರ್ಧರಿಸಿತು. ಈ ಮೊತ್ತವನ್ನು ಅರ್ಜಿದಾರರ ನಿರ್ವಹಣೆಗಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವ್ಯವಸ್ಥೆಯು ಅರ್ಜಿದಾರರ ಜೀವಿತಾವಧಿಯಲ್ಲಿ ಅಥವಾ ಸಕ್ಷಮ ಪ್ರಾಧಿಕಾರದಿಂದ ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ.
ಮೃತ ಪತಿಯ ಕೆಲಸ ಗಿಟ್ಟಿಸಿ ತವರು ಸೇರಿದ ಸೊಸೆ : ಮಾವನಿಗೆ ವೇತನದಲ್ಲಿ ಪಾಲು ನೀಡಲು ಹೈಕೋರ್ಟ್ ಸೂಚನೆ
WhatsApp Group
Join Now